ಕೆಸಿಇಟಿ ವಿವಾದ: ಕೃಪಾನಿಧಿ ಕಾಲೇಜು ಘಟನೆಯನ್ನು ಖಂಡಿಸಿದ ಸಚಿವ ದಿನೇಶ್ ಗುಂಡೂರಾವ್, ಕಠಿಣ ಕ್ರಮದ ಭರವಸೆ
ಬೆಂಗಳೂರು, ಏಪ್ರಿಲ್ 25, 2026: ಕೆಸಿಇಟಿ ಪರೀಕ್ಷೆಯ ವೇಳೆ ಕೃಪಾನಿಧಿ ಕಾಲೇಜಿನಲ್ಲಿ ನಡೆದಿರುವ ಘಟನೆಯನ್ನು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತೀವ್ರವಾಗಿ ಖಂಡಿಸಿದ್ದು, ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ಘಟನೆ ತಮ್ಮ ಗಮನಕ್ಕೆ ಬಂದಿದ್ದು, ಈಗಾಗಲೇ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ಕಾನೂನಿನ ಪ್ರಕಾರ ಪಾರದರ್ಶಕವಾಗಿ ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿ, ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಪಡಬೇಕಿಲ್ಲ ಎಂದು ಮನವಿ ಮಾಡಿದ್ದಾರೆ.
ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಕಿವಿಯೋಲೆ, ಬಳೆ, ಹಿಜಾಬ್ ಅಥವಾ ಜನಿವಾರ ತೆಗೆಸುವುದು ಹಾಗೂ ಉದ್ದನೆಯ ತೋಳಿಗೆ ಕತ್ತರಿ ಹಾಕುವುದು ಎಂಬಂತಹ ವರ್ತನೆಗಳನ್ನು ಅವರು “ಅಮಾನವೀಯ ಮತ್ತು ಖಂಡನೀಯ” ಎಂದು ವಿವರಿಸಿದ್ದಾರೆ. ಇಂತಹ ನಡೆ ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವುದಾಗಿ ಅವರು ಹೇಳಿದ್ದಾರೆ.
“ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳ ಜ್ಞಾನವನ್ನು ಅಳೆಯುವ ಸ್ಥಳಗಳಾಗಬೇಕು, ಅವರ ಆತ್ಮಗೌರವಕ್ಕೆ ಧಕ್ಕೆ ತರುವ ತಾಣಗಳಾಗಬಾರದು,” ಎಂದು ಅವರು ಹೇಳಿದ್ದಾರೆ. ಇಂತಹ ಘಟನೆಗಳು ರಾಜ್ಯದಲ್ಲಿ ಮರುಕಳಿಸದಂತೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಲಿದೆ ಎಂದರು.
ಘಟನೆಯ ಪರಿಣಾಮವಾಗಿ ವಿದ್ಯಾರ್ಥಿಗಳು ಧೈರ್ಯ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದ ಅವರು, ಓದು ಮತ್ತು ಪರಿಶ್ರಮವೇ ವಿದ್ಯಾರ್ಥಿ ಜೀವನದ ಯಶಸ್ಸಿನ ಮಾರ್ಗ ಎಂದು ಹೇಳಿದರು.
ಸರ್ಕಾರ ಸಂಪೂರ್ಣವಾಗಿ ವಿದ್ಯಾರ್ಥಿಗಳ ಬೆಂಬಲದಲ್ಲಿದೆ ಎಂದು ತಿಳಿಸಿ, ಅವರು ಧೈರ್ಯದಿಂದ ಮತ್ತು ನಿಶ್ಚಿಂತೆಯಿಂದ ಪರೀಕ್ಷೆ ಎದುರಿಸಿ ಯಶಸ್ವಿಯಾಗಬೇಕು ಎಂದು ಕರೆ ನೀಡಿದ್ದಾರೆ.
