Home Uncategorized ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ: ಸಿಎಂ ಬೊಮ್ಮಾಯಿ ವಿರುದ್ಧ ವಿಪಕ್ಷಗಳು, ಕನ್ನಡ ಸಂಘಟನೆಗಳ ಕಿಡಿ

ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ: ಸಿಎಂ ಬೊಮ್ಮಾಯಿ ವಿರುದ್ಧ ವಿಪಕ್ಷಗಳು, ಕನ್ನಡ ಸಂಘಟನೆಗಳ ಕಿಡಿ

16
0

ಗಣರಾಜ್ಯೋತ್ಸವ ಪರೇಡ್‌ಗೆ ರಾಜ್ಯದ ಸ್ತಬ್ಧಚಿತ್ರಕ್ಕೆ ಅನುಮತಿ ಸಿಗದಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಿರೋಧ ಪಕ್ಷಗಳು ಹಾಗೂ ಕನ್ನಡ ಪರ ಸಂಘಟನೆಗಳು ತೀವ್ರವಾಗಿ ಕಿಡಿಕಾರಿವೆ. ಬೆಂಗಳೂರು: ಗಣರಾಜ್ಯೋತ್ಸವ ಪರೇಡ್‌ಗೆ ರಾಜ್ಯದ ಸ್ತಬ್ಧಚಿತ್ರಕ್ಕೆ ಅನುಮತಿ ಸಿಗದಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಿರೋಧ ಪಕ್ಷಗಳು ಹಾಗೂ ಕನ್ನಡ ಪರ ಸಂಘಟನೆಗಳು ತೀವ್ರವಾಗಿ ಕಿಡಿಕಾರಿವೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಕರ್ನಾಟಕ ಈ ವರ್ಷ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸುತ್ತಿಲ್ಲ ಎನ್ನಲಾಗಿದ್ದು, ಇದು ದುರಾದೃಷ್ಟಕರ ಸಂಗತಿ. ರಾಜ್ಯದ ಹೆಮ್ಮೆ ಹಾಗೂ ಹಿತಾಸಕ್ತಿ ಕಾಪಾಡುವಲ್ಲಿ ರಾಜ್ಯ ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆಂದು ಹೇಳಿದ್ದಾರೆ.

ಈ ವರ್ಷದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ಥಬ್ದಚಿತ್ರಕ್ಕೆ ಬಿಜೆಪಿ ಸರ್ಕಾರ ಅವಕಾಶ ನಿರಾಕರಿಸಿರುವುದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಮಾಡಿರುವ ಅವಮಾನ. ಕನ್ನಡಿಗರೆಲ್ಲರೂ ಇದನ್ನು ಒಕ್ಕೊರಲಿನಿಂದ ಖಂಡಿಸಬೇಕು. ಸತತ ಹದಿಮೂರು ವರ್ಷಗಳ ಕಾಲ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ಥಬ್ದ ಚಿತ್ರಗಳು ನಮ್ಮ ಇತಿಹಾಸ ಸಂಸ್ಕೃತಿ ಮತ್ತು ಪ್ರಕೃತಿಯ ಹಿರಿಮೆಗಳನ್ನು ಪ್ರದರ್ಶಿಸಿ ಇಡೀ ದೇಶದ ಶ್ಲಾಘನೆಗೆ ಪಾತ್ರವಾಗಿದೆ. ಇದೇ ಮೊದಲ ಬಾರಿ ಬಿಜೆಪಿ  ಈ ಗೌರವಕ್ಕೆ ಧಕ್ಕೆ ತಂದಿದೆ. ಮಾತು ಮಾತಿಗೆ ಡಬಲ್ ಎಂಜಿನ್ ಸರ್ಕಾರ ಎಂದು ರಾಜ್ಯದ ಬಿಜೆಪಿ ನಾಯಕರು ಎದೆ ಬಡಿದುಕೊಳ್ಳುತ್ತಿದ್ದಾರೆ. ರಾಜ್ಯದ ಹಕ್ಕು ಮತ್ತು ಗೌರವದ ಪ್ರಶ್ನೆ ಎದುರಾದಾಗ ಮಾತ್ರ ಕರ್ನಾಟಕದ ಎಂಜಿನ್ ಗುಜರಿ ಆಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯದ ಸ್ತಬ್ಧ ಚಿತ್ರವನ್ನು ತಿರಸ್ಕರಿಸುವುದನ್ನು ರಾಜ್ಯದ ಬಿಜೆಪಿ ಸಂಸದರು ವಿರೋಧಿಸುತ್ತಾರೆಯೇ?… ಅಸಮರ್ಥ ಮತ್ತು ದುರ್ಬಲ ಸಿಎಂ ಬೊಮ್ಮಾಯಿ ಮತ್ತು ಅವರ ಸಂಪುಟದ ಮಂತ್ರಿಗಳು ಶೇ.40 ಕಮಿಷನ್ ಮೂಲಕ ಸರ್ಕಾರಿ ಸಂಪನ್ಮೂಲಗಳನ್ನು ಲೂಟಿ ಮಾಡುವ ಬಗ್ಗೆ ಚಿಂತಿತರಾಗಿದ್ದಾರೆ. ಥೀಮ್ ಬಗ್ಗೆ ಸ್ವಲ್ಪ ಹೆಚ್ಚು ಚಿಂತಿಸಿದ್ದರೆ, ಕರ್ನಾಟಕ ಈ ಬಾರಿಯ ಪರೇಡ್ ನಲ್ಲಿ ಸ್ತಬ್ಧ ಚಿತ್ರ ಪ್ರದರ್ಶಿಸಲು ಅನುಮತಿ ಪಡೆದುಕೊಳ್ಳುತ್ತಿತ್ತು. ರಾಜ್ಯದ ಬಿಜೆಪಿ ನಾಯಕರು ನಮ್ಮ ರಾಜ್ಯದಲ್ಲಿ ಕೇವಲ ಗಲಾಟೆ ಮಾಡುವುದಕ್ಕೆ ಹೆಸರಾದವರಾಗಿದ್ದು, ಅವರ ಹೈಕಮಾಂಡ್ ಮುಂದೆ ಹೇಡಿಗಳಾಗಿದ್ದಾರೆಂದಿದ್ದಾರೆ.

ಈ ನಡುವೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸ್ಪಷ್ಟನೆ ನೀಡಿದ್ದು, ಕಳೆದ ಎಂಟು ವರ್ಷಗಳಿಂದ ಕೈಬಿಟ್ಟಿರುವ ಕೆಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವಕಾಶ ನೀಡಲು ರಕ್ಷಣಾ ಸಚಿವಾಲಯ ಬಯಸಿದ್ದರಿಂದ ಈ ಬಾರಿ ಕರ್ನಾಟಕಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಿದೆ.

ಏತನ್ಮಧ್ಯೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ತಜ್ಞರು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ. ಆದರೆ, ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಸೇರುವ ಕುರಿತು ಪ್ರಯತ್ನ ನಡೆಸುತ್ತೇವೆಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here