Home Uncategorized ಪ್ಯಾನ್​ ಇಂಡಿಯಾ ಚಲನಚಿತ್ರಗಳ ಪರಿಕಲ್ಪನೆಯಲ್ಲಿ ನನಗೆ ನಂಬಿಕೆ ಇಲ್ಲ: ರಿಷಬ್ ಶೆಟ್ಟಿ

ಪ್ಯಾನ್​ ಇಂಡಿಯಾ ಚಲನಚಿತ್ರಗಳ ಪರಿಕಲ್ಪನೆಯಲ್ಲಿ ನನಗೆ ನಂಬಿಕೆ ಇಲ್ಲ: ರಿಷಬ್ ಶೆಟ್ಟಿ

12
0

ಪ್ಯಾನ್-ಇಂಡಿಯಾ ಚಲನಚಿತ್ರಗಳ ಪರಿಕಲ್ಪನೆಯಲ್ಲಿ ನನಗೆ ನಂಬಿಕೆ ಇಲ್ಲ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿಪ್ರಾಯ ಪಟ್ಟರು. ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ದಲ್ಲಿ ‘ಸಾಂಸ್ಕೃತಿಕ ವೈವಿಧ್ಯವನ್ನು ಪ್ರತಿನಿಧಿಸುವುದು ಮತ್ತು ಹೊಸ ಮಾರುಕಟ್ಟೆಗಳನ್ನು ಗುರುತಿಸುವುದು’ ಎಂಬ ವಿಷಯದ ಕುರಿತು ಟಿ. ತ್ಯಾಗರಾಜನ್ ಅವರೊಂದಿಗಿನ ಸಂವಾದದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡರು. ಭಾರತವು ಕೃಷಿ ಪ್ರಧಾನ ದೇಶವಾಗಿದೆ. ನಮ್ಮ ಆಚರಣೆಗಳು, ನಂಬಿಕೆಗಳು, ಜೀವನ ವಿಧಾನಗಳು ಕೃಷಿಯನ್ನು ಆಧರಿಸಿವೆ. ಮಾನವ ಮತ್ತು ಪ್ರಕೃತಿಯ ನಡುವಿನ ಸಂಘರ್ಷವನ್ನು ನಾನು ‘ಕಾಂತಾರ’ ಚಿತ್ರದಲ್ಲಿ ತೋರಿಸಿದ್ದೇನೆ. ಚಲನಚಿತ್ರವು ಸ್ಥಳೀಯವಾಗಿದ್ದು ತನ್ನ ನೆಲದ ಸೊಗಡನ್ನು ಹೆಚ್ಚು ಬಿಂಬಿಸಿದರೆ ಅದು ಜಾಗತಿಕ ಮಟ್ಟದಲ್ಲಿ ಜನರಿಗೆ ಹೆಚ್ಚು ಆಪ್ತವಾಗುತ್ತದೆ ಎಂಬ ಮಂತ್ರದಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ ಎಂದು ಹೇಳಿದರು.

‘ಕಾಂತಾರ’ ಚಿತ್ರದ ಮೂಲ ಕಥೆ ಮಾನವರು ಮತ್ತು ಪ್ರಕೃತಿಯ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಸೆರೆಹಿಡಿಯುವುದಾಗಿದೆ. ಇದು ಪ್ರಕೃತಿ, ಸಂಸ್ಕೃತಿ ಮತ್ತು ಕಾದಂಬರಿಗಳ ಸಮ್ಮಿಲನವಾಗಿದೆ. ನಮ್ಮ ಸಂಸ್ಕೃತಿಗಳು ಮತ್ತು ನಂಬಿಕೆ ವ್ಯವಸ್ಥೆಗಳು ಪ್ರತಿಯೊಬ್ಬರಲ್ಲೂ ಬೇರೂರಿರುತ್ತವೆ. ತಾವು ಹುಟ್ಟೂರಿನಲ್ಲಿ ಕೇಳಿದ ಜನಪದ ಕಥೆಗಳು ಮತ್ತು ತುಳುನಾಡು ಸಂಸ್ಕೃತಿಯಲ್ಲಿ ತಮ್ಮ ಬಾಲ್ಯದ ಅನುಭವಗಳನ್ನೇ ‘ಕಾಂತಾರ’ ಚಿತ್ರದಲ್ಲಿ ತಂದಿರುವುದಾಗಿ ಹೇಳಿದರು. ಸಿನಿಮಾ ಎಷ್ಟು ನೈಜತೆಯಿಂದ ಕೂಡಿಬರಬೇಕೋ ಅದೇ ರೀತಿ ಹಿನ್ನೆಲೆ ಸಂಗೀತ ಸಹಜವಾಗಿಯೇ ಸಂಸ್ಕೃತಿಯ ದಾರಿದೀಪವಾಗಬೇಕು ಎಂದು ರಿಷಬ್ ಶೆಟ್ಟಿ ಬಯಸಿದ್ದರಂತೆ.

ಸಂವಾದ ವೇಳೆ ತಮ್ಮ ಆಸಕ್ತಿಗಳ ಬಗ್ಗೆ ಹೇಳಿಕೊಂಡ ರಿಷಬ್ ಶೆಟ್ಟಿ, ತಾವು ಬಾಲ್ಯದಿಂದಲೂ ಯಕ್ಷಗಾನ ಕಲಾವಿದರಾಗಿದ್ದರಂತೆ. ಸಿನಿಮಾ ಉದ್ಯಮಕ್ಕೆ ಕಾಲಿಟ್ಟಾಗಿನಿಂದ ಕರಾವಳಿ, ತುಳುನಾಡಿನ ಕಂಬಳ, ದೈವಾರಾಧನೆ, ಭೂತಕೋಲ ಸಂಸ್ಕೃತಿಯನ್ನು ಚಲನಚಿತ್ರಗಳಲ್ಲಿ ಪ್ರದರ್ಶಿಸಲು ಉತ್ಸುಕರಾಗಿದ್ದರಂತೆ. ತುಳುನಾಡಿನಲ್ಲಿ ದೈವಾರಾಧನೆ ಸಂದರ್ಭದಲ್ಲಿ ಎಲ್ಲ ಜಾತಿಯವರನ್ನು ಸಮಾನರಂತೆ ಪರಿಗಣಿಸುತ್ತೇವೆ. ದೈವಾರಾಧನೆ ಪ್ರಕೃತಿ ಮತ್ತು ಮಾನವನ ನಡುವಿನ ಸೇತುವೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

‘ಕಾಂತಾರ’ ಚಿತ್ರದಲ್ಲಿನ ಶಿವನ ಪಾತ್ರದ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ, ತಮಗೆ ಬಾಲ್ಯದಿಂದಲೂ ಅಂತಹ ಪಾತ್ರವನ್ನು ನಿರ್ವಹಿಸುವ ಉತ್ಸಾಹವಿತ್ತು ಎಂದರು. ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್ ಸಮಯದಲ್ಲಿ ‘ಕಾಂತಾರ’ ಚಿತ್ರದ ಕಲ್ಪನೆ ಹುಟ್ಟಿಕೊಂಡಿತು. ಇಡೀ ಚಿತ್ರವನ್ನು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ತಮ್ಮ ತವರು ಕುಂದಾಪುರದಲ್ಲಿ ಚಿತ್ರೀಕರಿಸಿದ್ದಾರೆ. ಚಿತ್ರತಂಡದ ಆಯ್ಕೆ ಬಗ್ಗೆ ಮಾತನಾಡಿದ ಅವರು ಹೆಚ್ಚಿನವರು ಚಿತ್ರದಲ್ಲಿ ಹೊಸಬರು ಮತ್ತು ಮೂಲತಃ ಬೆಂಗಳೂರು ಮತ್ತು ಮಂಗಳೂರಿನ ರಂಗಭೂಮಿ ಕಲಾವಿದರು ಎಂದರು.

‘ಕಾಂತಾರ’ ಚಿತ್ರದಲ್ಲಿ ಕಂಬಳ ಓಡಿಸಲು, ಅದನ್ನು ಸೊಗಸಾಗಿ ಪ್ರದರ್ಶಿಸಲು ಪ್ರತಿದಿನ ಕಂಬಳವನ್ನು ಅಭ್ಯಾಸ ಮಾಡುತ್ತಿದ್ದೆ ಎನ್ನುತ್ತಾರೆ ರಿಷಬ್ ಶೆಟ್ಟಿ. ನಂಬಿಕೆ, ಆಚರಣೆಗಳು ಆಯಾ ಭಾಗದ ಜನರ ಹೃದಯಕ್ಕೆ ಹತ್ತಿರವಾಗಿರುವುದರಿಂದ ಯಾವುದೇ ಸಾಂಸ್ಕೃತಿಕ ಆಚರಣೆಗಳನ್ನು ಅಪಹಾಸ್ಯ ಮಾಡಬೇಡಿ ಎಂದು ಅವರು ವಿನಂತಿ ಮಾಡಿಕೊಂಡರು.

‘ಕಾಂತಾರ’ ಚಿತ್ರದ ಅಂತಿಮ ಕ್ಲೈಮ್ಯಾಕ್ಸ್‌ ದೃಶ್ಯ ಅವರ ಉಸಿರು ಹಿಡಿದಿಟ್ಟುಕೊಳ್ಳುವಂತಹ ಅಭಿನಯವನ್ನು ಮೆಚ್ಚದವರು, ಕೊಂಡಾಡದವರು ಇರಲಿಕ್ಕಿಲ್ಲ. ಆ ಬಗ್ಗೆ ಮಾತನಾಡಿದ ಅವರು, ಕ್ಲೈಮ್ಯಾಕ್ಸ್ ದೃಶ್ಯ ವಿಧಿರೂಪವಾಗಿದ್ದು, ಅದು ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಪ್ರಕೃತಿ, ಮನುಷ್ಯ ಮತ್ತು ಸಾಮರಸ್ಯದ ಸಹಬಾಳ್ವೆ ಇಂದಿನ ಅಗತ್ಯವಾಗಿದೆ ಎಂಬ ಸಂದೇಶ ಸಿನಿಮಾದಲ್ಲಿದೆ ಎಂದರು.

ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಅವರು ಅನೇಕ ಚಲನಚಿತ್ರಗಳನ್ನು ನಿರ್ದೇಶಿಸಿ, ನಿರ್ಮಾಣ ಮಾಡಿ ಯಶಸ್ಸು ಕಂಡವರು. ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’, ‘ಕಥಾ ಸಂಗಮ’, ‘ರಿಕ್ಕಿ’ ಮುಂತಾದ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈ’ ಚಿತ್ರ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಕ್ಕಳ ಚಲನಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here