Home Uncategorized ಫಲವತ್ತಾದ 22 ಎಕರೆ ಜಮೀನು ಸ್ವಾಧೀನ, 39 ರೈತಾಪಿ ಜನರಿಗೆ ನೌಕರಿ ಕೊಡಬೇಕಿದೆ: ಆದರೆ 12...

ಫಲವತ್ತಾದ 22 ಎಕರೆ ಜಮೀನು ಸ್ವಾಧೀನ, 39 ರೈತಾಪಿ ಜನರಿಗೆ ನೌಕರಿ ಕೊಡಬೇಕಿದೆ: ಆದರೆ 12 ವರ್ಷವಾದರೂ ಸರ್ಕಾರ ಸುಮ್ಮನೇ ಕುಳಿತಿದೆ!

18
0

ಅದು ಆ ಭಾಗದ ಕನಸಿನ ಯೋಜನೆ. ಯೋಜನೆ ಪ್ರಾರಂಭ ಆಗಿ ದಶಕಗಳೇ ಕಳೆದ್ರೂ ಅದಿನ್ನೂ ಪೂರ್ಣಗೊಂಡಿಲ್ಲ. ಈ ಮಧ್ಯೆ ಯೋಜನೆಗಾಗಿ ಜಮೀನು ಕಳೆದುಕೊಂಡವರಿಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ನ್ಯಾಯಕ್ಕಾಗಿ ಆ ಜನ ವಿಭಿನ್ನ ಹೋರಾಟ ನಡೆಸಿದರು. ನ್ಯಾಯ ಕೊಡಿಸುವಂತೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ್ರು.

ರೈಲ್ವೆ ಹಳಿ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ರೈತರು. ರೈತರನ್ನು ಸಮಾಧಾನ ಪಡಿಸುವ ಅನಿವಾರ್ಯತೆಗೆ ಸಿಲುಕಿದ ಪೊಲೀಸರು ಹಾಗೂ ಅಧಿಕಾರಿಗಳು. ಅಂದ ಹಾಗೆ ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬಾಗಲಕೋಟೆ ಸಮೀಪದ ಸೀಗಿಕೇರಿ ಸಮೀಪದ ನವನಗರದ ರೈಲ್ವೆ ನಿಲ್ದಾಣ. ಹೀಗೆ ಪ್ರತಿಭಟನೆಗೆ ಕುಳಿತಿರುವ ಇವರೆಲ್ಲ ಸೀಗಿಕೇರಿ ಗ್ರಾಮದ ರೈತರು. 2010 ರಲ್ಲಿ ಕುಡಚಿ-ಬಾಗಲಕೋಟೆ ರೈಲ್ವೆ ಯೋಜನೆಗಾಗಿ ಫಲವತ್ತಾದ ಭೂಮಿಗಳನ್ನು ಸರ್ಕಾರ ಭೂ ಸ್ವಾಧೀನ ಮಾಡಿಕೊಂಡಿತ್ತು.

ಈ ವೇಳೆ ಯೋಜನೆಗೆ ಭೂಮಿ ನೀಡಿದ ರೈತ ಕುಟುಂಬಗಳಿಗೆ ತಲಾ ಒಬ್ಬರಿಗೆ ರೈಲ್ವೆ ಇಲಾಖೆಯಲ್ಲಿ ಡಿ ದರ್ಜೆ ನೌಕರಿ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಯೋಜನೆ ಪ್ರಾರಂಭ ಆಗಿ 12 ವರ್ಷ ಕಳೆದ್ರೂ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ನೌಕರಿ‌ ನೀಡಿಲ್ಲ. ಹೀಗಾಗಿ ನಿನ್ನೆ ಗುರುವಾರ ರೈಲ್ವೆ ಹಳಿ ಮೇಲೆ, ರೈತರು ಅನಿವಾರ್ಯವಾಗಿ ಹೋರಾಟ ಮಾಡಿದರು. ಅಲ್ಲದೇ ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ವಿರುದ್ಧ ಘೋಷಣೆ ಕೂಗಿದರು.

12 ವರ್ಷಗಳ ಹಿಂದೆಯೇ ಭೂಮಿಗಳನ್ನು ಕಳೆದುಕೊಂಡಿದ್ದೇವೆ. ನಮಗೆ ನೌಕರಿ ನೀಡುವ ಭರವಸೆ ನೀಡಿದ್ದ ಸರ್ಕಾರ ಇನ್ನೂ ನಮಗೆ ನೌಕರಿ ನೀಡಿಲ್ಲ. ಜಮೀನು ಕಳೆದುಕೊಂಡು ಬೀದಿಗೆ ಬಂದಿದ್ದು, ಕುಟುಂಬದ ಆದಾಯ ಕುಸಿದಿದೆ. ಶೀಘ್ರವೇ ನೌಕರಿ ನೀಡಬೇಕು. ಅದರಿಂದಾಗಿ ನಮ್ಮ ಕುಟುಂಬದ ಆದಾಯವೂ ಬರುತ್ತದೆ. ನಮ್ಮ ಬೇಡಿಕೆ ಬೇಗ ಈಡೇರದೆ ಇದ್ರೆ ಉಗ್ರ ಹೋರಾಟ ಮಾಡುವುದಾಗಿ ಸಂತ್ರಸ್ತ ರೈತರಾದ ದುರಗಪ್ಪ ಕಟ್ಟಿಮನಿ ಎಚ್ಚರಿಕೆ ನೀಡಿದರು.

ಏನಿದು ಯೋಜನೆ ಅಂದರೆ…

ಏನಿದು ಯೋಜನೆ ಅಂದರೆ… ಕುಡಚಿ-ಬಾಗಲಕೋಟೆ ಮಧ್ಯೆ ಸುಮಾರು 142 ಕಿಮೀ ದೂರದ ರೈಲ್ವೆ ಹಳಿ ಯೋಜನೆ ಇದಾಗಿದೆ. ಯೋಜನೆಗಾಗಿ ರೈಲ್ವೆ ಇಲಾಖೆ ಸಾವಿರಾರು ಎಕರೆ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡಿದೆ. ಆದರೆ ಯೋಜನೆ 2010 ರಲ್ಲಿಯೇ ಪ್ರಾರಂಭ ಆಗಿದ್ದರೂ ಸರ್ಕಾರದ ನಿರ್ಲಕ್ಷದಿಂದ 12 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಸದ್ಯ ಕುಡಚಿ ಹಾಗೂ ಬಾಗಲಕೋಟೆ ಮಧ್ಯದ ರೈಲ್ವೆ ಯೋಜನೆ ಕೇವಲ 33 ಕಿ.ಮೀ. ದೂರದವರೆಗೆ ಮಾತ್ರ ಹಳಿ ಜೋಡಣೆ ಪೂರ್ಣಗೊಂಡು, ಟ್ರಯಲ್ ಕೂಡಾ ಮುಗಿದಿದೆ.

22 ಎಕರೆ ಜಮೀನು ಸ್ವಾಧೀನ, ಒಟ್ಟು 39 ಜನರಿಗೆ ನೌಕರಿ ಸಿಗಬೇಕಿದೆ:

ಇನ್ನುಳಿದ 129 ಕಿ.ಮೀ ದೂರದ ಹಳಿ ಜೋಡಣೆ ಈವರೆಗೂ ಮುಗಿದಿಲ್ಲ. ಹಲವು ತಾಂತ್ರಿಕ ಸಮಸ್ಯೆಗಳು ಇವೆ. ಇತ್ತ ಸೀಗಿಕೇರಿ ಗ್ರಾಮದ ಈ ರೈತರ 22 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಒಟ್ಟು 39 ಜನರಿಗೆ ನೌಕರಿ ಸಿಗಬೇಕಿದೆ. ಈ ನಡುವೆ ಯೋಜನೆಗಾಗಿ ಭೂಮಿ ಕಳೆದುಕೊಂಡ ಸೀಗಿಕೇರಿ ಗ್ರಾಮದ ರೈತರು ಪ್ರತಿಭಟನೆ ಸ್ಥಳಕ್ಕೆ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಪ್ರತಿಭಟನೆ ನಿರತ ರೈತರ ಮನವೊಲಿಕೆಗೆ ಪ್ರಯತ್ನ ಮಾಡಿದರು.

ಈ ವೇಳೆ ಪ್ರತಿಭಟನಾನಿರತ ರೈತರಿಗೆ ಶೀಘ್ರ ಸಮಸ್ಯೆ ಬಗೆಹರಿಸೋದಾಗಿ ತಿಳಿಸಿದ್ರು. ಹೀಗಾಗಿ ರೈತರು ತಾತ್ಕಾಲಿಕವಾಗಿ ತಮ್ಮ ಹೋರಾಟವನ್ನು ಕೈ ಬಿಟ್ಟಿದ್ದಾರೆ. ಇನ್ನು ನೌಕರಿ ಕುರಿತು ನ್ಯಾಯಾಲಯದ ಆದೇಶ ಕೂಡಾ ಇದೆ. ಈಗಾಗಲೇ ನೌಕರಿ ಕೊಡಿಸುವ ಕೆಲಸದ ಕಾರ್ಯ ನಡೆದಿದ್ದು, ಒಟ್ಟು 39 ಜನರಿಗೆ ಕೆಲಸ ನೀಡುವ ಕಾರ್ಯ ನಡೆದಿದೆ ಅಂತಾರೆ ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಮತ್ತು ಡಿ.ಡಿ. ನಾಗ್ಪುರೆ, ಸೂಪರಿಂಟೆಂಡೆಂಟ್ ಇಂಜಿನಿಯರ್ ಕನ್ಸಟ್ರಕ್ಷನ್, ಸೌಥ್ ವೆಸ್ಟರ್ನ್ ರೈಲ್ವೆ ವಿಭಾಗ, ಹುಬ್ಬಳ್ಳಿ.

ಒಟ್ಟಾರೆ ನೌಕರಿ ಸಿಗುತ್ತೆ ಅನ್ನೋ ಕಾರಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ 12 ವರ್ಷ ಕಳೆದ್ರೂ ಇನ್ನೂ ಕೆಲಸ ಸಿಕ್ಕಿಲ್ಲ. ಸದ್ಯ ಮತ್ತೆ ರೈತರಿಗೆ ನೌಕರಿ ಸಿಗುವ ಭರವಸೆ ಅಧಿಕಾರಿಗಳಿಂದ ಸಿಕ್ಕಿದ್ದು, ನೌಕರಿ ಶೀಘ್ರವೇ ಸಿಗುತ್ತಾ ಅಥವಾ ಮತ್ತದೇ ಭರವಸೆ ಮುಂದುವರೆಯುತ್ತಾ ನೋಡಬೇಕಿದೆ. (ವರದಿ: ರವಿ ಮೂಕಿ, ಟಿವಿ 9, ಬಾಗಲಕೋಟೆ)

LEAVE A REPLY

Please enter your comment!
Please enter your name here