Home ಕರ್ನಾಟಕ ಬೆಂಗಳೂರು | ವಿಮಾನ ನಿಲ್ದಾಣದ ಭದ್ರತೆ ಉಲ್ಲಂಘನೆ : ಯೂಟ್ಯೂಬರ್ ಬಂಧನ

ಬೆಂಗಳೂರು | ವಿಮಾನ ನಿಲ್ದಾಣದ ಭದ್ರತೆ ಉಲ್ಲಂಘನೆ : ಯೂಟ್ಯೂಬರ್ ಬಂಧನ

4
0

ಬೆಂಗಳೂರು: ಬೆಂಗಳೂರಿನಿಂದ ಚೆನ್ನೈಗೆ ತೆರಳುವ ಕಾರಣ ನೀಡಿ ವಿಮಾನ ನಿಲ್ದಾಣದ ಭದ್ರತೆಯನ್ನು ಉಲ್ಲಂಘನೆ ಮಾಡಿದ ಆರೋಪದಡಿ 23 ವರ್ಷದ ಯೂಟ್ಯೂಬರ್‌ ಒಬ್ಬರನ್ನು ವಿಮಾನ ನಿಲ್ದಾಣ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಬೆಂಗಳೂರು ಮೂಲದ ವಿಕಾಸ್‍ಗೌಡ ಎಂಬಾತನನ್ನು ಬಂಧಿತ ಯೂಟ್ಯೂಬರ್ ಎಂದು ಗುರುತಿಸಲಾಗಿದೆ. ಎ.12ರಂದು ತನ್ನ ಯೂಟ್ಯೂಬ್ ಚಾನಲ್‍ಗೆ ವೀಡಿಯೋ ಅಪ್‍ಲೋಡ್ ಮಾಡಿದ್ದ ವಿಕಾಸ್‍ಗೌಡ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು, ಭದ್ರತೆಯನ್ನು ಲೇವಡಿ ಮಾಡಿದ್ದರು.

ವಿಮಾನ ನಿಲ್ದಾಣದಂತಹ ಸೂಕ್ಷ್ಮ ಪ್ರದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದರೂ, ಎ.7ರಂದು ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ವಿಕಾಸ್‍ಗೌಡ ಅವರು ವಿಡಿಯೋ ಚಿತ್ರೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರು ಮೂಲದ ವಿಕಾಸ್ ಗೌಡ ಅವರು ತಮ್ಮ ಯೂಟ್ಯೂಬ್ ಚಾನಲ್‍ನಲ್ಲಿ 1.3ಲಕ್ಷ ಅನುಯಾಯಿಗಳನ್ನು ಹೊಂದಿದ್ದು, ತನ್ನ ವೀಡಿಯೊಗಳಿಗೆ ಹೆಚ್ಚು ವೀಕ್ಷಣೆಯನ್ನು ಪಡೆಯಲು ಸಾಹಸಗಳನ್ನು ಕೈಗೊಳ್ಳುತ್ತಿದ್ದರು. ವಿಕಾಸ್‍ಗೌಡ ಯೂಟ್ಯೂಬ್ ಖಾತೆಯಲ್ಲಿ ಸುಮಾರು 60 ವೀಡಿಯೊಗಳನ್ನು ಹಾಕಿದ್ದಾರೆ. ವಿಕಾಸ್‍ಗೌಡ ಅವರ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರಿನಿಂದ ಚೆನ್ನೈಗೆ ಅತ್ಯಂತ ಕಡಿಮೆ ಬೆಲೆಯ ವಿಮಾನ ಟಿಕೆಟ್ ಬುಕ್ ಮಾಡಿ, ತಾನು ನಿಜವಾದ ವಿಮಾನಯಾನ ಮಾಡುವವನೆಂದು ಆರೋಪಿ ವಿಕಾಸ್‍ಗೌಡ ಸುಳ್ಳು ಅಭಿಪ್ರಾಯ ಮೂಡಿಸಿದ್ದರು. ಎ.7ರಂದು ಭದ್ರತಾ ತಪಾಸಣೆ ಮುಗಿಸಿದ ಅವರು ಬೋರ್ಡಿಂಗ್ ಗೇಟ್ ಬಳಿ ಬರಲಿಲ್ಲ.

ಅವರು ತಮ್ಮ ಬಳಿ ಕೆಲವು ಗುಪ್ತ ಸಾಧನವನ್ನು ಹೊಂದಿದ್ದರು, ಅದರ ಮೂಲಕ ಅಕ್ರಮವಾಗಿ ಪ್ರವೇಶಿಸುವ ಮೂಲಕ ನಿರ್ಬಂದಿತ ಪ್ರದೇಶಗಳಲ್ಲಿ ದೃಶ್ಯಗಳನ್ನು ಚಿತ್ರೀಕರಿಸಲು ಪ್ರಾರಂಭಿಸಿದ್ದರು. ಸದ್ಯ ಆರೋಪಿಯ ಬಂಧನವಾಗಿದ್ದು, ಘಟನೆ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಡಿಸಿಪಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here