ಅಬುದಾಬಿ:
ಕೊನೆಯ ಕ್ಷಣದವರೆಗೂ ಹೋರಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಕ್ರವಾರ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಐಪಿಎಲ್ ನಲ್ಲಿ ವಿರಾಟ್ ಪಡೆಯ ಅಭಿಯಾನ ಮುಗಿದಿದೆ.
ಈ ಬಾರಿ ಕಪ್ ಗೆಲ್ಲಬಹುದು ಎಂದು ಅಂದುಕೊಂಡಿದ್ದ ಆರ್ ಸಿಬಿ ಆಸೆ ಮಣ್ಣು ಪಾಲಾಗಿದೆ. ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಕೊನೆಯ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ದೇವದತ್ ಪಡೀಕ್ಕಲ್ ಮಹತ್ವದ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಪರಿಣಾಮ ಒತ್ತಡದಲ್ಲಿದ್ದ ತಂಡಕ್ಕೆ ಎಬಿಡಿ ವಿಲಿಯರ್ಸ್ ನೆರವಾದರು. ಉಳಿದಂತೆ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಬೌಲರ್ ಗಳು ಆರಂಭದಲ್ಲಿ ಬಿಗುವಿನ ದಾಳಿ ನಡೆಸಿದರೂ ಕೊನೆಯಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿ ಪಂದ್ಯವನ್ನು ಕೈ ಚೆಲ್ಲಿದ್ದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ಗೆ 131 ರನ್ ಬಾರಿಸಿತು. ಗುರಿಯನ್ನು ಹಿಂಬಾಲಿಸಿದ ಸನ್ ರೈಸರ್ಸ್ ಹೈದರಾಬಾದ್ 19.4 ಓವರ್ ಗಳಲ್ಲಿ 4 ವಿಕೆಟ್ ಗೆ 132 ರನ್ ಕಲೆ ಹಾಕಿ ಗೆಲುವು ದಾಖಲಿಸಿತು.
ಸನ್ ತಂಡದ ಆರಂಭಿಕ ಶ್ರೀವತ್ಸ್ ಗೋಸ್ವಾಮಿ ಅವರನ್ನು ಬೇಗ ಪೆವಿಲಿಯನ್ ಗೆ ಅಟ್ಟಿದ ಸಿರಾಜ್ ಅಬ್ಬರಿಸಿದರು. ಎರಡನೇ ವಿಕೆಟ್ ಗೆ ಡೇವಿಡ್ ವಾರ್ನರ್ ಹಾಗೂ ಮನೀಷ್ ಪಾಂಡೆ ಜೋಡಿ ತಂಡಕ್ಕೆ ಕೊಂಚ ಆಧಾರವಾಯಿತು. ಈ ಜೋಡಿ 41 ರನ್ ಗಳ ಕಾಣಿಕೆ ನೀಡಿತು. ಡೇವಿಡ್ ವಾರ್ನರ್ 17 ರನ್ ಬಾರಿಸಿ ಸಿರಾಜ್ ಅವರ ಎಸೆತದಲ್ಲಿ ಔಟ್ ಆದರು.
ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಮನೀಷ್ ಪಾಂಡೆ ದೊಡ್ಡ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಆದರೆ ಇವರ ಇನ್ನಿಂಗ್ಸ್ 24 ರನ್ ಗಳಿಗೆ ಸೀಮಿತ ಆಯಿತು. ಪ್ರಿಯಂ ಗರ್ಗ್ 7 ರನ್ ಗಳಿಗೆ ಆಟ ಮುಗಿಸಿದರು.
67 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಒತ್ತಡದಲ್ಲಿದ್ದ ತಂಡಕ್ಕೆ ಕ್ಲಾಸ್ ಆಟಗಾರ ಕೇನ್ ವಿಲಿಯಮ್ಸನ್ ಹಾಗೂ ಜೇಸನ್ ಹೋಲ್ಡರ್ ಆಧಾರವಾದರು. ಈ ಜೋಡಿ 47 ಎಸೆತಗಳಲ್ಲಿ 65 ರನ್ ಸೇರಿಸಿ ತಂಡಕ್ಕೆ ಆಧಾರವಾಯಿತು. ಅಲ್ಲದೆ ತಂಡವನ್ನು ಎಲಿಮಿನೇಟರ್ ಹಂತದಿಂದ ಕ್ವಾಲಿಫೈಯರ್ ಹಂತಕ್ಕೆ ಕೊಂಡಯ್ಯುವಲ್ಲಿ ಸಫಲವಾಯಿತು.
ಕೊನೆಯ ವರೆಗೂ ಹೋರಾಡಿದ ಆರ್ ಸಿಬಿ ಮತ್ತೊಮ್ಮೆ ನಿರಾಸೆ ಅನುಭವಿಸಿತು.
ಮಹತ್ವದ ಪಂದ್ಯದಲ್ಲಿ ತಂಡದಲ್ಲಿ ಕೆಲವು ಬದಲಾವಣೆ ಮಾಡಿದ ಬೆಂಗಳೂರು, ಮೈದಾನಕ್ಕೆ ಇಳಿಯಿತು. ಸನ್ ವಿರುದ್ಧ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡೀಕ್ಕಲ್ ಇನ್ನಿಂಗ್ಸ್ ಆರಂಭಿಸುವ ಹೊಣೆಯನ್ನು ಹೊತ್ತುಕೊಂಡರು. ನಾಯಕ ವಿರಾಟ್ ಕೊಹ್ಲಿ (6) ರನ್ ಕಲೆ ಹಾಕುವಲ್ಲಿ ವಿಫಲರಾದರು. ಇನ್ನು ಟೂರ್ನಿಯುದಕ್ಕೂ ಭರ್ಜರಿ ಬ್ಯಾಟಿಂಗ್ ಮಾಡಿರುವ ದೇವದತ್ ಪಡೀಕ್ಕಲ್ (1) ಅನುಭವಿ ಜೇಸನ್ ಹೋಲ್ಡರ್ ಅವರನ್ನು ಬಲಿ ಪಡೆದರು.
A BIG performance needed from our bowlers now…..
— Royal Challengers Bangalore (@RCBTweets) November 6, 2020
Let’s back our boys, 12th Man Army! 👊🏻#PlayBold #IPL2020 #WeAreChallengers #Dream11IPL #SRHvRCB pic.twitter.com/kIt23KdPya
15 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಒತ್ತಡದಲ್ಲಿದ್ದ ತಂಡಕ್ಕೆ ಏರಾನ್ ಫಿಂಚ್ ಹಾಗೂ ಎಬಿಡಿ ವಿಲಿಯರ್ಸ್ ಆಧಾರವಾದರು. ಈ ಜೋಡಿ 41 ಎಸೆತಗಳಲ್ಲಿ 41 ರನ್ ಸೇರಿಸಿ ತಂಡಕ್ಕೆ ಕೊಂಚ ಆಧಾರವಾಯಿತು. ಫಿಂಚ್ 32 ರನ್ ಬಾರಿಸಿ ಶಹಬಾಜ್ ನದೀಮ್ ಅವರ ಎಸೆತದಲ್ಲಿ ಔಟ್ ಆದರು.
ಉಳಿದಂತೆ ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಸ್ಟಾರ್ ಆಟಗಾರ ಮಿಸ್ಟರ್ 360 ಖ್ಯಾತಿಯ ಎಬಿಡಿ 43 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 56 ರನ್ ಬಾರಿಸಿ ತಂಡಕ್ಕೆ ನೆರವಾದರು.
ವೇಗಿ ಜೇಸನ್ ಹೋಲ್ಡರ್ 25 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಟಿ.ನಟರಾಜನ್ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 7 ವಿಕೆಟ್ ಗೆ 131
(ಏರಾನ್ ಫಿಂಚ್ 32, ಎಬಿ ಡಿವಿಲಿಯರ್ಸ್ 56, ಹೋಲ್ಡರ್ 25ಕ್ಕೆ 3, ನಟರಾಜನ್ 33ಕ್ಕೆ 2).
ಸನ್ ರೈಸರ್ಸ್ ಹೈದರಾಬಾದ್ 19.4 ಓವರ್ ಗಳಲ್ಲಿ 4 ವಿಕೆಟ್ ಗೆ 132
(ಮನೀಷ್ ಪಾಂಡೆ 24, ಕೇನ್ ವಿಲಿಯಮ್ಸನ್ 50, ಜೇಸನ್ ಹೋಲ್ಡರ್ 24, ಸಿರಾಜ್ 28ಕ್ಕೆ 2).
ಯುಎನ್ಐ