ಬೆಂಗಳೂರು: ಮೊಬೈಲ್ ಅಂಗಡಿಯಲ್ಲಿ ಹಾಕಲಾಗಿದ್ದ ಸ್ಪೀಕರ್ ಶಬ್ದ ಜಾಸ್ತಿಯಾಯಿತು ಎನ್ನುವ ಕಾರಣಕ್ಕೆ ಅಂಗಡಿ ಮಾಲಕನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ್ದು, ಐವರು ಪ್ರಮುಖ ಆರೋಪಿಗಳ ಪೈಕಿ ಮೂವರನ್ನು ಹಲಸೂರು ಗೇಟ್ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ನಗರದ ಸಿದ್ದಣ್ಣ ಗಲ್ಲಿಯ ನಗರ್ತಪೇಟೆಯಲ್ಲಿ ರವಿವಾರ(ಮಾ.17) ಸಂಜೆ ಕೃಷ್ಣ ಟೆಲಿಕಾಂ ಅಂಗಡಿ ಮಾಲಕ ಮುಖೇಶ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಬಂಧಿತರನ್ನು ಸುಲೇಮಾನ್(25), ಶಾನವಾಝ್(25) ಮತ್ತು ರೋಹಿತ್(25) ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳಾದ ದಾನಿಶ್ ಮತ್ತು ತರುಣ ಎಂಬುವರಿಗೆ ಶೋಧ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮುಖೇಶ್ ನೀಡಿದ ದೂರಿನ ಮೇರೆಗೆ ಸುಲೇಮಾನ್, ಶಾನವಾಝ್, ರೋಹಿತ್, ಡ್ಯಾನಿಶ್, ತರುಣ ಹಾಗೂ ಇತರರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ 506, 504, 149, 307, 323 ಹಾಗೂ 324 ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರಿನಲ್ಲೇನಿದೆ?: ಬೆಂಗಳೂರು ನಗರದ ಜುಮಾ ಮಸೀದಿ ರಸ್ತೆಯ ಸಿದ್ದಣ್ಣ ಗಲ್ಲಿಯಲ್ಲಿ ಟೆಲಿಕಾಂ ಅಂಗಡಿಯನ್ನು ಇಟ್ಟುಕೊಂಡು ನಾನು ಜೀವನ ಮಾಡುತ್ತಿದ್ದೇನೆ. ಮಾ.17ರಂದು ಸಂಜೆ 6.30ಕ್ಕೆ ನಾನು ಅಂಗಡಿಯಲ್ಲಿ ಇರುವಾಗ ಸುಲೇಮಾನ್, ಶಾನವಾಝ್, ರೋಹಿತ್, ಡ್ಯಾನಿಶ್, ತರುಣ್ ಹಾಗೂ ಇತರರು ನನ್ನ ಅಂಗಡಿಗೆ ಬಂದು ಏಕೆ ಲೌಡ್ ಸ್ಪೀಕರ್ ಜೋರಾಗಿ ಹಾಕಿರುವೆ, ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ನನ್ನ ಮುಖಕ್ಕೆ ಗುದ್ದಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಮುಖೇಶ್ ತನ್ನ ದೂರಿನಲ್ಲಿ ಉಲೇಖಿಸಿದ್ದಾರೆ.
ಇನ್ನು ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಹಂಚಿಕೊಂಡಿರುವ ಬಿಜೆಪಿ ‘ಕರ್ನಾಟಕ ತಾಲಿಬಾನ್ ಆಗುತ್ತಿದೆ, ಮತಾಂಧ ಕಿಡಿಗೇಡಿಗಳು ಮುಖೇಶ್ ಎಂಬ ಸಂಘ ಪರಿವಾರದ ಯುವಕನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ಓಡಿ ಹೋಗಿದ್ದಾರೆ. ಮುಖೇಶ್ ಸಂಜೆ ಪೂಜೆ ಸಮಯದಲ್ಲಿ ಭಕ್ತಿಗೀತೆಗಳನ್ನು ಹಾಕಿದ್ದೇ ಮತಾಂಧ ದುರುಳರು ಹಲ್ಲೆ ಮಾಡಲು ಕಾರಣ. ಹಲ್ಲೆಗೊಳಗಾದ ಮುಖೇಶ್ ಹಲಸೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೂ, ಪೊಲೀಸರು ದೂರು ದಾಖಲಿಸಿಕೊಳ್ಳದೆ ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಪಾ‘ಕೈ’ಸ್ತಾನ್ ಸರಕಾರ ಮತಾಂಧರನ್ನು ಬಂಧಿಸಿ ಕ್ರಮಕೈಗೊಳ್ಳದೆ ಹೋದರೆ, ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಆರೋಪಿಸಿದೆ.
ಆದರೆ, ಘಟನೆ ಮಾ.17ರ ಸಂಜೆ 6:30ರ ಸುಮಾರಿಗೆ ನಡೆದಿದ್ದು, ಅದೇ ದಿನ ರಾತ್ರಿ 10:30ಕ್ಕೆ ದೂರು ಸ್ವೀಕರಿಸಿ, ಮರುದಿನ ಮಾ.18ರ 10.30 ಗಂಟೆಗೆ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ ಎಂದು ಎಫ್‍ಐಆರ್ ವರದಿಯಲ್ಲಿ ದಾಖಲಾಗಿದೆ. ಆದರೆ, ಮಾ.18ರ 11:20ಕ್ಕೆ ಬಿಜೆಪಿಯು, ‘ಎಫ್‍ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದೆ. ಆದರೆ, ಬಿಜೆಪಿ ಟ್ವೀಟ್ ಮಾಡುವ ಹೊತ್ತಿಗಾಗಲೇ ಎಫ್‍ಐಆರ್ ದಾಖಲಿಸಿ, ನ್ಯಾಯಾಲಯಕ್ಕೂ ರವಾನಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ದೂರುದಾರ ನೀಡಿದ ದೂರಿನಲ್ಲಿಯೂ ಆಝಾನ್, ಹನುಮಾನ್ ಚಾಲಿಸಾದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ, ಲೋಕಸಭಾ ಚುನಾವಣಾ ಹೊತ್ತಿನಲ್ಲಿ ಅಶಾಂತಿ ಹಬ್ಬಿಸಲು ಬಿಜೆಪಿ ಘಟನೆಗೆ ಕೋಮು ಬಣ್ಣ ನೀಡಿ ತಿರುಚುತ್ತಿದೆ ಎಂದು ಆರೋಪಿಸಲಾಗಿದೆ.
ಮುಖೇಶ್ ಮೇಲೆ ಗುಂಪು ಹಲ್ಲೆ ನಡೆಸುವ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಖೇಶ್ ಅಂಗಡಿಗೆ ಬಂದ ಯುವಕರ ಗುಂಪೊಂದು ವಾಗ್ವಾದದಲ್ಲಿ ತೊಡಗುವುದು ಕಂಡು ಬರುತ್ತದೆ. ಒಂದು ಹಂತದಲ್ಲಿ ಮುಖೇಶ್ ಹಾಗೂ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಕೊನೆಗೆ ಗುಂಪಿನಲ್ಲಿದ್ದ ಯುವಕನೊಬ್ಬ ಮುಖೇಶ್‍ಗೆ ಹಲ್ಲೆ ನಡೆಸುತ್ತಾನೆ. ನಂತರ ಮತ್ತೋರ್ವ ಯುವಕನೂ ಸೇರಿ ಮುಖೇಶ್ ಮೇಲೆ ಹಲ್ಲೆ ನಡೆಸುವುದು ಕಂಡು ಬರುತ್ತದೆ. ಈ ವೇಳೆ ಅಂಗಡಿಯಿಂದ ಹೊರ ಬರುವ ಮುಖೇಶ್ ಯುವಕರ ಮೇಲೆ ಪ್ರತಿ ಹಲ್ಲೆ ನಡೆಸುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತೇಜಸ್ವಿ ಸೂರ್ಯ ಆಕ್ರೋಶ: ಇನ್ನು ಹಲ್ಲೆಗೊಳಗಾದ ಮುಖೇಶ್‍ನನ್ನು ಭೇಟಿ ಮಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಾಂತ್ವನ ಹೇಳಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ರವಿವಾರ ಸಂಜೆ ಮುಖೇಶ್ ತನ್ನ ವ್ಯಾಪಾರವನ್ನು ನಡೆಸುತ್ತಿದ್ದರು. ಅವರು ಪ್ರತಿದಿನ ಸಂಜೆ ಭಕ್ತಿಗೀತೆಗಳನ್ನು ಕೇಳುವ ಅಭ್ಯಾಸವನ್ನು ಹೊಂದಿದ್ದರು. ಅದರಂತೆ ರವಿವಾರವೂ ಸ್ಪೀಕರ್‍ನಲ್ಲಿ ಹಾಡುಗಳು ಹಾಕಿದ್ದಾರೆ. ಆದರೆ ಕೆಲವು ದುಷ್ಕರ್ಮಿಗಳು ಅವರ ಅಂಗಡಿಗೆ ಬಂದು ಅವರೊಂದಿಗೆ ಜಗಳವಾಡಿದ್ದಾರೆ. ಕೂಡಲೇ ಸ್ಪೀಕರ್ ಸ್ವಿಚ್‍ಆಫ್ ಮಾಡಿ ಹನುಮಾನ್ ಚಾಲೀಸಾ ನುಡಿಸುವುದನ್ನು ನಿಲ್ಲಿಸುವಂತೆ ಹೆದರಿಸಿದ್ದಾರೆ. ಅದಕ್ಕೆ ಮುಖೇಶ್ ನಿರಾಕರಿಸಿದಾಗ ಅವರನ್ನು ಹೊರಗೆಳೆದು ಆರೇಳು ದುಷ್ಕರ್ಮಿಗಳು ಥಳಿಸಿದ್ದಾರೆ. ಅವರಿಗೆ ಆಗಿರುವ ಗಾಯಗಳನ್ನು ನೋಡಿದರೆ ಅವರನ್ನು ಹೇಗೆ ಥಳಿಸಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ.
ತಕ್ಷಣ, ಮುಖೇಶ್ ಮತ್ತು ಅಕ್ಕಪಕ್ಕದ ಅಂಗಡಿಯವರು ಎಫ್‍ಐಆರ್ ದಾಖಲಿಸಲು ಹತ್ತಿರದ ಪೊಲೀಸ್ ಠಾಣೆಗೆ ಹೋದರೆ ಅಲ್ಲಿ ವಿವರವಾದ ಲಿಖಿತ ದೂರು ಸಲ್ಲಿಸಿದ ನಂತರವೂ ಸ್ಥಳೀಯ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ, ತಡವಾಗಿ ಎಫ್‍ಐಆರ್ ದಾಖಲು ಮಾಡಲಾಗಿದೆ. ಸಿಸಿಟಿವಿಯಲ್ಲಿ ಕಂಡುಬರುವ ಎಲ್ಲಾ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ಬೆಂಗಳೂರು ನಗರ ಆಯುಕ್ತರು ನಿಷ್ಪಕ್ಷಪಾತ ಮತ್ತು ವೃತ್ತಿಪರ ರೀತಿಯಲ್ಲಿ ತನಿಖೆ ನಡೆಸುವಂತೆ ನಾವು ಒತ್ತಾಯಿಸುತ್ತೇವೆ’ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.