ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ವಿರುದ್ಧ ಬೆಂಗಳೂರು ಪೊಲೀಸರು ಭಾರೀ ಕಾರ್ಯಾಚರಣೆ ನಡೆಸಿ ಕೇವಲ ಒಂದು ವಾರದಲ್ಲಿ ಸುಮಾರು ₹50 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ನಡೆದ ಅತಿ ದೊಡ್ಡ ಡ್ರಗ್ಸ್ ಸೀಸ್ ಪ್ರಕರಣಗಳಲ್ಲಿ ಒಂದಾಗಿದೆ.
ಸಿಸಿಬಿ ಮತ್ತು ವಿವಿಧ ಪೊಲೀಸ್ ಠಾಣೆಗಳ ಸಂಯುಕ್ತ ಕಾರ್ಯಾಚರಣೆಯಲ್ಲಿ ಎಂಡಿಎಂಎ, ಎಲ್ಎಸ್ಡಿ ಸ್ಟ್ರಿಪ್ಸ್, ಹೈಡ್ರೋ ಗಾಂಜಾ ಹಾಗೂ ಬ್ರೌನ್ ಶುಗರ್ ಸೇರಿದಂತೆ ಹಲವು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ಅಧಿಕಾರಿಗಳು ಮಾತ್ರವೇ ಸುಮಾರು ₹17.5 ಕೋಟಿ ಮೌಲ್ಯದ ಎಂಡಿಎಂಎ ಹಾಗೂ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಪೋಸ್ಟ್ ಆಫೀಸ್ಗೆ ಬಂದಿದ್ದ ಡ್ರಗ್ಸ್ ಪತ್ತೆಯಾಗಿದೆ. ಮತ್ತೊಂದು ಕಾರ್ಯಾಚರಣೆಯಲ್ಲಿ ಡ್ರಗ್ ಪೆಡ್ಲಿಂಗ್ ನಡೆಸುತ್ತಿದ್ದ ಆಂಬ್ರೋಸ್ ಮತ್ತು ವ್ಯಾಲೆಂಟೈನ್ ಎಂಬ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿ, ಅವರ ಬಳಿಯಿಂದ ದೊಡ್ಡ ಪ್ರಮಾಣದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಬಾಗಲೂರು ಪೊಲೀಸರು ಸುಮಾರು ₹16 ಕೋಟಿ ಮೌಲ್ಯದ 19,435 ಎಲ್ಎಸ್ಡಿ ಸ್ಟ್ರಿಪ್ಸ್ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಗದದ ತುಂಡುಗಳಂತೆ ಕಾಣುವ ಈ ಸ್ಟ್ರಿಪ್ಸ್ಗಳನ್ನು ಚಿಕ್ಕ ಭಾಗಗಳಾಗಿ ಕತ್ತರಿಸಿ ಬಳಕೆ ಮಾಡಲಾಗುತ್ತದೆ.
ಯಶವಂತಪುರ ಮತ್ತು ಜಾಲಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ದಾಳಿಯಲ್ಲಿ ಸುಮಾರು ₹6.47 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. ಈ ಮಾದಕ ವಸ್ತುಗಳನ್ನು ಚಾಕ್ಲೇಟ್ ಪ್ಯಾಕೆಟ್ಗಳಂತೆ ರೂಪಾಂತರಿಸಿ ವಿತರಣೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಆಡುಗೋಡಿ ಪೊಲೀಸರು ₹1.5 ಕೋಟಿ ಮೌಲ್ಯದ ಬ್ರೌನ್ ಶುಗರ್ ವಶಪಡಿಸಿಕೊಂಡರೆ, ಚಿಕ್ಕಜಾಲ ಪೊಲೀಸರು ಸುಮಾರು ₹1.6 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ತನಿಖೆಯ ಪ್ರಕಾರ, ಈ ಡ್ರಗ್ಸ್ಗಳು ದೆಹಲಿ ಹಾಗೂ ವಿದೇಶಗಳಿಂದ ಬೆಂಗಳೂರಿಗೆ ತರಲಾಗುತ್ತಿದ್ದು, ನಗರವನ್ನು ಪ್ರಮುಖ ವಿತರಣೆ ಕೇಂದ್ರವಾಗಿ ಬಳಸಲಾಗುತ್ತಿದೆ. ಪೋಸ್ಟ್ ಆಫೀಸ್ ಮೂಲಕ ಬಂದಿರುವ ಪಾರ್ಸೆಲ್ಗಳ ಮೂಲ ಹಾಗೂ ಜಾಲದ ಬಗ್ಗೆ ಪೊಲೀಸರು ಇನ್ನಷ್ಟು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದ್ದು, ನಗರದಲ್ಲಿರುವ ದೊಡ್ಡ ಮಟ್ಟದ ಡ್ರಗ್ಸ್ ಜಾಲವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
