71 ದಿನಗಳಲ್ಲಿ 1,079 ಪ್ರಕರಣ ವಿಲೇವಾರಿ: ದಶಕದ ಹಳೆಯ ಬಾಕಿ ಪ್ರಕರಣಗಳಿಗೂ ತೆರೆ, ಪರಿಹಾರ–ದಂಡ ವಿಧಿಸಿದ ಮಾಹಿತಿ ಆಯೋಗ
ಕಲಬುರಗಿ / ಬೆಂಗಳೂರು: ಆರ್ಟಿಐ (ಮಾಹಿತಿ ಹಕ್ಕು) ಪ್ರಕರಣಗಳ ವಿಲೇವಾರಿಯಲ್ಲಿ ವೇಗ ಹೆಚ್ಚಿಸಿರುವ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠವು ಕಳೆದ ಐದು ತಿಂಗಳಲ್ಲಿ 71 ದಿನಗಳ ಕಲಾಪ ನಡೆಸಿ ಒಟ್ಟು 1,079 ಪ್ರಕರಣಗಳನ್ನು ವಿಲೇವಾರಿ ಮಾಡಿದೆ.
ಈ ಕುರಿತು ರಾಜ್ಯ ಮಾಹಿತಿ ಆಯುಕ್ತರಾದ ಬಿ. ವೆಂಕಟ ಸಿಂಗ್ ಅವರು ಮಾಹಿತಿ ನೀಡಿದ್ದು, 2025ರ ನವೆಂಬರ್ 24ರಿಂದ 2026ರ ಮಾರ್ಚ್ ಅಂತ್ಯದವರೆಗೆ ಒಟ್ಟು 2,520 ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಂಡು ಅವುಗಳಲ್ಲಿ 1,079 ಪ್ರಕರಣಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಾಹಿತಿ ನೀಡುವಲ್ಲಿ ವಿಳಂಬ ಮಾಡಿ ಅರ್ಜಿದಾರರಿಗೆ ಸಮಯ ಹಾಗೂ ಆರ್ಥಿಕ ನಷ್ಟ ಉಂಟು ಮಾಡಿದ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ₹2.28 ಲಕ್ಷದಷ್ಟು ದಂಡ ವಿಧಿಸಲಾಗಿದ್ದು, ನೊಂದ ಅರ್ಜಿದಾರರಿಗೆ ಒಟ್ಟು ₹34 ಸಾವಿರ ಪರಿಹಾರ ನೀಡಲು ಆದೇಶಿಸಲಾಗಿದೆ.
ವಿಶೇಷವಾಗಿ ಕಳೆದ ಒಂದು ದಶಕದಿಂದ ಬಾಕಿ ಉಳಿದಿದ್ದ ಹಳೆಯ ಪ್ರಕರಣಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಪ್ರಕರಣಗಳನ್ನೂ ಶೀಘ್ರವಾಗಿ ವಿಚಾರಣೆ ನಡೆಸಿ ಅರ್ಜಿದಾರರಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ದೊರಕುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಕ್ರಮವು ರಾಜ್ಯದಲ್ಲಿ ಪಾರದರ್ಶಕತೆ ಮತ್ತು ಮಾಹಿತಿ ಹಕ್ಕಿನ ಅನುಷ್ಠಾನವನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.
