ಅಲ್ತಾಡಿ ಗ್ರಾಮದ 87 ವರ್ಷದ ಮಹಿಳೆಗೆ ಮನೆ ಬಾಗಿಲಲ್ಲೇ ಆಧಾರ್ ಅಪ್ಡೇಟ್ ಸೇವೆ ಒದಗಿಸಿದ ಕರ್ನಾಟಕ ಅಂಚೆ ವೃತ್ತ
ಬೆಂಗಳೂರು: ವಯೋಸಹಜ ಸಮಸ್ಯೆ, ನಡೆಯಲು ತೊಂದರೆ ಹಾಗೂ ಸೂಕ್ತ ರಸ್ತೆ ಸಂಪರ್ಕದ ಕೊರತೆಯಿಂದ ಅಂಚೆ ಕಚೇರಿಗೆ ತೆರಳಲು ಸಾಧ್ಯವಾಗದ ಅಲ್ತಾಡಿ ಗ್ರಾಮದ ಬಾಂಬಿಲ ನಿವಾಸಿ 87 ವರ್ಷದ ಜೂಲಿಯಾನಾ ಪಿಂಟೋ ಅವರಿಗೆ ಕರ್ನಾಟಕ ಅಂಚೆ ವೃತ್ತವು ಮನೆ ಬಾಗಿಲಲ್ಲೇ ಆಧಾರ್ ಅಪ್ಡೇಟ್ ಸೇವೆ ಒದಗಿಸಿದೆ.
ಈ ಕುರಿತು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ಅಂಚೆ ವೃತ್ತ, ವಯೋಸಹಜ ಕಾರಣಗಳಿಂದ ಪಿಂಟೋ ಅವರಿಗೆ ನಡೆಯಲು ತೊಂದರೆಯಿದೆ ಎಂದು ತಿಳಿಸಿದೆ. ಅಲ್ಲದೆ, ಅವರು ವಾಸಿಸುವ ಪ್ರದೇಶವು ಗುಡ್ಡಗಾಡು ಪ್ರದೇಶವಾಗಿದ್ದು, ಸೂಕ್ತ ರಸ್ತೆ ಸಂಪರ್ಕ ಇಲ್ಲದ ಕಾರಣ ಆಧಾರ್ ಅಪ್ಡೇಟ್ಗಾಗಿ ಅಂಚೆ ಕಚೇರಿಗೆ ಭೇಟಿ ನೀಡುವುದು ಅವರಿಗೆ ಸಾಧ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯು ಅವರ ಮನೆ ಬಾಗಿಲಿಗೇ ತೆರಳಿ ಆಧಾರ್ ಅಪ್ಡೇಟ್ ಸೌಲಭ್ಯ ಒದಗಿಸಿದ್ದು, ಅಂಚೆ ಕಚೇರಿಗೆ ಪ್ರಯಾಣಿಸದೆ ಪ್ರಕ್ರಿಯೆ ಪೂರ್ಣಗೊಳಿಸಲು ನೆರವಾಗಿದೆ.
