Home ಬೆಂಗಳೂರು ನಗರ ರಾಮನಗರ ಜಿಲ್ಲೆಯ 10 ಸರಕಾರಿ ಶಾಲೆಗಳಿಗೆ 1,150 ಟ್ಯಾಬ್ ವಿತರಣೆ

ರಾಮನಗರ ಜಿಲ್ಲೆಯ 10 ಸರಕಾರಿ ಶಾಲೆಗಳಿಗೆ 1,150 ಟ್ಯಾಬ್ ವಿತರಣೆ

22
0
1,150 Tabs distributed to 10 govt. schools of Ramanagara

`ಯುವ ಅನ್-ಸ್ಟಾಪಬಲ್’ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಭಾಗಿ

ಬೆಂಗಳೂರು:

100ಕ್ಕೂ ಹೆಚ್ಚು ಉದ್ಯಮಿಗಳ ಸೇವಾ ವೇದಿಕೆಯಾದ `ಯುವ ಅನ್-ಸ್ಟಾಪಬಲ್’ ಮೂಲಕ ರಾಮನಗರ ಜಿಲ್ಲೆಯ ಆಯ್ದ 10 ಸರಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ನೆರವಾಗಲು 1,150 ಟ್ಯಾಬ್ ವಿತರಿಸುವ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಂಗಳವಾರ ಚಾಲನೆ ನೀಡಿದರು.

ಈ ಸಂಬಂಧ ವಿಕಾಸಸೌಧದಲ್ಲಿ 30ಕ್ಕೂ ಹೆಚ್ಚು ಕಂಪನಿಗಳ ಉನ್ನತ ಪ್ರತಿನಿಧಿಗಳ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಲು ಸರಕಾರ ಸಂಕಲ್ಪ ಮಾಡಿದ್ದು, ಇನ್ನು 10 ವರ್ಷಗಳಲ್ಲಿ ಕರ್ನಾಟಕವು ದೇಶದ ಶಿಕ್ಷಣ ಸಂಸ್ಕೃತಿಯ ರಾಜಧಾನಿಯಾಗಲಿದೆ ಎಂದರು.

ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬೇಕೆಂಬ ಉದ್ದೇಶದಿಂದಲೇ ಸ್ಥಳೀಯ ಪರಿಸರದ ಹಲವು ಶಾಲೆಗಳನ್ನು ವಿಲೀನಗೊಳಿಸಿ, ತಾಲ್ಲೂಕಿಗೊಂದು ಕ್ಲಸ್ಟರ್ ಶಾಲೆಯನ್ನು ಆರಂಭಿಸಲಾಗುತ್ತಿದೆ. ಈ ಶಾಲೆಗಳಲ್ಲಿ ಗುಣಮಟ್ಟದ ಬೋಧನೆ ಸಿಗಲಿದ್ದು, ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳನ್ನು ವಾಹನದಲ್ಲಿ ಕರೆದುಕೊಂಡು ಹೋಗುವ ಮತ್ತು ಪುನಃ ಮನೆಗೆ ಬಿಡುವ ಅನುಕೂಲವನ್ನೂ ಕಲ್ಪಿಸಲಾಗುತ್ತಿದೆ. ಮಾಗಡಿ ತಾಲ್ಲೂಕಿನಲ್ಲಿ ಇದು ಈಗ ಆರಂಭವಾಗಿದೆ ಎಂದು ಅವರು ಹೇಳಿದರು.

1,150 Tabs distributed to 10 govt. schools of Ramanagara

ಗುಣಮಟ್ಟದ ಶಿಕ್ಷಣ ಮಾತ್ರ ಸಮಾಜದಲ್ಲಿ ಸಮಾನತೆಯನ್ನು ತರಬಲ್ಲದು. ಹೀಗಾಗಿ ಸರಕಾರವು ಶಿಕ್ಷಣ ವಲಯದಲ್ಲಿ 40 ಸಾವಿರ ಕೋಟಿ ರೂ.ಗಳಷ್ಟು ಅಪಾರ ಹಣವನ್ನು ವಿನಿಯೋಗಿಸುತ್ತಿದೆ. ಆದರೂ ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದ ಸಾಧನೆ ಕಂಡುಬರುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳ ನಡುವೆ ಕೇವಲ ಶೇ.5ರಷ್ಟು ಮಾತ್ರ ಗುಣಮಟ್ಟದ ವ್ಯತ್ಯಾಸವಿದೆಯಷ್ಟೆ. ಆಧುನಿಕ ಉದ್ಯೋಗಗಳಿಗೆ ಆಯ್ಕೆಯಾಗುತ್ತಿರುವವರಲ್ಲಿ ಶೇ.70ರಷ್ಟು ಮಂದಿ ಸರಕಾರಿ ಶಾಲೆಗಳಲ್ಲೇ ಕಲಿತವರಾಗಿದ್ದಾರೆ. ಈ ಶಾಲೆಗಳನ್ನು ಇನ್ನಷ್ಟು ಸುಧಾರಿಸಲು ಶಿಕ್ಷಣದ ಡಿಜಿಟಲೀಕರಣ ಮಾಡಲಾಗುತ್ತಿದ್ದು, ಸಂಪೂರ್ಣ ವಿಕೇಂದ್ರೀಕರಣ ಮತ್ತು ಸ್ವಾಯತ್ತತೆಯನ್ನು ತರಲಾಗುತ್ತಿದೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಉತ್ತರದಾಯಿತ್ವವನ್ನು ಬೆಳೆಸಲಾಗುತ್ತಿದೆ ಎಂದು ಅವರು ನುಡಿದರು.

ತಾಂತ್ರಿಕ ಮತ್ತು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಮಾತನಾಡಿ, `ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಎನ್ಇಪಿಯನ್ನು ಜಾರಿಗೆ ತರುತ್ತಿರುವ ಮೊದಲ ರಾಜ್ಯ ನಮ್ಮದಾಗಿದೆ. ಎಲ್ಲೆಡೆಗಳಲ್ಲೂ ಸ್ಮಾರ್ಟ್ ತರಗತಿಗಳನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಬೋಧಕ ವೃಂದಕ್ಕೆ ಅತ್ಯಾಧುನಿಕ ಸಾಧನಗಳನ್ನ ಬಳಸಿಕೊಂಡು ಅತ್ಯುತ್ತಮ ತರಬೇತಿ ನೀಡಲಾಗುತ್ತಿದೆ. ಸರಕಾರಿ ಕಾಲೇಜುಗಳ ಬಲವರ್ಧನೆಗೆ ಕಾರ್ಪೊರೇಟ್ ಸಂಸ್ಥೆಗಳು ಮತ್ತಷ್ಟು ನೆರವು ನೀಡುವ ಅಗತ್ಯವಿದೆ’ ಎಂದು ಒತ್ತಿ ಹೇಳಿದರು.

ರಾಮನಗರ ಜಿಪಂ ಸಿಇಒ ಇಕ್ರಂ ಅವರು, ಜಿಲ್ಲೆಯಲ್ಲಿ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಮತ್ತು ಶಿಕ್ಷಣ ಇಲಾಖೆಯಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಉದ್ದಿಮೆಗಳು ಮುಂದೆ ಬಂದರೆ ಶಾಲೆಗಳ ಸಬಲೀಕರಣವು ಸುಲಭವಾಗಿ, ಜನರು ಮಕ್ಕಳನ್ನು ಸರಕಾರಿ ಶಾಲೆಗಳತ್ತ ಕರೆದುಕೊಂಡು ಬರಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕ್ಯಾಟಮಾರನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಂಗ, ಶೀತಲ್ ಭಟ್, ಇನ್ಫೋಸಿಸ್ ಕಂಪನಿಯ ಡಿ.ಎನ್.ಪ್ರಹ್ಲಾದ್, ವೇದಾಂತು ಕಂಪನಿಯ ಸ್ಥಾಪಕ ಪುಲಕಿತ್ ಜೈನ್, ಅಮೆಜಾನ್ ಕಂಪನಿಯ ಸ್ಮೃತಿ ಶರ್ಮಾ, ಮರ್ಕ್ ಕಂಪನಿಯ ಶ್ರೀನಾಥ್ ನಾರಾಯಣಯ್ಯ, 3ಎಂ ಕಂಪನಿಯ ರಮೇಶ್ ರಾಮದೊರೈ, ಸೆಂಚುರಿ ಗ್ರೂಪ್ ನ ರವೀಂದ್ರ ಪೈ ಮತ್ತು ಕಿರಣ್ ಪೈ, ಬಿಜೆವೈಎಂನ ಅನಿಲ್ ಶೆಟ್ಟಿ, ಲೈವ್ ಸ್ಪೇಸ್ ನ ರಮಾಕಾಂತ್ ಶರ್ಮ, ಯುವ ಅನ್-ಸ್ಟಾಪಬಲ್ ಪರವಾಗಿ ಕೆ.ಚಸ್ಮಿತಾ, ಡಿ.ಪುಷ್ಪಾ, ಅಮಿತಾಭ್ ಶಾ ಮುಂತಾದವರು ಪಾಲ್ಗೊಂಡಿದ್ದರು.

7, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯಾಬ್ ಭಾಗ್ಯ

`ಯುವ ಅನ್-ಸ್ಟಾಪಬಲ್’, ರಾಜ್ಯದ ನಾನಾ ಭಾಗಗಳಲ್ಲಿನ ಸರಕಾರಿ ಶಾಲೆಗಳ ಮಕ್ಕಳಿಗೆ ಸದ್ಯಕ್ಕೆ 2,500 ಟ್ಯಾಬ್ ವಿತರಿಸಲು ತೀರ್ಮಾನಿಸಿದೆ. ಈ ಪೈಕಿ ರಾಮನಗರ ಜಿಲ್ಲೆಯ ಆಯ್ದ 10 ಶಾಲೆಗಳಲ್ಲಿ 7, 8 ಮತ್ತು 9ನೇ ತರಗತಿಗಳಲ್ಲಿ ಓದುತ್ತಿರುವ 1,150 ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ ಚನ್ನಪಟ್ಟಣ ತಾ.ಅರಳಾಳುಸಂದ್ರ, ಮಾಗಡಿ ತಾ.ನ ಕುದೂರು ಮತ್ತು ತಿಪ್ಪಸಂದ್ರ, ಕನಕಪುರ ತಾ.ದೊಡ್ಡಾಲಹಳ್ಳಿ ಮತ್ತು ರಾಮನಗರ ತಾ.ನ ಅವ್ವೇರಹಳ್ಳಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗಳು, ಹಾಗೂ ಸಂಕೀಘಟ್ಟ, ಚಕ್ಕೆರೆ, ಗಾಣಕಲ್, ಉಯ್ಯಂಬಳ್ಳಿ, ಮತ್ತು ಮಾಗಡಿ ಪಟ್ಟಣದಲ್ಲಿರುವ ಸರಕಾರಿ ಬಾಲಕಿಯರ ಪ್ರೌಢಶಾಲೆಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಮಂಗಳವಾರದ ಕಾರ್ಯಕ್ರಮದಲ್ಲಿ ಈ ಶಾಲೆಗಳ 15 ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ ವಿತರಿಸಲಾಯಿತು. ಉಳಿದ ಟ್ಯಾಬ್ ಗಳನ್ನು ಕೆಲವೇ ದಿನಗಳಲ್ಲಿ ಆಯಾ ಶಾಲೆಗಳಿಗೆ ತಲುಪಿಸಿ, ಅರ್ಹ ವಿದ್ಯಾರ್ಥಿಗಳಿಗೆ ತಲುಪಿಸಲಾಗುವುದು ಎಂದು ಆಯೋಜಕರು ತಿಳಿಸಿದರು.

`ಯುವ ಅನ್-ಸ್ಟಾಪಬಲ್’ 18 ರಾಜ್ಯಗಳಲ್ಲಿ ಇದುವರೆಗೆ 3 ಸಾವಿರ ಸರಕಾರಿ ಶಾಲೆಗಳನ್ನು ಪುನಶ್ಚೇತನಗೊಳಿಸಿದೆ. ಈ ಪೈಕಿ 500 ಶಾಲೆಗಳು ಕರ್ನಾಟಕದಲ್ಲೇ ಇದ್ದು, ಇಲ್ಲೆಲ್ಲ ನೀರು, ಶೌಚಾಲಯ, ಸ್ನಾನದ ಮನೆ, ಸ್ಮಾರ್ಟ್ ಕ್ಲಾಸ್ ರೂಮುಗಳು, ವಿದ್ಯಾರ್ಥಿ ವೇತನ, ಶಿಕ್ಷಕರಿಗೆ ತರಬೇತಿ ಮುಂತಾದ ಸೌಲಭ್ಯಗಳನ್ನು ಒದಗಿಸಿದೆ. ಒಟ್ಟಿನಲ್ಲಿ, ದೇಶದಾದ್ಯಂತ 10 ಸಾವಿರ ಸರಕಾರಿ ಶಾಲೆಗಳಿಗೆ ಮರುಜೀವ ನೀಡಬೇಕೆನ್ನುವುದು ಈ ವೇದಿಕೆಯ ಗುರಿಯಾಗಿದೆ.

LEAVE A REPLY

Please enter your comment!
Please enter your name here