ಬೆಂಗಳೂರು:
ಬೆಂಗಳೂರು ನಗರದ 15 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2400 ಆಕ್ಸಿಜನ್ ಸೌಲಭ್ಯವುಳ್ಳ ಬೆಡ್’ಗಳನ್ನು ಸಿದ್ಧಪಡಿಸಲಾಗಿದ್ದು, ಉಳಿದ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇನ್ನೂ 700 ಬೆಡ್’ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪೂರ್ವ ವಲಯ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕೋವಿಡ್ ಉಸ್ತುವಾರಿ ಹೊತ್ತಿರುವ ವಸತಿ ಸಚಿವರಾದ ವಿ.ಸೋಮಣ್ಣ ಹೇಳಿದರು. ಇದರಿಂದಾಗಿ ಆಯಾ ಕ್ಷೇತ್ರಗಳಲ್ಲಿ ಬರುವ ಸಮಸ್ಯೆಗಳನ್ನು ಆಯಾ ಕ್ಷೇತ್ರಗಳಲ್ಲೇ ಬಗೆಹರಿಸಲು ಸಾಧ್ಯವಾಗುತ್ತದೆ ಎಂದೂ ಸಚಿವರು ತಿಳಿಸಿದರು.
ಅವರು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ಪೂರ್ವ ವಲಯ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ನಂತರ ಈ ವಿಷಯವನ್ನು ಪ್ರಕಟಿಸಿದರು.

ಸಭೆಯಲ್ಲಿ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಬೆಂಗಳೂರು ಪೂರ್ವ ವಲಯದಲ್ಲಿನ ಕೋವಿಡ್ ಪರಿಹಾರೋಪಾಯಗಳ ಬಗ್ಗೆ ಸಲಹೆ ಸೂಚನೆ ನೀಡಿದರು.
ರೋಗಿಯಲ್ಲಿ ರೋಗದ ತೀವ್ರತೆಯನ್ನು ಆಧರಿಸಿ ಆಸ್ಪತ್ರೆಗಳಲ್ಲಿ ಆದ್ಯತೆಯ ಮೇರೆಗೆ ಬೆಡ್ ನೀಡುವ ಪದ್ಧತಿಯನ್ನು ಈಗ ಅಳವಡಿಸಿಕೊಳ್ಳಲಾಗಿದೆ, ಇದರಿಂದ ತುರ್ತು ಪರಿಸ್ಥಿತಿಯಲ್ಲಿನ ರೋಗಿಗಳಿಗೆ ಬೆಡ್ ಸಿಗುವುದು ಖಾತ್ರಿಯಾಗಿದ್ದು, ರೋಗಿಗಳ ಪ್ರಾಣ ಉಳಿಸುವಲ್ಲಿ ಆದ್ಯ ಗಮನ ನೀಡಲಾಗಿದೆ ಎಂದೂ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ವಿವಿದೆಡೆ ಆರಂಭಿಸಲಾಗಿರುವ ಪ್ರತಿ ಕೋವಿಡ್ ಕೇರ್ ಸೆಂಟರ್’ಗಳಲ್ಲಿ 30ರಿಂದ 50ರವರೆಗೂ ಆಕ್ಸಿಜನ್ ಸೌಲಭ್ಯವನ್ನು ಹೊಂದಿದ ಬೆಡ್’ಗಳ ಸೌಲಭ್ಯ ನೀಡಲಾಗಿದೆ, 5ರಿಂದ 8 ವೆಂಟಿಲೇಟರ್’ಗಳನ್ನು ಒದಗಿಸಲಾಗಿದೆ ಎಂದು ಹೇಳಿದ ಸಚಿವರು ಸಾರ್ವಜನಿಕರು ಭಯಭೀತರಾಗದೆ ಪರಿಸ್ಥಿತಿಯನ್ನು ಎದುರಿಸಬೇಕೆಂದು ಸಲಹೆ ಮಾಡಿದರು.

ಕೋವಿಡ್ ಸೋಂಕನ್ನು ಎದುರಿಸುವ ಸಲುವಾಗಿಯೇ ಸರ್ಕಾರ ಬಿಗಿ ಲಾಕ್’ಡೌನ್ ಜಾರಿಗೊಳಿಸಿದೆ, ಜನತೆ ಸಹಕರಿಸುವ ಮೂಲಕ ಈ ಕೋವಿಡ್ ಮಹಾಮಾರಿಯನ್ನು ದೂರಮಾಡಬೇಕೆಂದು ಸಚಿವರು ಮನವಿ ಮಾಡಿದರು.
ಸಭೆಯಲ್ಲಿ ರೆಮ್‌ಡಿಸಿವರ್ ಹಾಗೂ ಇತರೆ ಕೋವಿಡ್ ಸಂಬಂಧಿ ಪ್ರಮುಖ ಔಷಧಿಗಳ ನಿರ್ವಹಣೆ, ಆಕ್ಸಿಜನ್ ಸರಬರಾಜು ಮೇಲ್ವಿಚಾರಣೆ, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಬೆಡ್ ವ್ಯವಸ್ಥೆ ಹಾಗೂ ಬೆಡ್ ಸಮಸ್ಯೆಗಳ ನಿವಾರಣೆ ಹಾಗೂ ವಾರ್ ರೂಮ್, ಕಾಲ್ ಸೆಂಟರ್‌ಗಳ ನಿರ್ವಹಣೆ ಸಂಬಂಧದಲ್ಲಿ ಉಪಯುಕ್ತ ಚರ್ಚೆ ನಡೆಯಿತು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್, ಶಾಸಕರಾದ ರಿಜ್ವಾನ್ ಅರ್ಷದ್, ಭೈರತಿ ಸುರೇಶ್, ಎನ್.ಎ.ಹ್ಯಾರೀಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.