ಬೆಂಗಳೂರು: ಕೈಗಾರಿಕಾ ರಂಗದ ಕೌಶಲ್ಯ ಬೇಡಿಕೆ ಪೂರೈಸಲು ರಾಜ್ಯದ 33 ಸರ್ಕಾರಿ ಜಿಟಿಟಿಸಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಿಸಿಷನ್ ಟೂಲಿಂಗ್, ಸಿಎನ್ಸಿ ಮತ್ತು ಮೆಕಟ್ರಾನಿಕ್ಸ್ ವಿಭಾಗಗಳಲ್ಲಿ ಸಂಪೂರ್ಣ ತರಬೇತಿ ನೀಡಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಂಗಳವಾರ ಹೇಳಿದರು. ಅವರು ಬೆಂಗಳೂರು ಕೌಶಲ್ಯ ಶೃಂಗಸಭೆ-2026ರಲ್ಲಿ ಮಾತನಾಡಿದರು.
ಸಾಂಪ್ರದಾಯಿಕ ತಯಾರಿಕೆಯ ವಿಧಾನದಿಂದ ಬೌದ್ಧಿಕ ಆಸ್ತಿ ನಿರ್ಮಾಣ, ಡೀಪ್-ಟೆಕ್ ಸಂಶೋಧನೆ, ಪ್ರಿಸಿಷನ್ ಎಂಜಿನಿಯರಿಂಗ್ ಮತ್ತು ಜಾಗತಿಕ ಮಟ್ಟದ ಸಂಶೋಧನೆ ಹಾಗೂ ಅಭಿವೃದ್ಧಿ ವ್ಯವಸ್ಥೆಯತ್ತ ರಾಜ್ಯ ಹೊರಳುತ್ತಿದೆ ಎಂದ ಅವರು, ವಿದೇಶಿ ನೇರ ಹೂಡಿಕೆ ಮತ್ತು ಬಂಡವಾಳ ಆಕರ್ಷಣೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, ಉದ್ಯಮಗಳಿಗೆ ವೃತ್ತಿಪರವಾಗಿ ಸಜ್ಜಾದ ಮಾನವ ಸಂಪನ್ಮೂಲ ಒದಗಿಸಬೇಕು, ಇದು ಉತ್ಪಾದಕತೆ ಮತ್ತು ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ಉದ್ಯೋಗ ಮತ್ತು ಗುರಿಗಳು
- ರಾಜ್ಯದಲ್ಲಿರುವ 1,000ಕ್ಕೂ ಹೆಚ್ಚು ಜಿಸಿಸಿ ಕೇಂದ್ರಗಳು ಮತ್ತು 750 ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೌಶಲ್ಯ ಹೊಂದಿರುವ 12 ಲಕ್ಷ ಜನರಿಗೆ ಉದ್ಯೋಗ ದೊರೆತಿದ್ದು, 31 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಪಾಟೀಲ ಹೇಳಿದರು.
- 2030ರೊಳಗೆ ₹7.5 ಲಕ್ಷ ಕೋಟಿ ಬಂಡವಾಳ ಸೆಳೆದು 20 ಲಕ್ಷ ಉದ್ಯೋಗ ಸೃಷ್ಟಿಸುವ ಮತ್ತು 2032ರ ಹೊತ್ತಿಗೆ ರಾಜ್ಯವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಸುವ ಗುರಿ ಇದೆ.
- ಬಂದ ಹೂಡಿಕೆ ಪ್ರಸ್ತಾವನೆಗಳ ಪೈಕಿ ಶೇ.75ರಷ್ಟು ಈಗಾಗಲೇ ವಾಸ್ತವ ರೂಪ ಪಡೆದಿವೆ ಎಂದರು.
ಕೌಶಲ್ಯಾಭಿವೃದ್ಧಿಗಾಗಿ ಸರ್ಕಾರ ‘ನಿಪುಣ ಕರ್ನಾಟಕ’ ಯೋಜನೆ ಜಾರಿಗೆ ತಂದಿದ್ದು, ಕೈಗಾರಿಕೆಗಳು ಸರ್ಕಾರದ ಕೈಗಾರಿಕಾ ಸಂಪರ್ಕ ಘಟಕದ ಜತೆ ನಿಕಟವಾಗಿರಬೇಕು ಎಂದು ಅವರು ಹೇಳಿದರು.
ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಖುಷ್ಬೂ ಗೋಯಲ್ ಮುಂತಾದವರು ಉಪಸ್ಥಿತರಿದ್ದರು.
