ಬೆಂಗಳೂರು: ಬೆಂಗಳೂರು ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ಆಸ್ಟ್ರೋಬೇಸ್ ಹಾಗೂ ಕೃಷಿ ಉತ್ಪನ್ನ ತಯಾರಿಕಾ ಕಂಪನಿ ಬೇಯರ್ ರಾಜ್ಯದಲ್ಲಿ ಕ್ರಮವಾಗಿ ₹500 ಕೋಟಿ ಮತ್ತು ₹200 ಕೋಟಿ ಹೂಡಿಕೆ ಮಾಡಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಂಗಳವಾರ ತಿಳಿಸಿದರು. ಎರಡೂ ಕಂಪನಿಗಳ ಹಿರಿಯ ಪ್ರತಿನಿಧಿಗಳೊಂದಿಗೆ ಬೆಂಗಳೂರಿನಲ್ಲಿ ಚರ್ಚೆ ನಡೆಸಿದ ನಂತರ ಅವರು ಈ ಮಾಹಿತಿ ನೀಡಿದರು.
ಆಸ್ಟ್ರೋಬೇಸ್: ರಾಕೆಟ್ ಎಂಜಿನ್ ಘಟಕ
- ಮಧ್ಯಮ ಸಾಮರ್ಥ್ಯದ ಉಡಾವಣಾ ವಾಹನ, ಮರುಬಳಕೆ ಉಡಾವಣಾ ವ್ಯವಸ್ಥೆ ಮತ್ತು ದೇಶೀಯ ರಾಕೆಟ್ ಪ್ರೊಪಲ್ಷನ್ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವ ಕಂಪನಿ, ಆದಿನಾರಾಯಣ ಹೊಸಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 10 ಎಕರೆಯಲ್ಲಿ ತಯಾರಿಕಾ ಘಟಕ ಸ್ಥಾಪಿಸಲಿದೆ.
- ಘಟಕದ ವಾರ್ಷಿಕ ಉತ್ಪಾದನಾ ಸಾಮರ್ಥ್ಯ 40 ರಾಕೆಟ್ ಎಂಜಿನ್ಗಳು.
- 8ರಿಂದ 26 ಟನ್ ತೂಕದ ಪೇಲೋಡ್ ಹೊತ್ತೊಯ್ಯಬಲ್ಲ ಉಡಾವಣಾ ವಾಹನಗಳಿಗಾಗಿ ಕಂಪನಿ ‘ಎವರೆಸ್ಟ್’ ಎಂಬ ದೇಶೀಯ ಎಂಜಿನ್ ಅಭಿವೃದ್ಧಿಪಡಿಸಿದ್ದು, ವಾರ್ಷಿಕ ಪೇಲೋಡ್ ಸಾಮರ್ಥ್ಯವನ್ನು 2032ರ ವೇಳೆಗೆ 100 ಟನ್ ಹಾಗೂ 2040ರ ವೇಳೆಗೆ 1,000 ಟನ್ಗೆ ಹೆಚ್ಚಿಸುವ ಗುರಿ ಹೊಂದಿದೆ.
- ಯೋಜನೆಯಿಂದ 1,250ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಪಾಟೀಲ ಹೇಳಿದರು.
ಇಸ್ರೋದ ಮಾಜಿ ವಿಜ್ಞಾನಿಗಳು ಸೇರಿದಂತೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ವ್ಯಾಪಕ ಅನುಭವ ಹೊಂದಿದ ವೃತ್ತಿಪರರು ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಬೇಯರ್: ಜಾಗತಿಕ ಸಾಮರ್ಥ್ಯ ಕೇಂದ್ರ
- ಬೇಯರ್ ಬೆಂಗಳೂರಿನಲ್ಲಿ ₹200 ಕೋಟಿ ಹೂಡಿಕೆಯೊಂದಿಗೆ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಸ್ಥಾಪಿಸಲು ನಿರ್ಧರಿಸಿದ್ದು, 220 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
- ಹೂಡಿಕೆ ಆಕರ್ಷಿಸಲು ನೆದರ್ಲ್ಯಾಂಡ್ಸ್ಗೆ ಇತ್ತೀಚೆಗೆ ಭೇಟಿ ನೀಡಿದ್ದ ವೇಳೆ ಆಮ್ಸ್ಟರ್ಡ್ಯಾಮ್ನಲ್ಲಿ ಬೇಯರ್ ನಾಯಕತ್ವವನ್ನು ಭೇಟಿಯಾಗಿದ್ದನ್ನು ಪಾಟೀಲ ಸ್ಮರಿಸಿದರು.
- ಮುಂದಿನ ವರ್ಷ ಏಪ್ರಿಲ್ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮೊದಲೇ ಭೂಮಿಪೂಜೆ ನೆರವೇರಿಸಿ ಆದಷ್ಟು ಬೇಗ ಕಾರ್ಯಾರಂಭ ಮಾಡಲು ಕಂಪನಿ ಉತ್ಸುಕವಾಗಿದೆ.
- ಬೆಂಗಳೂರಿನಲ್ಲಿ ಈಗಾಗಲೇ ಸೇವೆ ಮತ್ತು ನಾವೀನ್ಯತೆ ಕೇಂದ್ರ ಹಾಗೂ ಚಾಮರಾಜನಗರದಲ್ಲಿ ಬೆಳೆ ಸಂಶೋಧನಾ ಕೇಂದ್ರ ಹೊಂದಿರುವ ಕಂಪನಿ ಭಾರತದಲ್ಲಿ 125 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 11,000 ಮಂದಿಗೆ ಉದ್ಯೋಗ ನೀಡಿದೆ; ದೇಶದಲ್ಲಿ ಏಳು ತಯಾರಿಕಾ ಘಟಕ ಮತ್ತು ಮೂರು ಜಾಗತಿಕ ಎಂಜಿನಿಯರಿಂಗ್ ಕೇಂದ್ರಗಳಿವೆ ಎಂದು ಪಾಟೀಲ ತಿಳಿಸಿದರು.
ಚರ್ಚೆಯಲ್ಲಿ ಭಾಗವಹಿಸಿದವರು
ಆಸ್ಟ್ರೋಬೇಸ್ ಸಹ ಸಂಸ್ಥಾಪಕ ನೀರಜ್ ಖಂಡೇಲ್ವಾಲ್, ಮುಖ್ಯ ಹಣಕಾಸು ಅಧಿಕಾರಿ ನಿಶಾಂತ್ ಜೈನ್, ವ್ಯವಹಾರ ಮತ್ತು ಕಾರ್ಯತಂತ್ರ ಮುಖ್ಯಸ್ಥ ಕ್ಯಾ. ಪುನೀತ್ ಬಾಲಸುಬ್ರಹ್ಮಣ್ಯಂ ಹಾಗೂ ಬೇಯರ್ನ ಡಾ. ಹಿಮಾಂಶು ಪಟೇಲ್ ಭಾಗವಹಿಸಿದ್ದರು. ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಮತ್ತು ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
