ದಶಕದ ಹೋರಾಟಕ್ಕೆ ತೆರೆ; ₹40 ಕೋಟಿ ಮೌಲ್ಯದ ಜಾಗ ಸ್ವಾಧೀನ, ಹೋಪ್ಫಾರ್ಮ್ ಅಂಡರ್ಪಾಸ್ ಕಾಮಗಾರಿಗೆ ವೇಗ
ಬೆಂಗಳೂರು, ಜೂನ್ 6: ವೈಟ್ಫೀಲ್ಡ್ ಪ್ರದೇಶದ ಬಹುಕಾಲದ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಹೋಪ್ಫಾರ್ಮ್ ಅಂಡರ್ಪಾಸ್ ಯೋಜನೆಗೆ ದೊಡ್ಡ ಅಡೆತಡೆ ನಿವಾರಣೆಯಾಗಿದೆ. ಸುಮಾರು ₹40 ಕೋಟಿ ಮೌಲ್ಯದ ಸರ್ಕಾರಿ ಜಾಗವನ್ನು ಬೆಂಗಳೂರು ಪೂರ್ವ ನಗರ ಪಾಲಿಕೆ ಸ್ವಾಧೀನಕ್ಕೆ ಪಡೆದುಕೊಂಡಿದ್ದು, ದಶಕದಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಇದೀಗ ಹೊಸ ಚೈತನ್ಯ ಸಿಕ್ಕಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸರ್ಕಾರಿ ಹಾಗೂ ಪಾಲಿಕೆ ಜಾಗಗಳ ಸಂರಕ್ಷಣೆ, ಒತ್ತುವರಿ ತೆರವು ಮತ್ತು ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೇ ಸಂಖ್ಯೆ 40/2ರಲ್ಲಿ ಇರುವ 24 ಗುಂಟೆ ಸರ್ಕಾರಿ ಜಾಗವನ್ನು ಕಂದಾಯ ಇಲಾಖೆಯಿಂದ ನಗರ ಪಾಲಿಕೆಗೆ ಹಸ್ತಾಂತರಿಸಿಕೊಳ್ಳಲಾಗಿದೆ.
ಈ ಜಾಗದ ಮೇಲೆ ಖಾಸಗಿ ಒತ್ತುವರಿ ಮತ್ತು ವಿವಿಧ ವಿವಾದಗಳಿಂದಾಗಿ ಕಳೆದ ಹತ್ತು ವರ್ಷಗಳಿಂದ ಹೋಪ್ಫಾರ್ಮ್ ಅಂಡರ್ಪಾಸ್ ಯೋಜನೆಗೆ ಅಡ್ಡಿಯಾಗಿತ್ತು. ಕಂದಾಯ ಇಲಾಖೆ ಹಾಗೂ ನಗರ ಪಾಲಿಕೆ ಅಧಿಕಾರಿಗಳ ಸಮನ್ವಯದ ಫಲವಾಗಿ ಇದೀಗ ಒತ್ತುವರಿ ತೆರವುಗೊಳಿಸಿ ಜಾಗವನ್ನು ಪಾಲಿಕೆ ವಶಕ್ಕೆ ಪಡೆಯಲಾಗಿದೆ.
ಆಯುಕ್ತ ಡಿ.ಎಸ್. ರಮೇಶ್ ಅವರ ಪ್ರಕಾರ, ಈ ಭೂ ಸ್ವಾಧೀನದಿಂದ ವೈಟ್ಫೀಲ್ಡ್ ರಸ್ತೆಯ ಪ್ರಮುಖ ಸಂಚಾರ ದಟ್ಟಣೆ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಒದಗಿಸುವ ಅವಕಾಶ ಸೃಷ್ಟಿಯಾಗಿದೆ.
ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹೋಪ್ಫಾರ್ಮ್ ಅಂಡರ್ಪಾಸ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಂಡು ಮುಂದಿನ 3 ರಿಂದ 4 ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಯೋಜನೆ ಪೂರ್ಣಗೊಂಡ ಬಳಿಕ ವೈಟ್ಫೀಲ್ಡ್, ಹೋಪ್ಫಾರ್ಮ್ ಜಂಕ್ಷನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.
ಅಂಡರ್ಪಾಸ್ ಕಾಮಗಾರಿಗೆ ಅಡ್ಡಿಯಾಗಿರುವ ನೀರಿನ ಪೈಪ್ಲೈನ್, ವಿದ್ಯುತ್ ಕೇಬಲ್, ಆಪ್ಟಿಕಲ್ ಫೈಬರ್, ಟ್ರಾಫಿಕ್ ಸಿಗ್ನಲ್ ಸೇರಿದಂತೆ ವಿವಿಧ ಸಾರ್ವಜನಿಕ ಉಪಯುಕ್ತತಾ ವ್ಯವಸ್ಥೆಗಳನ್ನು ಸ್ಥಳಾಂತರಿಸಲು ಸಂಬಂಧಿತ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.
ಸರ್ಕಾರಿ ಜಾಗಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ
ಪರಿಶೀಲನೆ ವೇಳೆ ಚನ್ನಸಂದ್ರ ಗ್ರಾಮದ ಸರ್ವೇ ಸಂಖ್ಯೆ 115ರಲ್ಲಿ ಇರುವ ಸುಮಾರು 34 ಎಕರೆ ಗೋಮಾಳ ಜಾಗ ಹಾಗೂ 4 ಎಕರೆ ಸರ್ಕಾರಿ ಸ್ವತ್ತನ್ನೂ ಆಯುಕ್ತರು ಪರಿಶೀಲಿಸಿದರು.
ಸರ್ಕಾರಿ ಭೂಮಿಯ ಗಡಿಗಳನ್ನು ಸ್ಪಷ್ಟವಾಗಿ ಗುರುತಿಸುವುದು, ದಾಖಲೆಗಳನ್ನು ಸರಿಯಾಗಿ ನಿರ್ವಹಿಸುವುದು ಹಾಗೂ ಅತಿಕ್ರಮಣ ತಡೆಗಟ್ಟಲು ನಿರಂತರ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸರ್ಕಾರಿ ಜಾಗಗಳ ಬಳಿ ಮಾಹಿತಿ ಫಲಕ ಅಳವಡಿಸಿ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.
ಪಾಲಿಕೆ ಜಾಗಗಳ ಸಂರಕ್ಷಣೆಗೆ ಆದ್ಯತೆ
ಬ್ರಿಗೇಡ್ ಲೇಕ್ಫ್ರಂಟ್ ಅಪಾರ್ಟ್ಮೆಂಟ್ ಸಮೀಪ, ಔಟರ್ ರಿಂಗ್ ರಸ್ತೆಯಿಂದ ಸೀತಾರಾಂಪಾಳ್ಯ ಕೆರೆಯವರೆಗೆ ಪ್ರಸ್ತಾಪಿತ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಸುಮಾರು 7,225 ಚದರ ಮೀಟರ್ ವಿಸ್ತೀರ್ಣದ ಪಾಲಿಕೆ ಜಾಗವನ್ನೂ ಆಯುಕ್ತರು ಪರಿಶೀಲಿಸಿದರು.
ಈ ಜಾಗದ ಗಡಿ ಗುರುತು ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ, ಸಂಭವನೀಯ ಒತ್ತುವರಿಗಳ ಮಾಹಿತಿ ಸಂಗ್ರಹಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪಾಲಿಕೆ ಸ್ವತ್ತುಗಳ ಸುತ್ತ ತಂತಿ ಬೇಲಿ ಅಳವಡಿಸಿ, ಅತಿಕ್ರಮಿತ ಜಾಗಗಳನ್ನು ಮರಳಿ ವಶಕ್ಕೆ ಪಡೆಯುವ ಮೂಲಕ ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವಂತೆ ನಿರ್ದೇಶಿಸಲಾಗಿದೆ.
ಸಾರ್ವಜನಿಕ ಆಸ್ತಿಗಳ ರಕ್ಷಣೆಯೇ ಆದ್ಯತೆ
ಪರಿಶೀಲನೆ ವೇಳೆ ಮಾತನಾಡಿದ ಆಯುಕ್ತ ಡಿ.ಎಸ್. ರಮೇಶ್, ಸರ್ಕಾರಿ ಮತ್ತು ಪಾಲಿಕೆ ಜಾಗಗಳ ಸಂರಕ್ಷಣೆ, ಅತಿಕ್ರಮಣ ತಡೆ ಹಾಗೂ ಸಾರ್ವಜನಿಕ ಆಸ್ತಿಗಳ ರಕ್ಷಣೆ ಆಡಳಿತದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.
ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಭೂಮಿಯನ್ನು ಸಮಯಕ್ಕೆ ಸರಿಯಾಗಿ ಲಭ್ಯವಾಗುವಂತೆ ಕ್ರಮ ಕೈಗೊಂಡು, ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಪರಿಶೀಲನೆ ವೇಳೆ ಅಪರ ಆಯುಕ್ತೆ ಲೋಕಾಂಡೆ ಸ್ನೇಹಲ್ ಸುಧಾಕರ್, ಕಂದಾಯ ಇಲಾಖೆ ಅಧಿಕಾರಿಗಳು, ಅಭಿಯಂತರರು ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
