ನೂತನ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾಗಿ ಜಿ. ಜಗದೀಶ್ ಅಧಿಕಾರ ಸ್ವೀಕಾರ; ತ್ಯಾಜ್ಯ ನಿರ್ವಹಣೆ, ನಾಗರಿಕ ಸೇವೆಗಳ ಮೇಲೆ ವಿಶೇಷ ಒತ್ತು
ಬೆಂಗಳೂರು, ಜೂನ್ 6: ಐಎಎಸ್ ಅಧಿಕಾರಿ ಜಿ. ಜಗದೀಶ್ ಅವರು ಶನಿವಾರ ಎಂ.ಜಿ. ರಸ್ತೆಯ ಪಬ್ ಕಟ್ಟಡದಲ್ಲಿರುವ ಆಯುಕ್ತರ ಕಚೇರಿಯಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ತಕ್ಷಣವೇ ಅವರು ತ್ಯಾಜ್ಯ ನಿರ್ವಹಣೆ, ನಾಗರಿಕ ಸೇವೆಗಳು ಹಾಗೂ ನಗರಾಡಳಿತಕ್ಕೆ ಸಂಬಂಧಿಸಿದ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಆಯುಕ್ತರು ಹಿರಿಯ ಅಧಿಕಾರಿಗಳೊಂದಿಗೆ ಪರಿಚಯ ಸಭೆ ನಡೆಸಿ, ವಿವಿಧ ಇಲಾಖೆಗಳ ಪ್ರಗತಿ, ನಾಗರಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳ ಗುಣಮಟ್ಟ, ಅಭಿವೃದ್ಧಿ ಕಾಮಗಾರಿಗಳ ಸ್ಥಿತಿ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಇಲಾಖೆಗಳ ನಡುವಿನ ಸಮನ್ವಯವನ್ನು ಮತ್ತಷ್ಟು ಬಲಪಡಿಸುವಂತೆ ಸೂಚಿಸಿದ ಅವರು, ಕಾನೂನಿನ ಚೌಕಟ್ಟಿನೊಳಗೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ನಾಗರಿಕರಿಗೆ ತ್ವರಿತ ಹಾಗೂ ಪರಿಣಾಮಕಾರಿ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ
ನಗರದ ಉದ್ಯಾನವನಗಳನ್ನು ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಾಕಿಂಗ್ಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸುವಂತೆ ಆಯುಕ್ತರು ಸೂಚಿಸಿದರು.
ನಗರದ ಹಸಿರು ವಲಯಗಳನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತ್ಯಾಜ್ಯ ನಿರ್ವಹಣೆಗೆ ಕಟ್ಟುನಿಟ್ಟಿನ ಸೂಚನೆ
ನಗರದಲ್ಲಿ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗೆ ಪೌರಕಾರ್ಮಿಕರ ಕಡ್ಡಾಯ ಹಾಜರಾತಿ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದ ಅವರು, ಪ್ರತಿದಿನ 100 ಪ್ರತಿಶತ ಮನೆ ಮನೆ ಕಸ ಸಂಗ್ರಹಣೆ ಆಗುವಂತೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ನಗರದ ವಿವಿಧ ಭಾಗಗಳಲ್ಲಿ ಕಂಡುಬರುವ ಕಸದ ಬ್ಲಾಕ್ ಸ್ಪಾಟ್ಗಳನ್ನು ಶಾಶ್ವತವಾಗಿ ನಿವಾರಿಸಲು ವಿಶೇಷ ಯೋಜನೆ ರೂಪಿಸುವಂತೆ ಸೂಚನೆ ನೀಡಿದರು.
ಬಾಡಿಗೆ ಬಾಕಿ ಉಳಿಸಿರುವ ಅಂಗಡಿಗಳಿಗೆ ಕ್ರಮ
ನಗರ ಪಾಲಿಕೆಗೆ ಸೇರಿದ ಮಾರುಕಟ್ಟೆಗಳು ಹಾಗೂ ಇತರೆ ವಾಣಿಜ್ಯ ಆಸ್ತಿಗಳಲ್ಲಿ ಬಾಡಿಗೆ ಪಾವತಿಸದೆ ಕಾರ್ಯನಿರ್ವಹಿಸುತ್ತಿರುವ ಬಾಡಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಯುಕ್ತರು ನಿರ್ದೇಶಿಸಿದರು.
ಬಾಡಿಗೆ ಪಾವತಿಸದ ಅಂಗಡಿಗಳು ಮತ್ತು ಆಸ್ತಿಗಳನ್ನು ತೆರವುಗೊಳಿಸಿ, ಅಗತ್ಯವಿದ್ದಲ್ಲಿ ಸೀಲ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಒತ್ತು
ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದ ಆಯುಕ್ತರು, ನಿಗದಿತ ಗುರಿಗಳನ್ನು ಶೇ.100ರಷ್ಟು ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇದಕ್ಕಾಗಿ ಸಿಬ್ಬಂದಿಗೆ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ನಿರ್ದೇಶಿಸಿದರು.
ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸಿ
ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಸೇವಕರಾಗಿರುವುದರಿಂದ ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಹಾಗೂ ಅವರ ಅಹವಾಲುಗಳನ್ನು ತ್ವರಿತವಾಗಿ ಪರಿಹರಿಸಬೇಕು ಎಂದು ಆಯುಕ್ತರು ತಿಳಿಸಿದರು.
ನಾಗರಿಕ ಸ್ನೇಹಿ ಆಡಳಿತವೇ ಇಲಾಖೆಗಳ ಪ್ರಮುಖ ಗುರಿಯಾಗಿರಬೇಕು ಎಂದು ಅವರು ಒತ್ತಿ ಹೇಳಿದರು.
ಸಭೆಯಲ್ಲಿ ಅಪರ ಆಯುಕ್ತ (ಅಭಿವೃದ್ಧಿ) ವೆಂಕಟಾಚಲಪತಿ, ಅಪರ ಆಯುಕ್ತ (ಕಂದಾಯ) ಕೆ. ರಂಗನಾಥ್, ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಆರೋಗ್ಯಾಧಿಕಾರಿ ಶಿವಕುಮಾರ್, ಹಣಕಾಸು ಉಪ ನಿಯಂತ್ರಕಿ ವಿಜಯಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
