ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಂ.ಡಿ. ಬ್ಲಾಕ್ನ ವರಾಹಿ ದೇವಸ್ಥಾನದ ಸಮೀಪ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಡಾಡಿ ವಾಹನಗಳ ಟೋಯಿಂಗ್ ಕಾರ್ಯಕ್ಕೆ ಸಾಂಕೇತಿಕ ಚಾಲನೆ ನೀಡಿದರು.
ಅಧಿಕೃತ ‘ಅಸ್ತ್ರಂ’ ತಂತ್ರಾಂಶದ ಮಾಹಿತಿಯಂತೆ, ಸಂಚಾರಿ ಪೊಲೀಸರು 2,751 ಬಿಡಾಡಿ ವಾಹನಗಳನ್ನು ಗುರುತಿಸಿದ್ದು, ಸಾರ್ವಜನಿಕರು 1,498 ವಾಹನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ಒಟ್ಟು ಗುರುತಿಸಲಾದ ಬಿಡಾಡಿ ವಾಹನಗಳ ಸಂಖ್ಯೆ 4,249ಕ್ಕೆ ಏರಿಕೆಯಾಗಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ 1,034 ವಾಹನಗಳಿಗೆ ನೋಟಿಸ್ ಅಂಟಿಸಲಾಗಿದ್ದು, 72 ವಾಹನಗಳ ಮಾಲೀಕರು ನಿಗದಿತ ದಂಡ ಪಾವತಿಸಿ ತಮ್ಮ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್, ಅಪರ ಆಯುಕ್ತ ವೆಂಕಟಾ ಚಲಪತಿ, ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.