ಒಂದೇ ದಿನ 6.10 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿದ ದಕ್ಷಿಣ ಬೆಂಗಳೂರು ನಗರ ಪಾಲಿಕೆ
ಬೆಂಗಳೂರು, ಜುಲೈ 18: ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದಕ್ಷಿಣ ಬೆಂಗಳೂರು ನಗರ ಪಾಲಿಕೆ ಶನಿವಾರ ತನ್ನ ವ್ಯಾಪ್ತಿಯಲ್ಲಿ ಒಟ್ಟು 6.10 ಕಿಲೋಮೀಟರ್ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿಯನ್ನು ತೆರವುಗೊಳಿಸಿತು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಆದೇಶ ಹಾಗೂ ದಕ್ಷಿಣ ಬೆಂಗಳೂರು ನಗರ ಪಾಲಿಕೆ ಆಯುಕ್ತ ಕೆ. ಎನ್. ರಮೇಶ್ ಅವರ ನಿರ್ದೇಶನದಂತೆ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು. ಸಂಚಾರಿ ಪೊಲೀಸರು, ಕಾನೂನು ಸುವ್ಯವಸ್ಥೆ ಪೊಲೀಸರು ಹಾಗೂ ಇತರೆ ಇಲಾಖೆಗಳ ಸಮನ್ವಯದಲ್ಲಿ ಪ್ರಮುಖ ಹಾಗೂ ಉಪ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿನ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಲಾಯಿತು.
ಜಯನಗರ ವಲಯದಲ್ಲಿ, ಜಯನಗರ ವಿಭಾಗದ ಸಾರಕ್ಕಿ ಮಾರುಕಟ್ಟೆ ಸಮೀಪದ ಇಂದಿರಾ ಗಾಂಧಿ ವೃತ್ತ ವ್ಯಾಪ್ತಿಯ 1.20 ಕಿಲೋಮೀಟರ್ ಪಾದಚಾರಿ ಮಾರ್ಗವನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆಯಲ್ಲಿ ಎರಡು ಅಂಗಡಿಗಳು, ಎರಡು ಕೈಗಾಡಿಗಳು, ಐದು ಶೀಟ್ಗಳು, ನಾಲ್ಕು ಮೆಟ್ಟಿಲು ಮತ್ತು ರ್ಯಾಂಪ್ಗಳು ಹಾಗೂ ಎರಡು ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಯಿತು. ಪಾದಚಾರಿ ಮಾರ್ಗ ಅತಿಕ್ರಮಿಸಿದ್ದ ಬಾರ್ ಮತ್ತು ರೆಸ್ಟೋರೆಂಟ್ಗೆ 10,000 ರೂ. ದಂಡ ವಿಧಿಸಿ ಒತ್ತುವರಿ ತೆರವುಗೊಳಿಸಲಾಯಿತು.
ಬೊಮ್ಮನಹಳ್ಳಿ ವಲಯದಲ್ಲಿ ಬಿಟಿಎಂ ಲೇಔಟ್ ವಿಭಾಗದ ಹೊಸೂರು ರಸ್ತೆಯ 1.10 ಕಿಲೋಮೀಟರ್ ಹಾಗೂ 20ನೇ ಮುಖ್ಯ ರಸ್ತೆಯ 2 ಕಿಲೋಮೀಟರ್ ಸೇರಿದಂತೆ ಒಟ್ಟು 3.10 ಕಿಲೋಮೀಟರ್ ಪಾದಚಾರಿ ಮಾರ್ಗ ತೆರವುಗೊಳಿಸಲಾಯಿತು. ಎಚ್.ಎಸ್.ಆರ್. ಲೇಔಟ್ ವಿಭಾಗದಲ್ಲಿ 80 ಅಡಿ ರಸ್ತೆ ಹಾಗೂ 22ನೇ ಕ್ರಾಸ್ ರಸ್ತೆಯ ಒಟ್ಟು 1.80 ಕಿಲೋಮೀಟರ್ ಪಾದಚಾರಿ ಮಾರ್ಗವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಯಿತು.
ಒಟ್ಟಾರೆಯಾಗಿ 34 ಅಂಗಡಿಗಳು ಮತ್ತು ಪೆಟ್ಟಿ ಶಾಪ್ಗಳು, 21 ಕೈಗಾಡಿಗಳು, 18 ಶೀಟ್ಗಳು ಮತ್ತು ಕ್ಯಾನೋಪಿಗಳು, 25 ಮೆಟ್ಟಿಲುಗಳು ಹಾಗೂ ರ್ಯಾಂಪ್ಗಳು, 22 ಜಾಹೀರಾತು ಫಲಕಗಳು ಮತ್ತು ಕಂಬಗಳು ಹಾಗೂ ಎಂಟು ತಾತ್ಕಾಲಿಕ ಶೆಡ್ಗಳನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆಯಿಂದ ಸಂಗ್ರಹವಾದ ಸುಮಾರು ಎರಡು ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.
ಕಾರ್ಯಾಚರಣೆಯಲ್ಲಿ ಪಾಲಿಕೆಯ ಸಿಬ್ಬಂದಿ ಹಾಗೂ ಕಾರ್ಮಿಕರು ಭಾಗವಹಿಸಿದ್ದರು. ಅಕ್ರಮ ಶೆಡ್ಗಳು, ಕಾಂಕ್ರೀಟ್ ಮೆಟ್ಟಿಲುಗಳು ಹಾಗೂ ಇತರೆ ಒತ್ತುವರಿಗಳನ್ನು ತೆರವುಗೊಳಿಸಲು ಜೆಸಿಬಿ ಯಂತ್ರಗಳನ್ನು ಬಳಸಲಾಗಿದ್ದು, ತ್ಯಾಜ್ಯ ಮತ್ತು ಮಣ್ಣನ್ನು ಸಾಗಿಸಲು ಟ್ರ್ಯಾಕ್ಟರ್ಗಳನ್ನು ನಿಯೋಜಿಸಲಾಗಿತ್ತು.