ಬೆಂಗಳೂರು:
ಎಣ್ಣೆ ಗಿರಣಿ ಪ್ರಾರಂಭಿಸಲು ಅನುಮತಿ ನೀಡಲು 12 ಸಾವಿರ ಲಂಚಕ್ಕೆ ಒತ್ತಾಯಿಸಿದ ಬಿಬಿಎಂಪಿಯ ಹಿರಿಯ ಆರೋಗ್ಯ ನಿರೀಕ್ಷಕರು ಎಸಿಬಿ ಬಲೆಗೆ ಬಿದ್ದಿದ್ದಾರೆ. ದಾಸರಹಳ್ಳಿ ವಲಯದ ಬಿಬಿಎಂಪಿ ಹಿರಿಯ ಆರೋಗ್ಯ ನಿರೀಕ್ಷಕರು ವಿ.ಆರ್.ಪ್ರವೀಣ್ ಕುಮಾರ್ ಬಲೆಗೆ ಬಿದ್ದ ಅಧಿಕಾರಿ.
ಕೋವಿಡ್‍ನಿಂದ ಕೆಲಸ ಕಳೆದುಕೊಂಡಿದ್ದ ಟಿ.ದಾಸರಹಳ್ಳಿಯ ಮಲ್ಲಸಂದ್ರ ನಿವಾಸಿಯೊಬ್ಬರು ನೈಸರ್ಗಿಕ ಆಹಾರ ಉತ್ಪನ್ನ ತಯಾರು ಮಾಡುವ ಉದ್ದೇಶದಿಂದ ಎಣ್ಣೆ ಗಿರಣಿ ತೆರೆಯಲು ಅರ್ಜಿ ಸಲ್ಲಿಸಿದ್ದರು. ಲೈಸೆನ್ಸ್ ನೀಡಲು ಸುಮಾರು ಒಂದು ತಿಂಗಳ ಕಾಲಾವಕಾಶ ಬೇಕೆಂದು ತ್ವರಿತಗತಿಯಲ್ಲಿ ಲೈಸೆನ್ಸ್ ಅವಶ್ಯಕತೆ ಇದ್ದರೆ 12 ಸಾವಿರ ಲಂಚ ನೀಡಬೇಕೆಂದು ಆರೋಪಿತ ಅಧಿಕಾರಿ ಪ್ರವೀಣ್‍ಕುಮಾರ್ ಒತ್ತಾಯಿಸಿದ್ದರು.
ಲಂಚ ನೀಡಲು ಇಷ್ಟವಿಲ್ಲದೆ ಎಸಿಬಿಗೆ ದೂರು ನೀಡಲಾಗಿತ್ತು. ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ದೂರುದಾರನಿಂದ 7 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಪ್ರವೀಣ್‍ಕುಮಾರ್ ಸಿಕ್ಕಿಬಿದ್ದಿದ್ದಾರೆ. ಇವರನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.