25 ರಿಂದ 30 ಲೋಡ್ ಕಳೆ, ಪ್ಲಾಸ್ಟಿಕ್ ತೆರವು
ಬೆಂಗಳೂರು:
ಬೃಹತ್ ಬೆಂಗಳೂರು ಮಹಾಗರ ಪಾಲಿಕೆ ಹಾಗೂ ಮದ್ರಾಸ್ ಇಂಜಿನಿಯರಿಂಗ್ ಗ್ರೂಫ್ ಸಹಯೋಗದೊಂದಿಗೆ ಇಂದು ಹಲಸೂರು ಕೆರೆಯಲ್ಲಿ ತೀರ್ವ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
113 ಎಕರೆ ವ್ಯಾಪ್ತಿಯುಳ್ಳ ಹಲಸೂರು ಕೆರೆಯಲ್ಲಿ ಕಳೆದ ಒಂದು ವಾರದಿಂದ ಬಿಬಿಎಂಪಿ ಕೆರೆಗಳ ನಿರ್ವಹಣೆ ಮಾಡುವ 50 ಸಿಬ್ಬಂದಿ ಹಾಗೂ ಮದ್ರಾಸ್ ಇಂಜಿನಿಯರಿಂಗ್ ಗ್ರೂಫ್ ನ 50 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇಂದು ಬಿಬಿಎಂಪಿಯ 80 ಸಿಬ್ಬಂದಿ ಹಾಗೂ ಎಂ.ಇ.ಜಿಯ 150 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. 5 ಬೋಟ್ ಗಳ ಮೂಲಕ ಕಳೆಯನ್ನು ತೆರವುಗೊಳಿಸಲಾಗುತ್ತಿದ್ದು, ಇದುವರೆಗೆ 25 ರಿಂದ 30 ಲೋಡ್ ಕಳೆ, ಪ್ಲಾಸ್ಟಿಕ್ ತೆರವು ಮಾಡಲಾಗಿದೆ.
ಹಲಸೂರು ಕೆರೆ ಸ್ವಚ್ಛತಾ ಕಾರ್ಯದ ಕಾರ್ಯವೈಖರಿಯನ್ನು ಇಂದು ಆಯುಕ್ತರು ಎನ್. ಮಂಜುನಾಥ್ ಪ್ರಸಾದ್ ರವರು ಪಾಲಿಕೆ ಅಧಿಕಾರಿಗಳ ಜೊತೆ ಬೋಟ್‌ನ ಮೂಲಕ ಪರಿಶೀಲನೆ ನಡೆಸಿ ಕೆರೆಯನ್ನು ಆಕರ್ಷಣಾ ತಾಣವನ್ನಾಗಿ ಮಾಡಿರುವ ಪಾಲಿಕೆ ಸಿಬ್ಬಂದಿ ಹಾಗೂ ಎಂ.ಇ.ಜಿ ಗ್ರೂಫ್ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದರು.
ಎಂ.ಇ.ಜಿಗಳ ತರಬೇತಿ ಸ್ಥಳವಾದ ಹಲಸೂರು ಕೆರೆಯು ನಗರ ಪ್ರಮುಖ ಸ್ಥಳದಲ್ಲಿದ್ದು, ಆಕರ್ಷಣೀಯ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕಿದೆ. ಸಾರ್ವಜನಿಕರ ವಾಯುವಿಹಾರಕ್ಕೆ ಅನುಕೂಲಕರವಾಗುವಂತೆ ಮಾಡಬೇಕಿದ್ದು, ಮುಂದಿನ ಆಯವ್ಯಯದಲ್ಲಿ ಅನುದಾನ ಮೀಸಲಿರಿಸಿ ಅಭಿವೃದ್ಧಿ ಪಡಿಸಲು ಸೂಕ್ತ ಕ್ರಮ ತೆಗದುಕೊಳ್ಳಲಾಗುತ್ತದೆ.
ಕೆರೆಗಳ ವಿಭಾಗದ ಮುಖ್ಯ ಅಭಿಯಂತರರು ಮೋಹನ್ ಕೃಷ್ಣ ಮಾತನಾಡಿ, ನಗರ ಕೇಂದ್ರ ಭಾಗದಲ್ಲಿ ಹಲಸೂರು ಕೆರೆಯಿದ್ದು, ಕೆರೆಯ ಅಂಗಳದಲ್ಲಿ ಬೆಳೆದಿದ್ದ ಕಳೆ, ಸಂಗ್ರಹವಾಗಿದ್ದ ವಸ್ತು/ತ್ಯಾಜ್ಯವನ್ನು ಪಾಲಿಕೆಯ ಕೆರೆಗಳ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಯ ತಂಡ ಹಾಗೂ ಎಂ.ಇ.ಜಿ ಗ್ರೂಫ್ ತಂಡ ಸೇರಿ ಸ್ವಚ್ಛಮಾಡಲಾಗುತ್ತಿದೆ. ಇದೀಗ ಹೊಸದಾಗಿ ಕೆರೆಯ ಇನ್ ಲೆಟ್ ಬಳಿ 100 ಅಡಿಯ ಟ್ರ್ಯಾಶ್ ಬ್ಯಾರಿಯರ್ ಅಳವಡಿಸಲಾಗಿದೆ. ಇದರಿಂದ ತೇಲುವ ವಸ್ತುಗಳು ಅಲ್ಲೇ ಸಂಗ್ರಹವಾಗಲಿದ್ದು, ಕೆರೆಯೊಳಗೆ ಬರುವುದಿಲ್ಲ. ಟ್ರ್ಯಾಶ್ ಬ್ಯಾರಿಯರ್ ಬಳಿ ಸಂಗ್ರಹವಾದ ಪ್ಲಾಸ್ಟಿಕ್ ಸೇರಿದಂತೆ ಇತ್ಯಾದಿ ತ್ಯಾಜ್ಯವನ್ನು ಆಗಿಂದಾಗ್ಗೆ ತೆರವುಗೊಳಿಸಲಾಗುತ್ತದೆ ಎಂದರು.
ಸದರಿ ಅಭಿಯಾನದಲ್ಲಿ ಸ್ಥಳೀಯ ಶಾಸಕರು ರಿಜ್ವಾನ್ ಹರ್ಷದ್, ಜಂಟಿ ಆಯುಕ್ತರು (ಘನತ್ಯಾಜ್ಯ) ಸರ್ಫರಾಜ್ ಖಾನ್, ಕಮಾಂಡೆಂಟ್ (ಎಂ.ಇ.ಜಿ ಮತ್ತು ಸೆಂಟರ್) ಬ್ರಿಗೇಡಿಯರ್ ಟಿ.ಪಿ.ಎಸ್. ವಡಾವ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.