ಬೆಂಗಳೂರು:
ಪ್ರಸ್ತುತ ವರ್ಷ ತಮ್ಮ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸುವುದು ಬೇಡ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಫೇಸ್ ಬುಕ್ ಲೈವ್ ಬರುವ ಮೂಲಕ ಈ ವಿಷಯವನ್ನು ಮಾತನಾಡಿದರು.
ಮೊದಲಿಗೆ ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2020 ಎಲ್ಲರ ಜೀವನದಲ್ಲೂ ಮರೆಯಲಾಗದಂತಹ ವರ್ಷ. ತುಂಬಾ ಪಾಠಗಳನ್ನು ಕಲಿತಿದ್ದೇವೆ. 2021ರಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ, ಹೊಸ ಜೀವನ , ಹೊಸ ಆಯಾಮ ಬರಲಿ. ಇವತ್ತು ಲೈವ್ ಬಂದಿರುವ ಕಾರಣ ಮೊದಲೇ ಹೇಳುವೆ. 2020ರಲ್ಲಿ ಅದ್ಧೂರಿಯಾಗಿ ಬರ್ತ್ಡೇ ಆಚರಿಸಿದ್ದೇವು. 2019 ತುಂಬಾ ಚೆನ್ನಾಗಿದ್ದಿದ್ದರಿಂದ 2020 ಕೂಡ ಹಾಗೇ ಇರುತ್ತೆ ಎಂದು ಎಲ್ಲಾ ಯೋಜನೆ ಮಾಡಿದ್ದೇವು. ಆದರೆ, 2020 ದೊಡ್ಡ ಪಾಠ ಕಲಿಸಿತು. ಬಹಳ ಜನ ಕೆಲಸ ಕಳೆದುಕೊಂಡಿದ್ದು, ಕೈಯಲ್ಲಿ ಕಾಸಿಲ್ಲ. ಹೀಗಾಗಿ ಈ ವರ್ಷ ಫೆ. 16ರಂದು ನನ್ನ ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ಹೇಳಲು ಇಂದು ಲೈವ್ ಬರುವುದಕ್ಕೆ ಪ್ರಮುಖ ಕಾರಣ. ಏಕೆಂದರೆ ಹಿಂದೆಲ್ಲಾ ಎಲ್ಲರೂ ಕೆಲಸ ಮಾಡುತ್ತಿದ್ದೇವು. ಕೈಯಲ್ಲೂ ಕಾಸಿತ್ತು. ಆದರೆ, 2020ರಲ್ಲಿ ಯಾರೂ ಕೆಲಸ ಮಾಡಿಲ್ಲ, ನಿಮ್ಮ ಜೊತೆ ನಾನೂ ಕೆಲಸ ಮಾಡಿಲ್ಲ. ಒಂದು ವರ್ಷ ಸುಮ್ಮನೆ ಕಳೆದುಹೋಯಿತು. ಪಾಪ ನೀವೆಲ್ಲಾ ಕರ್ನಾಟಕದ ಮೂಲೆಮೂಲೆಯಿಂದ ನನ್ನ ಹುಟ್ಟುಹಬ್ಬಕ್ಕೆ ಬರುತ್ತೀರಾ. ನೀವೇ ಗಾಡಿಗಳಿಗೆ ಪೆಟ್ರೋಲ್ ಹಾಕಿಸಿಕೊಂಡು, ಸ್ನೇಹಿತರನ್ನು ಕರೆದುಕೊಂಡು 5-10 ಸಾವಿರ ಕಲೆಕ್ಟ್ ಮಾಡಿ ಇಲ್ಲಿಗೆ ಬಂದು ಆಚರಣೆ ಮಾಡುತ್ತೀರಿ. ಅದೇ 500-1000 ರೂ. ನಿಮ್ಮ ಹತ್ತಿರ ಇದ್ದರೆ ಒಂದು ಒಳ್ಳೆಯ ಕಾರ್ಯವಾಗುತ್ತೆ. ಮೊದಲು ನಿಮ್ಮ ಮನೆಯನ್ನು ನೋಡಿ. ನೀವೆಲ್ಲಾ ಸ್ವಲ್ಪ ಸೆಟಲ್ ಆಗಿ. ಹೀಗಾಗಿ ಈ ವರ್ಷ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಹೀಗೇ ಮಾಡಿ ಎಂದು ನಾನು ಹೇಳುವುದಿಲ್ಲ. ನಿಮ್ಮ ಖುಷಿ. ಆದರೆ, ಮೊದಲು ನಿಮ್ಮ ಮನೆ ನೋಡಿಕೊಳ್ಳಿ. ನಿಮ್ಮ ಜೀವನ ನೋಡಿಕೊಳ್ಳಿ. ಆಮೇಲೆ ಮಿಕ್ಕಿದ್ದು. ಮುಂದಿನ ವರ್ಷ 2022ಗೆ ಕೊರೊನಾ ಎಲ್ಲಾ ಹೋಗಲಿ. ಮುಂದಿನ ವರ್ಷ ಎಲ್ಲರೂ ಖಂಡಿತ ಸಿಗೋಣ. ಫೆ. 15ರಂದೇ ನಾನು ಊರಲ್ಲಿ ಇರುವುದಿಲ್ಲ. ಸುಮ್ಮನೆ ಇಲ್ಲಿಗೆ ಬಂದು ನಿಮಗೆ ಬೇಜಾರಾಗುವುದು ಬೇಡ. 15ರಿಂದ 18ನೇ ದಿನಾಂಕದವರೆಗೆ ನಾನು ಮನೆಯಲ್ಲಿ ಇರುವುದಿಲ್ಲ. ಆಮೇಲೆ ಮುಂದಿನ ಕೆಲಸಗಳು ಆರಂಭವಾಗಬಹುದು ನೋಡೋಣ ಎಂದು ಲೈವ್ ನಲ್ಲಿ ದಚ್ಚು ಬಹಿರಂಗಪಡಿಸಿದ್ದಾರೆ.