ಕಡತ ಚಿತ್ರ: ಏರೋ ಇಂಡಿಯಾ.
ಬೆಂಗಳೂರು: ಜಾಗತಿಕ ಮತ್ತು ದೇಶೀಯ ಪ್ರದರ್ಶಕರಿಂದ ದಾಖಲೆಯ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ, ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯು (ಡಿಡಿಪಿ) ‘ಏರೋ ಇಂಡಿಯಾ 2027’ಕ್ಕಾಗಿ ಪ್ರಮುಖ ಮೂಲಸೌಕರ್ಯದ ವಿಸ್ತರಣೆ ಆರಂಭಿಸಿದೆ. ಎರಡು ಹೊಸ ಪ್ರದರ್ಶನ ಹ್ಯಾಂಗರ್‌ಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಗರಿಷ್ಠ ಉದ್ಯಮ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲು ಮೊದಲ ಬಾರಿಗೆ ಮೆಜ್ಜನೈನ್ ಮಹಡಿಗಳಿಗೆ ಅನುಮತಿ ನೀಡಲಾಗಿದೆ.
ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಮತ್ತು ವಿಶ್ವದ ಪ್ರಮುಖ ಏರೋಸ್ಪೇಸ್ ಹಾಗೂ ರಕ್ಷಣಾ ಪ್ರದರ್ಶನಗಳಲ್ಲಿ ಒಂದಾದ ಏರೋ ಇಂಡಿಯಾದ 16ನೇ ಆವೃತ್ತಿ 2027ರ ಫೆಬ್ರವರಿ 8ರಿಂದ 12ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ಮೊದಲಿದ್ದ ಸಾಮರ್ಥ್ಯಕ್ಕಿಂತ ಸುಮಾರು 12,000 ಚದರ ಮೀಟರ್‌ಗಳಷ್ಟು ಹೆಚ್ಚಿನ ಪ್ರದರ್ಶನ ಸ್ಥಳಕ್ಕೆ ಬೇಡಿಕೆ ಬಂದಿದ್ದು, ಇದು ಭಾರತದ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ಮತ್ತು ರಕ್ಷಣಾ ಪರಿಸರ ವ್ಯವಸ್ಥೆಗೆ ಸಾಕ್ಷಿ ಎಂದು ನವೆಂಬರ್ 25ರಂದು ಪಿಐಬಿ ಬೆಂಗಳೂರು ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.
ಯಲಹಂಕ ಸಕ್ರಿಯ ಭಾರತೀಯ ವಾಯುಪಡೆಯ ತರಬೇತಿ ನೆಲೆಯಾಗಿದ್ದು, ಕಟ್ಟುನಿಟ್ಟಾದ ವಾಯುಯಾನ ಸುರಕ್ಷತೆ ಮತ್ತು ಕಾರ್ಯಾಚರಣೆಯ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಸಮತಲ ವಿಸ್ತರಣೆಗೆ ಮಿತಿಗಳಿವೆ. ಈ ಸ್ಥಳಾವಕಾಶದ ಮಿತಿಗಳನ್ನು ನಿವಾರಿಸಲು ಮತ್ತು ಸಾಧ್ಯವಾದಷ್ಟು ಹೆಚ್ಚಿನ ಪ್ರದರ್ಶಕರಿಗೆ ಅವಕಾಶ ಕಲ್ಪಿಸಲು ಡಿಡಿಪಿ ಎರಡು ಪರಿಹಾರಗಳನ್ನು ಜಾರಿಗೆ ತಂದಿದೆ.
ಮೊದಲನೆಯದಾಗಿ, ಒಟ್ಟಾರೆ ನೆಲದ ಸಾಮರ್ಥ್ಯವನ್ನು ಗಮನಾರ್ಹವಾಗಿ ವಿಸ್ತರಿಸಲು ಎರಡು ಹೊಚ್ಚಹೊಸ ಪ್ರದರ್ಶನ ಹ್ಯಾಂಗರ್‌ಗಳನ್ನು ನಿರ್ಮಿಸಲಾಗುತ್ತಿದೆ. ಎರಡನೆಯದಾಗಿ, ಏರೋ ಇಂಡಿಯಾದ ಇತಿಹಾಸದಲ್ಲೇ ಮೊದಲ ಬಾರಿಗೆ, ಹ್ಯಾಂಗರ್ ಎತ್ತರ ಅನುಮತಿಸುವ ಕಡೆಗಳಲ್ಲಿ ಪ್ರದರ್ಶಕರು ತಮಗೆ ಹಂಚಿಕೆಯಾದ ಮಳಿಗೆಗಳ ಒಳಗೆ ಮೆಜ್ಜನೈನ್ ಮಹಡಿಗಳನ್ನು ನಿರ್ಮಿಸಲು ಅನುಮತಿ ನೀಡಲಾಗುವುದು; ಇದರಿಂದ ನೆಲದ ವಿಸ್ತೀರ್ಣ ಹೆಚ್ಚಿಸದೆಯೇ ಲಂಬ ಸ್ಥಳವನ್ನು ಬಳಸಿಕೊಳ್ಳಬಹುದು. ಎಲ್ಲಾ ಮೆಜ್ಜನೈನ್ ರಚನೆಗಳು ನಿಗದಿತ ರಚನಾತ್ಮಕ ಸ್ಥಿರತೆ, ಭಾರ ಹೊರುವ ಸಾಮರ್ಥ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಏರೋ ಇಂಡಿಯಾ 2027ರಲ್ಲಿ ಜಾಗತಿಕ ಏರೋಸ್ಪೇಸ್ ಕ್ಷೇತ್ರದ ದಿಗ್ಗಜರು, ಭಾರತದ ತಯಾರಕರು ಮತ್ತು ನಾವೀನ್ಯಕಾರರು ತಮ್ಮ ಅತ್ಯಾಧುನಿಕ ಸಾಮರ್ಥ್ಯಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಸಾಕಷ್ಟು ಅವಕಾಶ ಹೊಂದಿರುವಂತೆ ಖಚಿತಪಡಿಸುವುದು ಡಿಡಿಪಿಯ ಗುರಿಯಾಗಿದೆ.
