ಬೆಂಗಳೂರು:
ಗೋಹತ್ಯೆ ನಿಷೇಧ ಮಸೂದೆ ಯಾವುದೇ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ರೂಪಿಸಿದ್ದಲ್ಲ. ಗೋಹತ್ಯೆ ನಿಷೇಧ ಮಸೂದೆಯಿಂದ ದೇಶಿ ಗೋವು ತಳಿಗಳ ವೃದ್ಧಿ ಹಾಗೂ ಸಂವರ್ಧನೆಗೆ ಅನುಕೂಲವಾಗಲಿದೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗೋಹತ್ಯೆ ನಿಷೇಧ ಕಾನೂನು ಜಾರಿಯನ್ನು ವಿರೋಧಿಸುವುದಾಗಿ ಹೇಳಿದ್ದು, ಈ ಮಸೂದೆಯಿಂದ ಸಮಾಜದಲ್ಲಿ ಅಶಾಂತಿ ತಲೆದೋರುತ್ತದೆ ಎಂದು ಹೇಳಿರುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿರುವ ಪ್ರಭು ಚವ್ಹಾಣ್, ಗೋವು ರೈತನೊಂದಿಗೆ ಇದ್ದಷ್ಟು ದಿನಗಳು ರೈತನ ಆದಾಯದಲ್ಲಿ ವೃದ್ಧಿ ಆಗುತ್ತದೆ ವಿನಃ ನಷ್ಟ ಆಗುವುದಿಲ್ಲ. ಈ ಮಸೂದೆಯಿಂದ ರೈತರ ಗೋವುಗಳ ಕಳ್ಳ ಸಾಗಣೆಗೆ ಕಡಿವಾಣ ಬಿಳುವುದರಿಂದ ರೈತ ನಿಶ್ಚಿಂತೆಯಿಂದ ಪಶುಸಂಗೋಪನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಮುಂಬರುವ ದಿನಗಳಲ್ಲಿ ಉತ್ತರಪ್ರದೇಶ ಮಾದರಿಯಲ್ಲಿ ಗೋವುಗಳ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಗೋವು ಕೇವಲ ನಮ್ಮ ಸಂಸ್ಕೃತಿಯ ಒಂದು ಭಾಗವಲ್ಲ ರೈತನ ಜೀವನಾಧಾರ ಹೀಗಾಗಿ ಈ ಮಸೂದೆಯಿಂದ ರೈತರಿಗೆ ಅನುಕೂಲ ಆಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
”ಗೋ ವಧೆಯನ್ನು ಬರಿಯ ಕಾನೂನಿನ ಮೂಲಕ ತಡೆಯಲು ಸಾಧ್ಯವಿಲ್ಲ. ಇದಕ್ಕೆ ತಿಳಿವಳಿಕೆ, ಶಿಕ್ಷಣ, ಕರುಣೆ, ಸಹಾನುಭೂತಿಯೂ ಅಗತ್ಯ,” ಎಂದು ಹೇಳಿದ್ದರು. UNI