ಕರ್ನಾಟಕ ಮಾಹಿತಿ ಆಯೋಗದ ಸ್ಪಷ್ಟನೆ
ಬೆಂಗಳೂರು:
ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳು ಮಾಹಿತಿ ಹಕ್ಕು ಅಧಿನಿಯಮ-2005 ರ ವ್ಯಾಪ್ತಿಗೆ ಒಳಪಡುತ್ತದೆ. ಎಂದು ಕರ್ನಾಟಕ ಮಾಹಿತಿ ಹಕ್ಕು ಆಯೋಗವು ಸ್ಪಷ್ಟಪಡಿಸಿದೆ.
ನಗರದ ಸೇಂಟ್ ಜೋಸೆಫ್ ಸಂಜೆ ಕಾಲೇಜು ಸೇಂಟ್ ಜೋಸೆಫ್ ಕಲಾ ಮತ್ತು ವಿಜ್ಞಾನ ಕಾಲೇಜು ಮತ್ತು ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜುಗಳು ಸರ್ಕಾರದ ಅನುದಾನ ಪಡೆಯುತ್ತಿವೆ. ಸರ್ಕಾರದ ಅನುದಾನವು ಸಾರ್ವಜನಿಕರ ತೆರಿಗೆ ಹಣವಾಗಿರುವ ಹಿನ್ನೆಲೆಯುಲ್ಲಿ ಅನುದಾನ ಪಡೆಯುವ ಸಂಸ್ಥೆಗಳು ಮಾಹಿತಿ ಹಕ್ಕು ಅಧಿನಿಯಮದ ವ್ಯಾಪ್ತಿಗೆ ಒಳಪಡುತ್ತದೆ ಎಂದು ಕರ್ನಾಟಕ ಮಾಹಿತಿ ಆಯೋಗ ಪುನರುಚ್ಛರಿಸಿದೆ.
ಮಾಹಿತಿ ಹಕ್ಕು ಅಧಿನಿಯಮ-2005 ರ ಅಡಿಯಲ್ಲಿ ಮಾಹಿತಿ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಈ ಕಾಲೇಜುಗಳು ತಿರಸ್ಕರಿಸಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸುಧಾ ಕಟ್ವಾ ಎಂಬುವವರು ಕರ್ನಾಟಕ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಆಯೋಗವು ಸ್ಪಷ್ಟನೆ ನೀಡಿದೆಯಲ್ಲದೆ, ಅರ್ಜಿದಾರರು ಕೋರಿರುವ ಮಾಹಿತಿಯನ್ನು 30 ದಿನಗಳೊಳಗೆ ನೀಡುವಂತೆ ಈ ಮೂರೂ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ. ಅಲ್ಲದೆ, ಮಾಹಿತಿ ನೀಡಲು ನಿರಾಕರಿಸಿದ ಈ ಮೂರು ಕಾಲೇಜುಗಳಿಗೆ ತಲಾ 25,000 ರೂ. ದಂಡವನ್ನು ಏಕೆ ವಿಧಿಸಬಾರದು ? ಎಂದು ಪ್ರಶ್ನಿಸಿದೆ. ಅಂತೆಯೇ, ಮುಂದಿನ ಜನವರಿ 13 ರ ವಿಚಾರಣೆ ವೇಳೆ ಹಾಜರಿರಲು ಆದೇಶಿಸಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಎನ್ ಪಿ ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.