Home ಕರ್ನಾಟಕ ವಿಧಾನ ಸಭೆಯಲ್ಲಿ ಗೋಹತ್ಯೆ ನಿಷೇಧ ಅಂಗೀಕಾರ : ಕಾಂಗ್ರೆಸ್‌ನಿಂದ ಸದನ ಬಹಿಷ್ಕಾರ,ಜೆಡಿಎಸ್ ಸಭಾತ್ಯಾಗ

ವಿಧಾನ ಸಭೆಯಲ್ಲಿ ಗೋಹತ್ಯೆ ನಿಷೇಧ ಅಂಗೀಕಾರ : ಕಾಂಗ್ರೆಸ್‌ನಿಂದ ಸದನ ಬಹಿಷ್ಕಾರ,ಜೆಡಿಎಸ್ ಸಭಾತ್ಯಾಗ

68
0
ಪ್ರಾತಿನಿಧ್ಯ ಚಿತ್ರ

ಬೆಂಗಳೂರು:

ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ೨೦೨೦ ನೇ ಸಾಲಿನ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

ಬಿಜೆಪಿ ಸದಸ್ಯರ ಜೈ ಶ್ರೀರಾಮ್,ಬೋಲೊ ಭಾರತ ಮಾತಾಕಿ ಜೈ ಘೋಷಣೆಗಳ ನಡುವೆ.ಪಶು ಸಂಗೋಪನೆ ಮತ್ತು ವಕ್ಫ್ ಸಚಿವ ಪ್ರಭು ಚೌವ್ಹಾಣ್ ವಿಧೇಯಕ ಮಂಡನೆಗೆ ಆರಂಭಿಸು ತಿದ್ದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿ,ಸದನ ಸಲಹಾ ಸಮಿತಿಯಲ್ಲಿ ಹೊಸ ವಿಧೆಯಕ ಮಂಡನೆ ಮಾಡಬಾರದು.ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿರುವ ವಿಧೇಯಕಗಳನ್ನು ಮಾತ್ರ ಮಂಡಿಸಬೇಕು ಎಂದು ತೀರ್ಮಾನಿಸಲಾಗಿದೆ.ಈಗ ಏಕಾಏಕಿ ಹೊಸ ಬಿಲ್ ಮಂಡಿಸುತ್ತಿದ್ದಾರೆ.ನಾವು ಇದನ್ನು ಒಪ್ಪುವುದಿಲ್ಲ ಎಂದು ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಸಚೇತಕ ಸುನೀಲ್ ಕುಮಾರ್ ಯಾವುದಾದರೂ ಅಗತ್ಯ ಬಿಲ್ ಇದ್ದರೆ ಅದನ್ನು ತರಬಹುದು ಎಂದು ಚರ್ಚೆಯಾಗಿತ್ತು.ಇದು ಅಗತ್ಯ ಬಿಲ್ ಇದೆ.ಅದನ್ನು ನಾವು ಮಂಡಸಿದ್ದೇವೆ.ನಿಮ್ಮ ಮಾತು ಕೇಳಿ ಬಿಲ್ ತರಬೇಕಿಲ್ಲ.ನೀವು ಬಿಲ್ ಮೇಲೆ ಚರ್ಚೆ ಮಾಡಿ ಎಂದು ಹೇಳಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ನಿನ್ನೆ ಮಹತ್ವದ ಬಿಲ್ ಮಂಡನೆ ಮಾಡಬಹುದು ಎಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆಯಾಗಿತ್ತು. ಹೀಗಾಗಿ ಇದನ್ನು ಮಂಡನೆಗೆ ಅವಕಾಶ ಕೊಟ್ಟಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಆರೋಪ ಪ್ರತ್ಯಾರೋಪ ನಡೆಯಿತು.ಈ ಸಂದರ್ಭದಲ್ಲಿ ಸದನದಲ್ಲಿ ಗದ್ದಲದ ವಾತಾವರಣ ಏರ್ಪಟ್ಟಿತು.

ಗದ್ದಲದ ನಡುವೆಯೇ ಪ್ರಭು ಚೌವ್ಹಾಣ್ ವಿಧೇಯಕ ಮಂಡಿಸಿದರು.ವಿಧೇಯಕ ಮಂಡನೆ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಬಿಜೆಪಿಯವರೂ ದನ ಕಡಿಯುವ ಕಾಂಗ್ರೆಸ್‌ನವರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ಪ್ರತಿಪಕ್ಷಗಳ ಗದ್ದಲದ ನಡುವೆಯೇ ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯಗಳು ಮತ್ತು ಇತರೆ ಕಾನೂನುಗಳ ತಿದ್ದುಪಡಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆಯಲಾಯಿತು.ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ಗಲಾಟೆ ಹೆಚ್ಚಾಗಿದ್ದರಿಂದ ಸದನವನ್ನು ಹತ್ತು ನಿಮಿಷ ಮುಂದೂಡಲಾಯಿತು.

ಮತ್ತೆ ಸದನ ಆಂಭವಾದಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ,ನೀವು ಕೇಸರಿ ಶಾಲ್ ಹಾಕಿಕೊಂಡು ಬಂದ ಕೂಡಲೇ ರಾಜಕಾರಣ ಮುಗಿಯುವುದಿಲ್ಲ.ನೀವು ಇನ್ನೂ ರಾಜಕಾರಣದಲ್ಲಿ ಬಹಳ ದೂರ ಹೋಗಬೇಕಿದೆ.

ಈ ಸದನದ ಪಾವಿತ್ರತೆ ಹೋಗುತ್ತದೆ.ಬಿಎಸಿ ಸಭೆಗೆ ನಮ್ಮನ್ನು ಏಕೆ ಕರೆಯಬೇಕು.ಸಭಾಧ್ಯಕ್ಷರ ಕುರ್ಚಿ ಗೌರವ ಉಳಿಯಬೇಕು.ಬಿಎಸಿ ಸಭೆಯಲ್ಲಿ ಯಾವುದೇ ಹೊಸ ಬಿಲ್ ತರುವಂತೆ ಇಲ್ಲ ಎಂದು ನಿರ್ಧರಿಸಲಾಗಿತ್ತು.ಈಗ ಏಕಾ ಏಕಿ ಬಿಲ್ ಮಂಡನೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

ವಿಧೇಯಕ ಮಂಡನೆ ಮಾಡುವಾಗ ಸಚಿವರ ಕೈಯಲ್ಲಿ ಬಿಲ್ ಇರಲಿಲ್ಲ. ಅವರ ಬಳಿ ಬಿಲ್ ಇತ್ತು ಎಂದು ಅವರು ಗೋ ಮಾತೆ ಮೇಲೆ ಆಣೆ ಮಾಡಿ ಹೇಳಲಿ.ಯಾಕೆ ಹೀಗೆ ಕದ್ದು ಮುಚ್ಚಿ ಮಂಡನೆ ಮಾಡುವುದು.ನಾವು ಚರ್ಚೆಗೆ ಸಿದ್ದರಿದ್ದೇವೆ. ಆದರೆ,ತರಾ ತುರಿಯಲ್ಲಿ ತರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಗ್ರಾಮ ಪಂಚಾಯತಿ ಚುನಾವಣೆ ಇರುವುದರಿಂದ ಜನರ ಗಮನ ಸೆಳೆಯಲು ಈ ರೀತಿ ಮಾಡುತ್ತಿದ್ದೀರಾ.ನೀವು ಈ ರೀತಿ ಮಾಡುವುದಾದರೆ ನಾವು ಸದನಕ್ಕೆ ಬರುವ ಅಗತ್ಯವೇ ಇಲ್ಲ. ನೀವೇ ನಡೆಸಿಕೊಂಡು ಹೋಗಿ ಎಂದು ಖಾರವಾಗಿ ಹೇಳಿದರು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ,ನಾವು ಯಾವುದೇ ಕದ್ದು ಮುಚ್ಚಿ ಬಿಲ್ ತಂದಿಲ್ಲ.ಸಿದ್ದರಾಮಯ್ಯ ಅವರು ತಮ್ಮ ಮಾತನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಮುಖ್ಯ ಸಚೇತಕ ಸುನಿಲ್ ಕುಮಾರ್ ಮಾತನಾಡಿ,೨೦೧೦ ರಲ್ಲಿ ನಾವು ವಿಧೇಯಕ ತಂದಾಗ ೨೦೧೩ರಲ್ಲಿ ಅದನ್ನು ವಾಪಸ್ ಪಡೆಯುವಾಗ ಯಾವುದೇ ಅಜೆಂಡಾದಲ್ಲಿ ತಂದಿ ರಲಿಲ್ಲ.ನಾವು ಧರಣಿ ನಡೆಸುತ್ತಿರುವ ಸಂದರ್ಭದಲ್ಲಿ ಬಿಲ್ ವಾಪಸ್ ಪಡೆದಿದ್ದರು.ಈಗಲೇ ವಿಧೇಯಕದ ಮೇಲೆ ಚರ್ಚೆ ನಡೆಸಿ ಪಾಸ್ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಮಂತ್ರಿ ಬಿ.ಎಸ್.ಯಡಿಯೂರಪ್ಪ ಮಧ್ಯ ಪ್ರವೇಶಿಸಿ,ನಾಳೆ ವಿಧಾನಪರಿಷತ್ತಿನಲ್ಲಿ ಬಿಲ್ ಪಾಸ್‌ಆಗಿ ಬರಬೇಕಿರುವುದರಿಂದ ಇಂದೇ ಪಾಸ್ ಮಾಡಿಕೊಡಿ ಎಂದು ಮನವಿ ಮಾಡಿದರು.

ಪ್ರತಿಪಕ್ಷಗಳ ಸದಸ್ಯರು ಸದನ ಬಾವಿಯಲ್ಲಿರುವಾಗಲೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ೧೯೬೪ರಿಂದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಜಾರಿಯಲ್ಲಿದೆ. ಆ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ತರಲಾಗಿದೆ ಎಂದು ವಿಧೇಯಕದ ಕುರಿತು ವಿವರಣೆ ನೀಡಿದರು.

ವಿಧೇಯಕದ ಮೇಲೆ ಮಾತನಾಡಿದ, ಬಿಜೆಪಿ ಸದಸ್ಯರಾದ ಅರವಿಂದ ಲಿಂಬಾವಳಿ,ಅರಗ ಜ್ಞಾನೇಂದ್ರ ಹಾಗೂ ಕೆ.ಜಿ. ಬೋಪಯ್ಯ ವಿಧೇಯಕವನ್ನು ಸ್ವಾಗತಿಸಿದರು.

ಕೇಸರಿ ಶಾಲ್ ಹಾಕಿಕೊಂಡು ಬಂದ ಬಿಜೆಪಿ ಸದಸ್ಯರು :

ವಿಧೇಯಕ ಮಂಡನೆ ಸಂದರ್ಭದಲ್ಲಿ ಗದ್ದಲ ಉಂಟಾಗಿ ಹತ್ತು ನಿಮಿಷಗಳ ಕಾಲ ಸದನ ಮುಂದೂಡಿ ಮತ್ತೆ ಕಲಾಪ ಆರಂಭವಾದಾಗ ಬಿಜೆಪಿ ಸದಸ್ಯರೆಲ್ಲರೂ ಕೇಸರಿ ಶಾಲ್‌ಗಳನ್ನು ಹಾಕಿಕೊಂಡು ಸದನಕ್ಕೆ ಆಗಮಿಸಿದ್ದರು.ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಕೇಸರಿ ಶಾಲ್ ಹಾಕಿಕೊಂಡು ಕುಳಿತಿದ್ದರು.

ವಿಧಾನ ಸೌಧದ ಮುಂದೆ ಗೋ ಪೂಜೆ :

ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ ಮಾಡುವ ಸಂದರ್ಭ ದಲ್ಲಿ ಬಿಜೆಪಿ ಕಾರ್ಯಕರ್ತರು ಹಸುಗಳನ್ನು ವಿಧಾನಸೌಧದ ಪೂರ್ವ ದ್ವಾರದ ಮುಂದೆ ವಾಹನಗಳಲ್ಲಿ ಕರೆದುಕೊಂಡು ಬಂದಿದ್ದರು.ಸಚಿವರಾದ ಪ್ರಭು ಚೌವ್ಹಾಣ್, ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಗೋವಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಾವು ಸದನವನ್ನು ಬಹಿಷ್ಕಾರ ಮಾಡುತ್ತೇವೆ. ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ ವಿಧೇಯಕ ಮಂಡಿಸಲು ಅವಕಾಶ ಕೊಟ್ಟಿದ್ದೀರಿ,ನೀವು ಅವರು ಹೇಳಿದಂತೆ ನಡೆದುಕೊಳ್ಳುತ್ತಿದ್ದೀರಿ.ನಾವು ಯಾರ ಬಳಿ ರಕ್ಷಣೆ ಕೇಳಬೇಕು.ನಾವು ಇನ್ನು ಮುಂದೆ ಸದನವನ್ನೇ ಬಹಿಷ್ಕರಿಸುತ್ತೇವೆ.ನಾವು ಜನರ ಬಳಿ ಹೋಗುತ್ತೇವೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ.ಇವರು ಸಂವಿಧಾನಕ್ಕೆ ಗೌರವ ಕೊಡುವುದಿಲ್ಲ.ಎಂದು ಜನರ ಮುಂದೆ ಹೇಳುತ್ತೇವೆ.ಜನತಾ ನ್ಯಾಯಾಲಯದ ಮುಂದೆ ಹೋಗಿ ಮಾತನಾಡುತ್ತೇವೆ.ನಾವು ಇನ್ನು ಮುಂದೆ ಅಧಿವೇಶನದಲ್ಲಿ ಪಾಲ್ಗೊಳ್ಳು ವುದಿಲ್ಲ.ನಾಳೆಯೂ ಪಾಲ್ಗೊಳ್ಳುವುದಿಲ್ಲ.ಅವರೇ ಅಧಿವೇಶನ ನಡೆಸಲಿ ಎಂದು ಹೇಳಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಈ ವೇಳೆ ಮಾತನಾಡಿದ ಸ್ಪೀಕರ್ ಕಾಗೇರಿ,ನಾನು ಬಿಎಸಿ ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಸದನದ ಗಮನಕ್ಕೆ ತಂದಿದ್ದೇನೆ.ನಾವು ಸಾಕಷ್ಟು ವಿಷಯಗಳ ಮೇಲೆ ಚರ್ಚೆಗೆ ಅವಕಾಶ ನೀಡಿದ್ದೇವೆ.ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ಬೇಧಗಳು ಇರುತ್ತವೆ.ಆದರೆ,ಸದನ ಬಹಿಷ್ಕರಿಸುತ್ತೇವೆ ಎಂದು ಹೇಳುವುದು ಶೋಭೆ ತರುವುದಲ್ಲ.ಪ್ರತಿಪಕ್ಷದ ನಾಯಕರು ಸದನ ಬಹಿಷ್ಕರಿಸುವ ನಿರ್ಧಾರವನ್ನು ವಾಪಸ್ ಪಡೆದು ಸದನಕ್ಕೆ ಹಾಜರಾಗಬೇಕು.ಪ್ರತಿಪಕ್ಷದ ನಾಯಕರು ಗುರುವಾರದ ಕಲಾಪಕ್ಕೆ ಹಾಜರಾಗುವ ವಿಶ್ವಾಸ ಇದೆ ಎಂದರು.

ಈ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಸದನ ಸಲಹಾ ಸಮಿತಿಯಲ್ಲಿ ಗೋಹತ್ಯೆ ನಿಷೇಧ ಹಾಗೂ ಲವ್ ಜಿಹಾದ್ ಬಿಲ್‌ಗಳನ್ನು ಮುಂದಿನ ಅಧಿವೇಶನದಲ್ಲಿ ತರುತ್ತೇವೆ ಎಂದು ಹೇಳಿದ್ದರು.ಆದರೆ,ಈಗ ಏಕಾಏಕಿ ಬಿಲ್ ಮಂಡನೆ ಮಾಡಿರುವುದನ್ನು ಖಂಡಿಸಿ ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿದರು.

ಸದನವನ್ನು ನಿಮ್ಮ ಪಕ್ಷದ ಕಚೇರಿಯನ್ನಾಗಿ ಮಾಡಬೇಡಿ ಬಿಲ್ ಮಂಡನೆ ಬಗ್ಗೆ ಯಾವುದೇ ಅವಕಾಶ ಇಲ್ಲ ಎಂದು ಚರ್ಚೆಯಾಗಿದೆ.ನಾವು ಕಪ್ಪು ಪಟ್ಟಿ ಧರಿಸಿಕೊಂಡು ಬಂದಾಗ ಅದನ್ನು ತೆಗೆದು ಬರುವಂತೆ ಮಾರ್ಷಾಲ್‌ಗಳು ತಡೆ ಹಿಡಿದಿದ್ದರು.ಆದರೆ,ಇಂದು ಕೇಸರಿ ಶಾಲ್ ಹಾಕಿಕೊಂಡು ಬಂದಿದ್ದಾರೆ.ಎಂದು ಪಾಯಿಂಟ್ ಆಫ್ ಆರ್ಡರ್ ಎತ್ತಿದರು.

ಅವರ ಪಾಯಿಂಟ್ ಆಫ್ ಆರ್ಡರ್‌ಗೆ ಸ್ಪೀಕರ್ ಕಾಗೇರಿ ಪ್ರತಿಕ್ರಿಯಿಸಿ,ನಿನ್ನೆ ಪ್ರತಿಪಕ್ಷದ ನಾಯಕರು ಸೇರಿ ಬಹುತೇಕ ಕಾಂಗ್ರೆಸ್ ನಾಯಕರು ಕಪ್ಪು ಪಟ್ಟಿ ಧರಿಸಿಕೊಂಡು ಬಂದಿದ್ದರು.ಕಪ್ಪು ಪಟ್ಟಿ ಹಾಕಿಕೊಂಡು ಬಂದವರಿಗೆ ಬಿಟ್ಟಿದ್ದೇನೆ.ಇನ್ನು ಕೇಸರಿ ಶಾಲ್ ಹಾಕಿಕೊಂಡು ಬಂದವರಿಗೆ ಬಿಡುವುದಿಲ್ಲ ಎನ್ನಲಾಗುತ್ತದೆಯೇ ಎಂದು ಅವರ ಪಾಯಿಂಟ್ ಆಫ್ ಆರ್ಡರ್‌ನ್ನು ತಿರಸ್ಕಿರಿಸಿದರು.

ಆ ಸಂದರ್ಭದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಎಚ್.ಕೆ. ಪಾಟೀಲರೇ ಇನ್ನು ಮುಂದೆ ನಿಮ್ಮ ಜೀವನ ಕಪ್ಪು ಪಟ್ಟಿಯಾಗುತ್ತದೆ. ನಮ್ಮದು ಕೇಸರಿಮಯವಾಗಿರುತ್ತದೆ ಎಂದು ಆ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಮೇಜ್ ಕುಟ್ಟಿ ಸಂಭ್ರಮಿಸಿದರು.

ಗೋಹತ್ಯೆ ನಿಷೇಧ ವಿಧೇಯಕದ ಪ್ರಮುಖಾಂಶಗಳು :

 • ಹಸು,ಕರು,ದನ,ಎಮ್ಮೆಗಳ ಹತ್ಯೆಗೆ ಸಂಪೂರ್ಣ ನಿಷೇಧ
 • ೧೩ ವರ್ಷದ ಒಳಗಿನ ಕೋಣಗಳನ್ನು ಹತ್ಯೆ ಮಾಡುವಂತಿಲ್ಲ.
 • ಮೊದಲ ಸಲ ಗೋಹತ್ಯೆ ಮಾಡಿದರೆ ೩ ರಿಂದ ೭ ವರ್ಷಕ್ಕೆ ಶಿಕ್ಷೆ ಏರಿಕೆ
 • ೫೦ ಸಾವಿರದಿಂದ ೫ ಲಕ್ಷಕ್ಕೆ ದಂಡ ಏರಿಕ
 • ಗೋಹತ್ಯೆ ಪುನರಾವರ್ತನೆಯಾದರೆ ೧ ಲಕ್ಷದಿಂದ ೧೦ ಲಕ್ಷ ದಂಡ ೭ ವರ್ಷ ಜೈಲ
 • ಗೋಹತ್ಯೆ ಮಾಡುವವರಿಗೆ ನಿರ್ಧಿಷ್ಟ ಅವಧಿವರೆಗೆ ಜಾಮೀನು ನೀಡುವಂತಿಲ್ಲ.
 • ಜಾನುವಾರುಗಳ ವಧೆ ಮಾಡುವುದು ಅಥವಾ ವಧೆ ಮಾಡಲು ಸಹಕರಿಸುವುದು ಅಪರಾಧ
 • ಹತ್ಯೆ ಮಾಡುವ ಉದ್ದೇಶದಿಂದ ಜಾನುವಾರುಗಳ ಸಾಗಾಟ ಮತ್ತು ಸಾಗಾಟಕ್ಕೆ ಸಹಕಾರ ನೀಡುವುದು ಅಪರಾಧ
 • ಕೃಷಿ ಹಾಗೂ ಪಶು ಸಂಗೋಪನೆ ಉದ್ದೇಶದಿಂದ ಜಾನುವಾರುಗಳ ಸಾಗಾಟಕ್ಕೆ ಅಡ್ಡಿಯಿಲ್ಲ
 • ಜಾನುವಾರುಗಳ ಹತ್ಯೆ ಉದ್ದೇಶದಿಂದ ರಾಜ್ಯ ಮತ್ತು ಅಂತರ್ ರಾಜ್ಯದಲಿ ಸಾಗಾಟ ಮಾಡುವಂತಿಲ್ಲ.
 • ಕೃಷಿ ಮತ್ತು ಪಶು ಸಂಗೋಪನೆ ಉದ್ದೇಶದಿಂದ ಅಂತರ್ ರಾಜ್ಯ ಸಾಗಾಟ ಮಾಡಲು ಸಂಬAಧಿಸಿದ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು
 • ಕೃಷಿ ಚಟುವಟಿಕೆಗೆ ಗೋವುಳ ಸಾಗಾಣಿಗೆ ಅನುಮತಿ ಮತ್ತು ನಿರ್ಧಿಷ್ಟ ಶುಲ್ಕ ನಿಗದಿ ಮಾಡಲಾಗುವುದು.
 • ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಮಾರಾಟ ಮಾಡುವುದು, ಖರೀದಿ ಮಾಡುವುದು ಅಥವಾ ಖರೀದಿ ಮಾಡುವಂತೆ ಪ್ರೇರೇಪಿಸುವುದು ನಿರ್ಬಂಧ
 • ಖಾಯಿಲೆ ಇದೆ ಎಂದು ಪಶು ವೈದ್ಯಾಧಿಕಾರಿ ಅನುಮತಿ ನೀಡಿದರೆ, ಅದನ್ನು ಹತ್ಯೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
 • ಯಾರಾದರೂ ಹಸು ಸಾಕಲು ಸಾಧ್ಯವಿಲ್ಲ ಎಂದು ನೀಡಿದರೆ, ಅಂತಹ ಜಾನುವಾರುಗಳನ್ನು ಪೋಷಿಸಲು ಗೋಶಾಲೆ ತೆರೆಯಲು ನಿರ್ಧಾರ.
 • ಪ್ರಕರಣಗಳ ತ್ವರಿತ ವಿಲೇವಾರಿಗೆ ನ್ಯಾಯಾಲಯ ಸ್ಥಾಪನೆ
 • ಗೋಹತ್ಯೆ ತಡೆಯಲು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಅಧಿಕಾರ ನೀಡಲಾಗಿದೆ.

ನೂತನ ತಿದ್ದುಪಡಿ ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಸಬ್ ಇನ್ಸಪೆಕ್ಟರ್ ಮೇಲಿನ ಅಧಿಕಾರಿ ಗೋಹತ್ಯೆ ನಡೆಯುವ ಅಥವಾ ಅಂತಹ ಉದ್ದೇಶಕ್ಕೆ ಜಾನುವಾರುಗಳ ಬಳಕೆಮಾಡುತ್ತಿರುವುದು ಗಮನಕ್ಕೆ ಬಂದರೆ,ಅಂತಹ ಪ್ರದೇಶವನ್ನು ಸೀಜ್ ಮಾಡಿ,ಜಾನುವಾರುಗಳನ್ನು ವಶಪಡಿಸಿಕೊಳ್ಳಲು ಅಧಿಕಾರ ನೀಡಲಾಗಿದೆ

ಈಗಾಗಲೇ ನಡೆಯುತ್ತಿರುವ ಕಸಾಯಿ ಖಾನೆಗಳನ್ನು ರದ್ದುಗೊಳಿಸಿ,ಜಿಲ್ಲೆಗೊಂದು ಗೋಶಾಲೆ ತೆರೆದು ಗೋಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು.ಗೋವುಗಳ ವೈಜ್ಞಾನಿಕ ಸಮೀಕ್ಷೆ ಮಾಡಿ ಆಧಾರ ಮಾದರಿ ಕಾರ್ಡ್ ಮಾಡಬೇಕು ಎಂದು ಬಿಜೆಪಿ ಸದಸ್ಯರ ಅರವಿಂದ ಲಿಂಬಾವಳಿ ಮನವಿ ಮಾಡಿದರು

ಇದಕ್ಕೂ ಮುನ್ನ ಮಾತನಾಡಿದ ಕೆ.ಜಿ.ಬೋಪಯ್ಯ ಗೋಹತ್ಯೆ ಮತ್ತು ಸಾಗಾಣಿಕೆ ಮಾಡುವವರಿಗೆ ಜಾಮೀನು ನೀಡಬಾರದು.ಪೊಲೀಸ್ ಠಾಣೆಯಲ್ಲಿ ಜಾಮೀನು ನೀಡಿದರೆ ದುರುಪಯೋಗ ವಾಗುವುದು.ಹೀಗಾಗಿ ಜಾಮೀನು ರಹಿತ ಬಂಧನ ಅವಕಾಶ ನೀಡಬೇಕೆಂದು ಇದೇ ವೇಳೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here