ನವದೆಹಲಿ:
ಬ್ಯಾಂಕುಗಳಿಂದ ಪಡೆದ ಸಾವಿರಾರು ಕೋಟಿ ರೂ ಸಾಲ ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯಮಲ್ಯ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬೆನ್ನಿತ್ತಿದೆ. ಫ್ರಾನ್ಸ್‌ನಲ್ಲಿ ಮಲ್ಯ ಹೊಂದಿದ್ದ ಸುಮಾರು 1.6 ಮಿಲಿಯನ್ ಯೂರೋ ಮೌಲ್ಯದ ಆಸ್ತಿಯನ್ನು ಶುಕ್ರವಾರ ವಶಪಡಿಸಿಕೊಂಡಿದೆ.
ಇ ಡಿ ಮಾಡಿದ ಮನವಿಯಂತೆ ಫ್ರಾನ್ಸ್ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ನಿಗ್ರಹ ಕಾಯ್ದೆಯಡಿ ಪ್ಯಾರೀಸ್ 32 ಅವೆನ್ಯೂ ಫೋಚ್‌ನಲ್ಲಿರುವ ವಿಜಯ್ ಮಲ್ಯ ಅವರ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಭಾರತೀಯ ಕರೆನ್ಸಿಯಲ್ಲಿ ವಶಪಡಿಸಿಕೊಂಡ ಆಸ್ತಿಗಳ ಮೌಲ್ಯ ಸುಮಾರು 14 ಕೋಟಿ ರೂ ಮೌಲ್ಯದ್ದಾಗಿದೆ.
ED seizes asset worth 1.6 Million Euros through French authority located at 32 Avenue FOCH, France of Vijay Mallya under PMLA in a #BankFraudCase
— ED (@dir_ed) December 4, 2020
ಕಿಂಗ್‌ಫಿಶರ್ ಏರ್‌ಲೈನ್ಸ್ ಸಂಸ್ಥೆಗಾಗಿ ಸರ್ಕಾರಿ ಸ್ವಾಮ್ಯದ ಭಾರತೀಯ ಬ್ಯಾಂಕುಗಳಿಂದ ತೆಗೆದುಕೊಂಡ ಬೃಹತ್ ಮೊತ್ತದ ಸಾಲಗಳನ್ನು ಮರುಪಾವತಿಸದೆ ವಿಜಯ ಮಲ್ಯ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಬ್ಯಾಂಕುಗಳಿಗೆ ಅಸಲು, ಬಡ್ಡಿ ಸೇರಿದಂತೆ ಒಟ್ಟು 9,000 ಕೋಟಿ ರೂ. ಪಾವತಿಸಬೇಕಿದೆ. ಮಲ್ಯರನ್ನು ಲಂಡನ್‌ನಿಂದ ಹಸ್ತಾಂತರಿಸಿಕೊಳ್ಳಲು ಭಾರತ ಸರ್ಕಾರ ತೀವ್ರವಾಗಿ ಶ್ರಮಿಸುತ್ತಿದೆ. 2016 ರ ಮಾರ್ಚ್ ನಿಂದ ಮಲ್ಯ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಸದ್ಯ ಜಾಮೀನು ಮೇಲಿರುವ ಅವರನ್ನು ಭಾರತಕ್ಕೆ ಹಸ್ತಾಂತರಿಸಿಕೊಳ್ಳಲು ಕಾನೂನು ತೊಡಕುಗಳಿದ್ದು, ಪರಿಹರಿಸಿದ ನಂತರ ಮಲ್ಯ ಅವರನ್ನು ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.