Home ಬೆಂಗಳೂರು ನಗರ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: ಆರೋಪಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

27
0
Tension at Shivamogga after Hindu Youth murdered Harsha

ಬೆಂಗಳೂರು:

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8ನೇ ಆರೋಪಿಯ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ 8ನೇ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠ ವಜಾಗೊಳಿಸಿ ಆದೇಶಿಸಿದೆ. ಜಾಮೀನು ಅರ್ಜಿ ತಿರಸ್ಕರಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಕರಣದ ಎಂಟನೇ ಆರೋಪಿ ಫರಾಜ್‌ ಪಾಷಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ಜಿ. ಬಸವರಾಜ ಅವರಿದ್ದ ನ್ಯಾಯಪೀಠ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿದೆ.

ಆರ್ಜಿದಾರರು (ಆರೋಪಿ) ಪ್ರಕರಣದಲ್ಲಿ ಭಯೋತ್ಪಾದಕ ಸಂಘಟನೆ ಸದಸ್ಯನಾಗಿದ್ದಾನೆಯೇ ಇಲ್ಲವೇ ಎಂಬುದರ ಕುರಿತು ಈ ಹಂತದಲ್ಲಿ ಪರಿಗಣಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ಯುಎಪಿಎ ಕಾಯಿದೆಯಡಿ ಮಾಡಲಾದ ಆರೋಪಗಳು ನಿಸ್ಸಂದೇಹವಾಗಿ ರಾಷ್ಟ್ರದ ವಿರುದ್ಧದ ಅಪರಾಧಗಳಾಗಿದ್ದು, ದೇಶದ ಏಕತೆ, ಸಮಗ್ರತೆ, ಭದ್ರತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುತ್ತವೆ ಎಂದಿದೆ.

ಜೊತೆಗೆ, ಇದು ಸಮಾಜದ ವಿರುದ್ಧದ ಅಪರಾಧವೂ ಹೌದು. ಈ ಪ್ರಕರಣದ ವಾಸ್ತವಾಂಶಗಳು ವಿವರಿಸುವಂತೆ ಕೋಮುವಾದಿಗಳಂತೆ ಕಂಡುಬರುವ ಎಲ್ಲ ಆರೋಪಿಗಳಿಗೆ ಮೃತ ಹರ್ಷನ ಬಗ್ಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಹಿಂದೂಗಳಲ್ಲಿ ಭಯ ಬಿತ್ತುವ ಉದ್ದೇಶದಿಂದ ಹತ್ಯೆಗೆ ಹರ್ಷನನ್ನು ಆಯ್ದುಕೊಳ್ಳಲಾಗಿದೆ. ಹೀಗಾಗಿ ಮೇಲ್ಮನವಿದಾರನ ವಯಸ್ಸು ಚಿಕ್ಕದು, ಅತನಿಗೆ ಕ್ರಿಮಿನಲ್‌ ಹಿನ್ನೆಲೆ ಇಲ್ಲ ಎಂಬುದು ಆತನಿಗೆ ಜಾಮೀನು ನೀಡಲು ಪರಿಗಣಿಸಬೇಕಾದ ಆಧಾರವಲ್ಲ ಎಂದ ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಸಾಕ್ಷ್ಯಾಧಾರಾಗಳ ಉಲ್ಲೇಖ
ಸಿಸಿಟಿವಿಯ ದೃಶ್ಯಾವಳಿಗಳು, ಫೋನ್‌ ಕರೆ ವಿವರಗಳು ಹಾಗೂ ಸಾಕ್ಷಿಗಳ ಹೇಳಿಕೆಗಳು ಕೂಡ ಕೃತ್ಯದಲ್ಲಿ ಮೇಲ್ಮನವಿದಾರನ ಸಕ್ರಿಯ ಭಾಗವಹಿಸುವಿಕೆಯನ್ನು ಸಾಬೀತುಪಡಿಸುತ್ತದೆ. ಆದ್ದರಿಂದ ಮೇಲ್ನೋಟಕ್ಕೆ ಆರೋಪಿ ವಿರುದ್ಧ ತಾನು ಮಾಡಿದ್ದ ವಾದದಲ್ಲಿ ಹುರುಳಿದೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ಸಮರ್ಥವಾಗಿದೆ. ತನಿಖಾಧಿಕಾರಿಗಳು ಸಲ್ಲಿಸಿರುವ ಸಾಕ್ಷ್ಯಾಧಾರಗಳ ಪ್ರಕಾರ, ಪ್ರಕರಣದ 1 ರಿಂದ 6 ನೇಯ ಆರೋಪಿಗಳು ಅನೌಪಚಾರಿಕವಾಗಿ ಸಂಘಟಿತರಾಗಿ ಭಯ ಬಿತ್ತಲು ಹರ್ಷನನ್ನು ಕೊಲ್ಲುವುದಕ್ಕೆ ನಿರ್ಧರಿಸಿದ್ದರು. ಪ್ರಕರಣದ 8 ನೇ ಆರೋಪಿಯನ್ನು ನಂತರ ಹೆಸರಿಸಿದ್ದರೂ, ಒಂದರಿಂದ ಏಳನೇ ಸಂಖ್ಯೆಯ ಆರೋಪಿಗಳ ಸಂಚನ್ನು ತಿಳಿದು ನಂತರ ಹರ್ಷನನ್ನು ಹಿಂಬಾಲಿಸಿ ಆ ಆರೋಪಿಗಳಿಗೆ ಮಾಹಿತಿ ನೀಡಿದ್ದರಿಂದ ಅವರು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ನೆರವಾಗಿದ್ದಾರೆ. ಆದ್ದರಿಂದ ಮೇಲ್ಮನವಿದಾರರೂ ಕೂಡ ಪಿತೂರಿಯ ಭಾಗವಾಗಿದ್ದಾನೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ವಿಚಾರಣೆ ಸಂದರ್ಭದಲ್ಲಿ ಎನ್ಐಎ ಪರವಾಗಿ ವಾದ ಮಂಡಿಸಿದ ವಿಶೇಷ ಪ್ರಾಸಿಕ್ಯೂಡರ್ ಪಿ. ಪ್ರಸನ್ನಕುಮಾರ್, ಆರೋಪಿ ವಿರುದ್ಧ ಆರೋಪಪಟ್ಟಿಯಲ್ಲಿ ಮಾಡಲಾದ ಆರೋಪ ಮೇಲ್ನೋಟಕ್ಕೆ ನಿಜ ಎಂದು ಪ್ರಾಸಿಕ್ಯೂಷನ್‌ ಒಮ್ಮೆ ಸಾಬೀತುಪಡಿಸಿದರೂ ಯಾವುದೇ ಕಾರಣಕ್ಕೂ ಜಾಮೀನು ನೀಡುವಂತಿಲ್ಲ. ಆರೋಪಿಗೆ ಚಿಕ್ಕ ವಯಸ್ಸು, ಅಪರಾಧದ ಹಿನ್ನೆಲೆಯಲ್ಲಿ ಎಂಬಂತಹ ಅಂಶಗಳು ನ್ಯಾಯಾಲಯ ಜಾಮೀನು ನೀಡಲು ಪ್ರಭಾವ ಬೀರಬಾರದು ಎಂದು ವಾದ ಮಂಡಿಸಿದ್ದರು.

ಫೆಬ್ರವರಿ 20, 2022 ರಂದು ಹತ್ಯೆಗೀಡಾದ ಹರೀಶ್‌ನ ಚಲನವಲನಗಳ ಮೇಲೆ ನಿಗಾ ಇರಿಸುವ ಮೂಲಕ ಇನ್ನೊಬ್ಬ ಆರೋಪಿಗೆ ಮಾಹಿತಿ ಒದಗಿಸುವವನಾಗಿ ವರ್ತಿಸಿದ್ದಾನೆ ಎಂಬುದು ಮೇಲ್ಮನವಿಯ ವಿರುದ್ಧದ ಆರೋಪಗಳಾಗಿವೆ. ವಿಶೇಷ ನ್ಯಾಯಾಲಯವು ಡಿಸೆಂಬರ್ 17, 2022 ರಂದು ಅರ್ಜಿದಾರರ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.

LEAVE A REPLY

Please enter your comment!
Please enter your name here