ಬೆಂಗಳೂರು:
ಪ್ರತಿ ವರ್ಷ ಆಗಸ್ಟ್ 29 ರಂದು ಕ್ರೀಡಾಪಟು ಮತ್ತು ಕ್ರೀಡಾ ಅಭಿಮಾನಿಗಳಿಗೆ ಬಹಳ ಮುಖ್ಯವಾದ ದಿನವಾಗಿದ್ದು, ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ರವರ ಹುಟ್ಟುಹಬ್ಬದ ಗೌರವಾರ್ಥವಾಗಿ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಬಿ.ನಾಗೇಂದ್ರ ಅವರು ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, 2023 ನೇ ಸಾಲಿನ ರಾಷ್ಟ್ರಿಯ ಕ್ರೀಡಾ ದಿನದ ಘೋಷವಾಕ್ಯ “ಎಲ್ಲರನ್ನು ಒಳಗೊಳ್ಳುವ ಹಾಗೂ ಸಧೃಡ ಸಮಾಜಕ್ಕಾಗಿ ಕ್ರೀಡೆ” ( sports as an enabler of an inclusive and fit society ) ಈ ಘೋಷವಾಕ್ಯದ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ವಿವಿಧ ರೀತಿಯ 30 ಕ್ಕೂ ಹೆಚ್ಚು ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಆಗಸ್ಟ್ 29 ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನ -2023 ರ ಆಚರಣೆಯನ್ನು ಬಹಳ ವಿನೂತನ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. ಅಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಒಲಂಪಿಕ್ ಕ್ರೀಡೆಗಳು, ಸಾಹಸ ಕ್ರೀಡೆಗಳು, ದೇಸಿ ಮತ್ತು ಸಾಂಪ್ರದಾಯಿಕ ಕ್ರೀಡೆಗಳು ಹಾಗೂ ಮನರಂಜನೆ ಕ್ರೀಡೆಗಳು ಸೇರಿದಂತೆ 30 ಕ್ಕೂ ಹೆಚ್ಚು ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಸಾರ್ವಜನಿಕರಿಗೆ ವಿವಿಧ ಕ್ರೀಡೆಗಳ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸಾಮಗ್ರಿ ಹಾಗೂ ಮ್ಯಾಟ್ ಗಳ ಮೇಲೆ ಸ್ವತಃ ಆಟವಾಡಿ ಆನಂದಿಸುವ ಅವಕಾಶವನ್ನು ಒದಗಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಹಾಗೂ ಮುಕ್ತ ಪ್ರವೇಶವಿರಲಿದೆ. ಅಥ್ಲೆಟಿಕ್ಸ್, ಕಬ್ಬಡ್ಡಿ, ವಾಲಿಬಾಲ್, ಆರ್ಚರಿ, ಮಲ್ಲಕಂಬ, ಬಾಸ್ಕೆಟ್ ಬಾಲ್, ಸ್ಪೋಟ್ರ್ಸ್ ಕ್ಲೇಬಿಂಗ್, ರ್ಯಾಪೆಲ್ಲಿಂಗ್ ಫೆನ್ಸಿಂಗ್, ಬ್ಯಾಕಿಂಗ್, ಹಾಕಿ, ಆರ್ಚರಿ, ಜೂಡೋ, ಟೇಕ್ವಾಡೋ, ಮಣ್ಣಿನ ಕುಸ್ತಿ, ಹಗ್ಗಜಗ್ಗಾಟ, ಜುಮಾರಿಂಗ್, ಜಿಪ್ ಲೈನ್, ಸ್ಕೆಟಿಂಗ್, ಸ್ಕೇಟ್ ಬೋಡಿರ್ಂಗ್, ಚೆಸ್ ಪುಟ್ಬಾಲ್ ಇತ್ಯಾದಿ ಕ್ರೀಡೆಗಳಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಈ ಬಾರಿ ರಾಜ್ಯದ ಎಲ್ಲಾ ಶಾಲಾ- ಕಾಲೇಜುಗಳ ದೈಹಿಕ ಶಿಕ್ಷಕರಿಗೆ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಸನ್ಮಾನ ಮಾಡುವಂತೆ ಸರ್ಕಾರದ ವತಿಯಿಂದ ಸುತ್ತೋಲೆ ಹೊರಡಿಸಲಾಗುತ್ತಿದೆ. ಆಗಸ್ಟ್ 21 ರಿಂದ 29 ರವರೆಗೆ ರಾಜ್ಯದಾದ್ಯಂತ ಪ್ರತಿ ದಿನ ಒಂದು ಕ್ರೀಡಾ ಸಂಬಂಧಿತ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಈ ವಿನೂತನ ಕ್ರೀಡಾ ಹಬ್ಬದಲ್ಲಿ ಕ್ರೀಡಾಪಟುಗಳು ಹಾಗೂ ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.