ಬಾಣಸವಾಡಿಯ ಪ್ರಾಣಿಗಳ ತ್ಯಾಜ್ಯ ವರ್ಗಾವಣೆ ದೂರಿಗೆ ಸಂಬಂಧಿಸಿದಂತೆ ತೆಗೆದ ವಾಹನದ ಚಿತ್ರ. ಚಿತ್ರ: ಬೆಂಗಳೂರು ಉತ್ತರ ನಗರ ಪಾಲಿಕೆ.
ಬೆಂಗಳೂರು: ಬಾಣಸವಾಡಿಯಲ್ಲಿ ಪ್ರಾಣಿಗಳ ತ್ಯಾಜ್ಯವನ್ನು ಅಕ್ರಮವಾಗಿ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ತುಂಬಿಸಿದ ಆರೋಪದ ಪ್ರಕರಣದಲ್ಲಿ ಸಾರ್ವಜನಿಕರು ನೀಡಿದ ಫೋಟೊಗಳನ್ನು ಆಧರಿಸಿ ಮಾಲೀಕರನ್ನು ಪತ್ತೆಹಚ್ಚಿರುವ ಬೆಂಗಳೂರು ಉತ್ತರ ನಗರ ಪಾಲಿಕೆ, ಒಟ್ಟು ₹30,000 ದಂಡ ವಿಧಿಸಿರುವುದಾಗಿ ತಿಳಿಸಿದೆ.
ಪಾಲಿಕೆಯ ಸರ್ವಜ್ಞನಗರ ವಿಭಾಗದ ವಾರ್ಡ್ ಸಂಖ್ಯೆ 27ರ ಚಿಕನ್ ರಸ್ತೆಯಲ್ಲಿ ಒಂದು ವಾಹನದಲ್ಲಿದ್ದ ತ್ಯಾಜ್ಯವನ್ನು ದೊಡ್ಡ ವಾಹನಕ್ಕೆ ತುಂಬಿಸಲಾಗುತ್ತಿತ್ತು ಎಂಬ ದೂರು ಬಂದಿತ್ತು. ಅಕ್ಟೋಬರ್ 7ರಂದು ಸಾರ್ವಜನಿಕರು ಘಟನೆಯ ಫೋಟೊ ಹಾಗೂ ವಿಡಿಯೊಗಳನ್ನು ಪಾಲಿಕೆಯ ಗಮನಕ್ಕೆ ತಂದಿದ್ದರು.
ದೂರು ಬಂದ ತಕ್ಷಣ ಮಾರ್ಷಲ್ಗಳನ್ನು ಸ್ಥಳಕ್ಕೆ ಕಳುಹಿಸಲಾಯಿತಾದರೂ, ಅವರು ತಲುಪುವಷ್ಟರಲ್ಲಿ ವಾಹನಗಳು ಅಲ್ಲಿಂದ ತೆರಳಿದ್ದವು ಎಂದು ಪಾಲಿಕೆ ತಿಳಿಸಿದೆ. ಬಳಿಕ ಸಾರ್ವಜನಿಕರು ನೀಡಿದ ಫೋಟೊಗಳಲ್ಲಿ ಕಾಣುವ ನೋಂದಣಿ ಸಂಖ್ಯೆಗಳನ್ನು ಆಧರಿಸಿ ವಾಹನಗಳು ಹಾಗೂ ಅವುಗಳ ಮಾಲೀಕರನ್ನು ಪತ್ತೆಹಚ್ಚಲಾಗಿದೆ.
ಸಂಬಂಧಪಟ್ಟ ವಾಹನಗಳು ಮತ್ತು ಪ್ರಾಣಿಗಳ ತ್ಯಾಜ್ಯ ತನ್ನ ವ್ಯಾಪ್ತಿಗೆ ಸೇರಿರಲಿಲ್ಲ ಎಂದು ಅಕ್ಟೋಬರ್ 12ರ ಪ್ರಕಟಣೆಯಲ್ಲಿ ಪಾಲಿಕೆ ಹೇಳಿದೆ. ಆದರೂ, ನಡೆದ ಘಟನೆಯ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿ ₹30,000 ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.
ಇಂತಹ ಘಟನೆಗಳು ಗಮನಕ್ಕೆ ಬಂದಾಗ ಫೋಟೊ ಅಥವಾ ವಿಡಿಯೊ ಸಹಿತ ಪಾಲಿಕೆಗೆ ತಿಳಿಸಿ, ಸ್ವಚ್ಛತೆ ಕಾಪಾಡುವ ಕಾರ್ಯಕ್ಕೆ ಸಹಕರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
