ಬೆಂಗಳೂರಿನ ಟೌನ್ ಹಾಲ್ನಲ್ಲಿ ಅಭಿಯಂತರರಿಗಾಗಿ ನಡೆದ ಡಿಜಿಟಲ್ ಟ್ವಿನ್ ವಿಚಾರ ಸಂಕಿರಣ. ಚಿತ್ರ: ಜಿಬಿಎ.
ಬೆಂಗಳೂರು: ರಸ್ತೆ, ಮಳೆನೀರು ಚರಂಡಿ ಹಾಗೂ ಪ್ರವಾಹ ನಿರ್ವಹಣೆ ಯೋಜನೆಗಳಲ್ಲಿ ಡಿಜಿಟಲ್ ಟ್ವಿನ್ ತಂತ್ರಜ್ಞಾನ ಬಳಕೆಗೆ ಅಭಿಯಂತರರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆರ್.ವಿ. ಸಂಸ್ಥೆಗಳೊಂದಿಗೆ ಜ್ಞಾನ ಪಾಲುದಾರಿಕೆ ಒಡಂಬಡಿಕೆಗೆ ಸಹಿ ಹಾಕಿದೆ.
ಅಭಿಯಂತರರ ತಾಂತ್ರಿಕ ಕೌಶಲ್ಯ ಹೆಚ್ಚಿಸಲು ಹಾಗೂ ಮೂಲಸೌಕರ್ಯ ನಿರ್ವಹಣೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯನ್ನು ಉತ್ತೇಜಿಸಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೊದಲ ಹೆಜ್ಜೆ ಇದಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಪ್ರಕಟಣೆ ತಿಳಿಸಿದೆ. ನಗರ ಮೂಲಸೌಕರ್ಯದಲ್ಲಿ ಡಿಜಿಟಲ್ ಟ್ವಿನ್ ಬಳಕೆ ಕುರಿತು ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ ಸೋಮವಾರ ಟೌನ್ ಹಾಲ್ನಲ್ಲಿ ಅಭಿಯಂತರರಿಗಾಗಿ ವಿಚಾರ ಸಂಕಿರಣ ಆಯೋಜಿಸಿತ್ತು.
ಸಮಸ್ಯೆ ಉಂಟಾದ ನಂತರ ಪ್ರತಿಕ್ರಿಯಿಸುವ ಬದಲು, ತಂತ್ರಜ್ಞಾನದ ನೆರವಿನಿಂದ ಸಂಭಾವ್ಯ ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸಿ ತಡೆಗಟ್ಟುವ ಕ್ರಮ ಕೈಗೊಳ್ಳುವತ್ತ ಸಾಗಬೇಕು ಎಂದು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಹೇಳಿದರು. ಆಡಳಿತ ಮತ್ತು ನಗರ ಯೋಜನೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುವುದರ ಜತೆಗೆ ವಿಶ್ವವಿದ್ಯಾಲಯಗಳ ಸಂಶೋಧನೆ ಹಾಗೂ ತಾಂತ್ರಿಕ ಪರಿಣತಿಯನ್ನು ಬಳಸಿಕೊಳ್ಳಲು ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ ಎಂದರು.
ಮಳೆನೀರು ಎಲ್ಲಿ ನಿಲ್ಲಬಹುದು ಎಂಬುದರ ವಿಶ್ಲೇಷಣೆ
ನೈಜ ಮೂಲಸೌಕರ್ಯದ ಡಿಜಿಟಲ್ ಪ್ರತಿರೂಪವೇ ಡಿಜಿಟಲ್ ಟ್ವಿನ್. ರಸ್ತೆಗಳು, ಕಟ್ಟಡಗಳು, ಚರಂಡಿಗಳು, ಕುಡಿಯುವ ನೀರಿನ ಕೊಳವೆಗಳು, ವಿದ್ಯುತ್ ಜಾಲ, ಬೀದಿ ದೀಪಗಳು, ಕೆರೆ ಮತ್ತು ಉದ್ಯಾನಗಳ ಮಾಹಿತಿಯನ್ನು ಒಟ್ಟುಗೂಡಿಸಿ ಅವುಗಳ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ, ಪರಿಸ್ಥಿತಿಯ ವಿಶ್ಲೇಷಣೆ ಹಾಗೂ ಸಂಭಾವ್ಯ ಸಮಸ್ಯೆಗಳ ಮುನ್ನಂದಾಜಿಗೆ ಇದನ್ನು ಬಳಸಬಹುದು ಎಂದು ಪ್ರಕಟಣೆ ವಿವರಿಸಿದೆ.
ಉದಾಹರಣೆಗೆ, ರಸ್ತೆಯಲ್ಲಿ ನೀರು ನಿಲ್ಲುವ ಸಮಸ್ಯೆ ಇದ್ದರೆ ಅದರ ಎತ್ತರ, ಇಳಿಜಾರು, ಚರಂಡಿ ವ್ಯವಸ್ಥೆ, ಮಳೆಯ ಪ್ರಮಾಣ ಮತ್ತು ನೀರಿನ ಹರಿವಿನ ಮಾಹಿತಿಯನ್ನು ವಿಶ್ಲೇಷಿಸಬಹುದು. ನೀರು ಯಾವ ಕಡೆ ಸಂಗ್ರಹವಾಗಬಹುದು ಹಾಗೂ ಯಾವ ಭಾಗದಲ್ಲಿ ಸುಧಾರಣೆ ಬೇಕು ಎಂಬುದನ್ನು ಗುರುತಿಸಲು ಇದು ನೆರವಾಗಬಹುದು ಎಂದು ತಿಳಿಸಿದೆ.
ವೈಟ್ ಟಾಪಿಂಗ್ ರಸ್ತೆ ಕಾಮಗಾರಿ, ಮೇಲ್ಸೇತುವೆ, ಪ್ರವಾಹ ನಿರ್ವಹಣೆ, ಬೀದಿ ದೀಪ, ಪಾದಚಾರಿ ಮಾರ್ಗ ಸುಧಾರಣೆ, ಜಂಕ್ಷನ್ ಅಭಿವೃದ್ಧಿ, ಮಳೆನೀರು ಚರಂಡಿ ಹಾಗೂ ವಿಪತ್ತು ನಿರ್ವಹಣೆ ಯೋಜನೆಗಳನ್ನು ರೂಪಿಸಲು ಈ ತಂತ್ರಜ್ಞಾನ ಸಹಕಾರಿಯಾಗಬಹುದು ಎಂದು ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ಹೇಳಿದರು. ವಿನ್ಯಾಸ, ಮೇಲ್ವಿಚಾರಣೆ ಮತ್ತು ನಿರ್ವಹಣೆಗೂ ಇದನ್ನು ಬಳಸಬಹುದು ಎಂದರು.
ಸಂಚಾರ ನಿರ್ವಹಣೆಗೆ ಮಾತ್ರ ಸೀಮಿತವಲ್ಲ
ಸಂಚಾರ ಪೊಲೀಸರು ಡಿಜಿಟಲ್ ಟ್ವಿನ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ ಎಂದು ಬಿ-ಸ್ಮೈಲ್ ಸಿಇಒ ನಿತೀಶ್ ತಿಳಿಸಿದರು. ಇದರ ಬಳಕೆ ಸಂಚಾರ ದಟ್ಟಣೆ ನಿರ್ವಹಣೆಗೆ ಮಾತ್ರ ಸೀಮಿತವಲ್ಲ. ದತ್ತಾಂಶ ವಿಶ್ಲೇಷಣೆ ಮತ್ತು ಮೂರು ಆಯಾಮದ ಮಾದರಿಗಳ ಮೂಲಕ ಮೂಲಸೌಕರ್ಯ ಯೋಜನೆಗಳನ್ನು ವೈಜ್ಞಾನಿಕವಾಗಿ ರೂಪಿಸಲು ಹಾಗೂ ಅನುಷ್ಠಾನದ ಸಮಸ್ಯೆಗಳನ್ನು ಮುಂಚಿತವಾಗಿ ಗುರುತಿಸಲು ನೆರವಾಗಬಹುದು ಎಂದರು.
ಅಭಿಯಂತರರು ನಿರಂತರವಾಗಿ ತಮ್ಮ ಕೌಶಲ್ಯ ನವೀಕರಿಸಿಕೊಂಡು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ತಮ್ಮ ಕೆಲಸದಲ್ಲಿ ಡಿಜಿಟಲ್ ಟ್ವಿನ್ ಅನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂದು ಅವರು ಕರೆ ನೀಡಿದರು.
ಹಿಂದೆ ದೇವಾಲಯ ಮತ್ತು ಪಾರಂಪರಿಕ ಕಟ್ಟಡಗಳ ಸಂಕೀರ್ಣ ವಿನ್ಯಾಸ ರೂಪಿಸಲು ಭೌತಿಕ ಕಿರು ಮಾದರಿಗಳನ್ನು ಬಳಸಲಾಗುತ್ತಿತ್ತು ಎಂದು ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕ ಡಾ. ಬಿ.ಎಸ್. ಪ್ರಹ್ಲಾದ್ ಹೇಳಿದರು. ಈಗ ಮೂಲಸೌಕರ್ಯದ ನೈಜ ಸ್ಥಿತಿಯನ್ನು ಪ್ರತಿಬಿಂಬಿಸುವ ಡಿಜಿಟಲ್ ಮಾದರಿಗಳ ಮೂಲಕ ಕಾರ್ಯನಿರ್ವಹಣೆ ವಿಶ್ಲೇಷಿಸಲು, ಸಮಸ್ಯೆಗಳನ್ನು ಊಹಿಸಲು ಹಾಗೂ ಯೋಜನೆ, ಮೇಲ್ವಿಚಾರಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ನೀರಿನ ನಷ್ಟದ ಅಂಕಿಅಂಶ ಪ್ರಸ್ತಾಪಿಸಿದ ರಮೇಶ್
ನಗರದಲ್ಲಿ ವಿವಿಧ ಕಾರಣಗಳಿಂದ ಸುಮಾರು ಶೇ.30ರಷ್ಟು ನೀರು ಪೋಲಾಗುತ್ತಿದೆ ಎಂದು ಜಲಮಂಡಳಿ ವರದಿ ಮಾಡಿತ್ತು ಎಂದು ರಮೇಶ್ ಹೇಳಿದರು. ತಂತ್ರಜ್ಞಾನದ ಬಳಕೆಯಿಂದ ದಿನಕ್ಕೆ ಸುಮಾರು 200 ದಶಲಕ್ಷ ಲೀಟರ್ (200 ಎಂಎಲ್ಡಿ) ನೀರು ಪೋಲಾಗುವುದನ್ನು ತಡೆಗಟ್ಟಿರುವುದಾಗಿಯೂ ಜಲಮಂಡಳಿ ವರದಿ ಮಾಡಿದೆ ಎಂದು ಅವರು ತಿಳಿಸಿದರು.
ನಾಗರಿಕ ಸೇವೆಗಳ ಗುಣಮಟ್ಟ ಹೆಚ್ಚಿಸಲು ದತ್ತಾಂಶ, ಕ್ಷೇತ್ರಮಟ್ಟದ ಕಾರ್ಯಾಚರಣೆ ಮತ್ತು ಹೊಣೆಗಾರಿಕೆಯ ನಡುವೆ ಸಮನ್ವಯ ಅಗತ್ಯ. ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ತಾಂತ್ರಿಕ ಪರಿಣತರು ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಕೃತಕ ಬುದ್ಧಿಮತ್ತೆ ಆಡಳಿತ ಚೌಕಟ್ಟಿನ ‘Trust is the Foundation’ ಮತ್ತು ‘People First’ ತತ್ವಗಳನ್ನು ಉಲ್ಲೇಖಿಸಿದ ರಮೇಶ್, ಸಾರ್ವಜನಿಕರ ನಂಬಿಕೆ ಹಾಗೂ ಜನಕೇಂದ್ರಿತ ಆಡಳಿತಕ್ಕೆ ಆದ್ಯತೆ ನೀಡಬೇಕೆಂದರು.
