Home ಬೆಂಗಳೂರು ನಗರ ಬಿಬಿಎಂಪಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವಲ್ಲಿ ಸಮರ್ಪಕವಾಗಿ ಕೆಲಸ ಮಾಡಿಲ್ಲ

ಬಿಬಿಎಂಪಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವಲ್ಲಿ ಸಮರ್ಪಕವಾಗಿ ಕೆಲಸ ಮಾಡಿಲ್ಲ

53
0
BBMP failed to make Bengaluru pothole free city Congress leader Ramalinga Reddy

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ಆರೋಪ

ಬೆಂಗಳೂರು:

ಹೈಕೋರ್ಟ್ ಸೂಚನೆ ಹೊರತಾಗಿಯೂ ಸರ್ಕಾರ ಹಾಗೂ ಬಿಬಿಎಂಪಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವಲ್ಲಿ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಮೊನ್ನೆ ಶಾಲಾ ಶಿಕ್ಷಕಿ ಕೂಡ ರಸ್ತೆ ಗುಂಡಿಗೆ ಬಲಿಯಾಗಿದ್ದು, ಇದುವರೆಗೂ 9 ಜನ ಬಲಿಯಾಗಿದ್ದಾರೆ. ಈ ಹಿಂದೆಯೂ ರಸ್ತೆ ಗುಂಡಿಗೆ ಜನ ಪ್ರಾಣ ಬಿಟ್ಟಿದ್ದರೂ ಬೆಂಗಳೂರು ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ರಸ್ತೆಗುಂಡಿಯಿಂದ ಸಾವು ಆಗಿರಲಿಲ್ಲ. ಹೈಕೋರ್ಟ್ ಚಾಟಿ ಬೀಸಿದ್ದರೂ, ರಸ್ತೆ ಗುಂಡಿ ಮುಚ್ಚದಿದ್ದರೆ ಇಂಜಿನಿಯರ್ ಗಳನ್ನು ಜೈಲಿಗೆ ಹಾಕುತ್ತೇವೆ ಎಂದಿದ್ದರೂ ಇದುವರೆಗೂ ರಸ್ತೆಗುಂಡಿ ಮುಚ್ಚಲು ಸಾಧ್ಯವಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಬೆಂಗಳೂರಿನಲ್ಲಿ 7-8 ಮಂತ್ರಿಗಳಿದ್ದು, ಸಿಎಂ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅವರು ಉಸ್ತುವಾರಿ ವಹಿಸಿರುವುದರಿಂದ ಹಣಕಾಸಿಗೆ ತೊಂದರೆ ಇಲ್ಲ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಈ ರೀತಿ ಆಗುತ್ತಿಲ್ಲ ಎಂದರು.

ಸಚಿವ ಆರ್.ಅಶೋಕ್ ಅವರು ಹೇಳಿದಂತೆ ಸೆಪ್ಟೆಂಬರ್ ಒಳಗೆ 1332 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳು, ಹಾಗೂ ಸೆಪ್ಟೆಂಬರ್ 30ರ ಒಳಗೆ ವಾರ್ಡ್ ಮಟ್ಟದಲ್ಲಿ 85,791 ಕಿ.ಮೀ ಉದ್ದದ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.

ಇನ್ನು ಬಿಬಿಎಂಪಿ ಬೆಂಗಳೂರು ನಗದರಲ್ಲಿ 194 ರಸ್ತೆ ಗುಂಡಿ ಎಂದು ಹೇಳುತ್ತಾರೆ. ಅಧಿಕಾರಿಗಳು ಹಾಗೂ ಸರ್ಕಾರದ ಮಧ್ಯೆ ಸಮನ್ವಯತೆ ಇಲ್ಲ. ಇಂದು ಕೂಡ ಬೆಂಗಳೂರು ರಸ್ತೆಯಲ್ಲಿ ಗುಂಡಿಗಳು ಹಾಗೇ ಇವೆ. ಇಷ್ಟು ಹೊತ್ತಿಗೆ ಗುಂಡಿ ಮುಚ್ಚುವ ಕಾರ್ಯ ಮುಗಿಯಬೇಕಿತ್ತು. ಎರಡು ತಿಂಗಳಿನಿಂದ ಮಳೆ ಇಲ್ಲ, ಹೀಗಾಗಿ ರಸ್ತೆಗಳ ಡಾಂಬರೀಕರಣ ಮಾಡಬಹುದಾಗಿತ್ತು. ಆದರೆ ಸರ್ಕಾರಕ್ಕೆ ಹಾಗೂ ಪಾಲಿಕೆಗೆ ರಸ್ತೆ ಗುಂಡಿ ಮುಚ್ಚುವ ಹಾಗೂ ಡಾಂಬರಿಕರಣ ಮಾಡುವ ಇಚ್ಚಾಶಕ್ತಿ ಇಲ್ಲ.

ಮಹನಗರ ಪಾಲಿಕೆಯ 198 ವಾರ್ಡ್ ಗಳಿಗೆ 2020-21ನೇ ಸಾಲಿನಲ್ಲಿ ಒಂದು ರೂಪಾಯಿಯೂ ಅನುದಾನ ಬಿಡುಗಡೆಯಾಗಲಿಲ್ಲ. ಇನ್ನು 2021-22ನೇ ಸಾಲಿನಲ್ಲಿ 60 ಲಕ್ಷ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದು, ಇದುವರೆಗೂ ಅದು ಕೋಡ್ ಆಗದೇ ಬಿಡುಗಡೆಯಾಗಿಲ್ಲ. ಅಲ್ಲಿಗೆ ಎರಡು ವರ್ಷಗಳ ಬಜೆಟ್ ನಲ್ಲಿ ಸರ್ಕಾರ ಬೆಂಗಳೂರಿಗೆ ಕೊಡುತ್ತೇವೆ ಎಂದಿದ್ದು ಕೇವಲ 60 ಲಕ್ಷ. ಅದು ಕೂಡ ಇನ್ನು ಬಂದಿಲ್ಲ. ಪಾಲಿಕೆಗೆ ಹಣ ನೀಡದೆ ಸರ್ಕಾರ ಗುಂಡಿ ಮುಚ್ಚಿ ಎಂದರೆ ಅದು ಹೇಗೆ ಸಾಧ್ಯ?

ಬೆಂಗಳೂರಿನಲ್ಲಿ ಈಗ ನಡೆಯುತ್ತಿರುವ ಎಲ್ಲ ಕಾಮಗಾರಿ ಕೆಲಸಗಳು ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ 7 ಸಾವಿರ ಕೋಟಿ ಹಾಗೂ ಕುಮಾರಸ್ವಾಮಿ ಸರ್ಕಾರ 1 ಸಾವಿರ ಕೋಟಿ ಕೊಟ್ಟಿದ್ದ ಹಣದಲ್ಲಿ ನಡೆಯುತ್ತಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಈ ಹಿಂದಿನ ಸರ್ಕಾರ ನೀಡಿದ್ದ ಹಣವನ್ನು ಬಿಜೆಪಿ ಸರ್ಕಾರ ಕಿತ್ತುಕೊಂಡು ಈ ಕೆಲಸಗಳನ್ನು ಮಾಡುತ್ತಿದೆ. ಈ ಸರ್ಕಾರ ಇದುವರೆಗೂ ಒಂದು ರೂಪಾಯಿಯೂ ಬಿಡುಗಡೆ ಮಾಡಿಲ್ಲ. ಮೊನ್ನೆಯಷ್ಟೇ 1500 ಕೋಟಿ ಬಿಡುಗಡೆ ಮಾಡುತ್ತೇವೆ ಎಂದು ಸರ್ಕಾರ ಹೇಳಿದ್ದು, ಇನ್ನು ಬಿಡುಗಡೆಯಾಗಿಲ್ಲ. ಈ ಸರ್ಕಾರದಿಂದ ಬೆಂಗಳೂರು ನಗರಕ್ಕೆ ಶೂನ್ಯ ಕೊಡುಗೆ ಕೊಟ್ಟಿದೆ. ಆದರೆ ಪ್ರಚಾರ ಪಡೆಯಲು ನವ ಬೆಂಗಳೂರು ಮಾಡುತ್ತೇವೆ ಅದಕ್ಕಾಗಿ ವರ್ಷಕ್ಕೆ 3 ಸಾವಿರ ಕೋಟಿಯಂತೆ 6 ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಈ ಹಣ ಬಂದು ಕೆಲಸ ಆರಂಭವಾಗುವುದಕ್ಕೆ ಕನಿಷ್ಠ ಪಕ್ಷ ಇನ್ನು ಎರಡು ವರ್ಷಗಳು ಬೇಕಾಗುತ್ತವೆ. ಬಿಬಿಎಂಪಿಯಿಂದ ಸರ್ಕಾರಕ್ಕೆ ಫೈಲ್ ಗಳು ಹೋದರೆ ಆರು ತಿಂಗಳಾದರೂ ಅದು ಮುಂದಕ್ಕೆ ಹೋಗುವುದಿಲ್ಲ. ನನ್ನ ಕ್ಷೇತ್ರದ ಫೈಲ್ ಗಳು ವಿಧಾನಸೌಧದಲ್ಲಿ ಕಳೆದ ಆರು ತಿಂಗಳಿನಿಂದ ಗೆದ್ದಲು ಹಿಡಿಯುತ್ತಿವೆ.

ರಸ್ತೆಗುಂಡಿಯನ್ನು ಮುಚ್ಚಿಸದೇ ಇನ್ನು ಎಷ್ಟು ಜನರ ಬಲಿ ಪಡೆಯಲು ಸರ್ಕಾರ ಹಾಗೂ ಪಾಲಿಕೆ ತೀರ್ಮಾನಿಸಿದೆಯೋ ಗೊತ್ತಿಲ್ಲ. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದಿದ್ದರೆ ಇದನ್ನು ಇಷ್ಟುಹೊತ್ತಿಗೆ ಮಾಡಬಹುದಾಗಿತ್ತು.

ನಾವು ಈ ವಿಚಾರವಾಗಿ ಈಗಾಗಲೇ ಆಯುಕ್ತರು ಹಾಗೂ ಸರ್ಕಾರದ ಗಮನಕ್ಕೆ ಈ ಬಗ್ಗೆ ಮಾಹಿತಿ ನೀಡಿದರೂ ಯಾರೂ ಎಚ್ಛೆತ್ತುಕೊಂಡಿಲ್ಲ. ಹೀಗಾಗಿ ಸರ್ಕಾರ ಹಾಗೂ ಪಾಲಿಕೆ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಶನಿವಾರ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸರ್ಕಾರ ಪ್ರತಿಭಟನೆಗೆ ಅವಕಾಶ ಕೊಟ್ಟರೆ ಹೆಚ್ಚಿನ ಜನ ಸೇರಿ ಪ್ರತಿಭಟನೆ ಮಾಡುತ್ತೇವೆ. ಅನುಮತಿ ನೀಡದಿದ್ದರೆ ಸಂಕೇತವಾಗಿ ಪ್ರತಿಭಟನೆ ಮಾಡುತ್ತೇವೆ.

ಇನ್ನು ಎರಡನೇ ವಿಚಾರ, ಮುಂದಿನ ಸೆಪ್ಟೆಂಬರ್ ಬಂದರೆ ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತ ಆರಂಭವಾಗಿ ಎರಡು ವರ್ಷ ಪೂರ್ಣಗೊಳ್ಳುತ್ತದೆ. ನಾವು ವಿರೋಧ ಪಕ್ಷದಲ್ಲಿದ್ದಾಗ ಜೆಡಿಎಸ್ ಜತೆ ಸೇರಿ ಬೆಂಗಳೂರಿಗೆ ಒಳ್ಳೆಯದಾಗುತ್ತದೆ ಎಂದು ಸರ್ಕಾರ ಬೆಂಗಳೂರಿಗೆ ವಿಶೇಷ ಕಾನೂನು ತರಲು ಮುಂದಾದಾಗ ಸಹಕಾರ ನೀಡಿದೆವು. ಆದರೆ ಅವರು ತಮ್ಮ ಮನಸ್ಸಿಗೆ ಬಂದಂತೆ ತಿದ್ದುಪಡಿ ಮಾಡಿ 243 ವಾರ್ಡ್ ಆಗಿ ಪರಿವರ್ತಿಸಿ ಚುನಾವಣೆ ನಡೆಸುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಏಪ್ರಿಲ್ ಮೊದಲ ವಾರದಲ್ಲಿ ಚುನಾವಣೆ ನಡೆಯಬಹುದು. ಈಗ ಡಿಲಿಮಿಟೇಶನ್ ಮಾಡಬೇಕಿರೋದು ಮುಖ್ಯಸ್ಥರಾಗಿರುವ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಅವರು. ಕನ್ವೀನರ್ ಆಗಿ ಬೆಂಗಳೂರು ಡಿಸಿ ಮಂಜುನಾಥ್ ಇದ್ದಾರೆ. ಇವರ ಜತೆ ಒಂದಿಬ್ಬರು ಸದಸ್ಯರು ಈ ಸಮಿತಿಯಲ್ಲಿದ್ದು, ಪಾಲಿಕೆಯಲ್ಲಿ ಡಿಲಿಮಿಟೇಶನ್ ಅನ್ನು ಇವರ್ಯಾರು ಮಾಡುತ್ತಿಲ್ಲ. ಬದಲಿಗೆ ಹೀಗಾಗಿ ಈ ಅಧಿಕಾರಿಗಳ ಬಳಿ ಯಾವ ಮಾಹಿತಿಯೂ ಇಲ್ಲ. ಬಿಜೆಪಿ ಶಾಸಕರು, ಕಾಂಗ್ರೆಸ್ ಶಾಸಕರಿರುವ ಕಡೆಗಳಲ್ಲಿ ಬಿಜೆಪಿ ಸಂಸದರು ಹಾಗೂ ಆರ್ ಎಸ್ಎಸ್ ನವರು ತಮ್ಮ ಕಚೇರಿಯಲ್ಲಿ ಈ ಡಿಲಿಮಿಟೇಶನ್ ನಡೆಯುತ್ತಿದೆ. ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬರಲು ಮನಬಂದಂತೆ ಡಿಲಿಮಿಟೇಶನ್ ಮಾಡುತ್ತಿದ್ದಾರೆ. ಡಿಲಿಮಿಟೇಶನ್ ಸಮಿತಿಯಲ್ಲಿರುವ ಅಧಿಕಾರಿಗಳ ಬಳಿ ಸಣ್ಣ ದಾಖಲೆ ಇದ್ದರೆ ತೋರಿಸಲಿ.

ಇದು ವೈಜ್ಞಾನಿಕವಾಗಿ ನಡೆಯದೇ, ಪಕ್ಷಪಾತವಾಗಿ ನಡೆಯುತ್ತಿದೆ. ಅಧಿಕಾರಿಗಳು ಈ ಪ್ರಕ್ರಿಯೆ ಮಾಡಿದ್ದರೆ ವೈಜ್ಞಾನಿಕವಾಗಿ ನಡೆಯುತ್ತಿತ್ತು. ಈ ವಿಚಾರವಾಗಿಯೂ ನಾವು ಶನಿವಾರ ನಮ್ಮ ಮನವಿಯನ್ನು ಸಲ್ಲಿಸುತ್ತೇವೆ.

ಮೂರನೇಯದಾಗಿ, ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಟೋಯಿಂಗ್ ವಿಚಾರವಾಗಿ ಜನರಿಗೆ ಕಿರುಕುಳ ನೀಡಲಾಗುತ್ತಿದೆ. ಸಂಚಾರಿ ನಿಯಮವನ್ನು ಎಲ್ಲರೂ ಪಾಲನೆ ಮಾಡಬೇಕು. ಆದರೆ ಪೊಲೀಸರು ನಿಯಮ ಪಾಲನೆ ಹೆಸರಲ್ಲಿ ಜನರ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ. ಆದರೆ ಇತ್ತೀಚೆಗೆ ಕಿರುಕುಳ ಹೆಚ್ಚಾಗುತ್ತಿದೆ.

ಸರ್ಕಾರದ ಮಾಹಿತಿ ಪ್ರಕಾರ 2018ರಲ್ಲಿ ನಿಯಮ ಉಲ್ಲಂಘನೆ ಪ್ರಕರಣಗಳಿಂದ 81.25 ಕೋಟಿ ದಂಡ ವಿಧಿಸಿದ್ದಾರೆ. 2019ರಲ್ಲಿ 89.18 ಕೋಟಿ ರೂ. ದಂಡ ವಿಧಿಸಿದ್ದಾರೆ. 2020ಯಲ್ಲಿ 99.57 ಕೋಟಿ ರೂ. ದಂಡ ವಿಧಿಸಿದ್ದಾರೆ. 2021ರಲ್ಲಿ 124 ಕೋಟಿ ದಂಡ ವಿಧಿಸಿದ್ದಾರೆ. ಒಟ್ಟಾರೆಯಾಗಿ ಕಳೆದ ನಾಲ್ಕು ವರ್ಷಗಳಲ್ಲಿ 395 ಕೋಟಿಯಷ್ಟು ಹಣವನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದ್ದಾರೆ.

ಈ ಮೂರು ವಿಚಾರವಾಗಿ ನಾವು ಶನಿವಾರ ಪ್ರತಿಭಟನೆ ಮಾಡುತ್ತಿದ್ದು, ಈ ವಿಚಾರವಾಗಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸುತ್ತೇವೆ.

ಪೊಲೀಸರಿಗೆ ದಂಡ ಸಂಗ್ರಹಿಸುವ ಟಾರ್ಗೆಟ್ ನೀಡಲಾಗುವುದೇ ಎಂಬ ಪ್ರಶ್ನೆಗೆ, ‘ಯಾವತ್ತೂ ನಾವು ದಂಡ ಹಾಕುವ ಟಾರ್ಗೆಟ್ ನೀಡುವುದಿಲ್ಲ. 2020ರಿಂದ 2021ರಲ್ಲಿ ದಂಡ ವಿಧಿಸಿರುವ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇನ್ನು ಇತ್ತೀಚೆಗೆ ಪೊಲೀಸ್ ಅಧಿಕಾರಿ ವಿಶೇಷಚೇತನರ ಮೇಲೆ ಕಾಲಿನಿಂದ ಒದ್ದು ದೌರ್ಜನ್ಯ ನಡೆಸಿದ್ದಾರೆ. ಪೊಲೀಸರು ಜನಸ್ನೇಹಿಯಾಗಿರಬೇಕು. ಕಳ್ಳರು, ತಪ್ಪು ಮಾಡುವವರಿಗೆ ಪೊಲೀಸರ ಭಯ ಇರಬೇಕು, ಜನ ಸಾಮಾನ್ಯರೂ ಪೊಲೀಸರೆಂದರೆ ಹೆದರುವಂತಿರಬಾರದು. ಬೆಳಗ್ಗೆ 7 ಗಂಟೆಗೆ ಸಣ್ಣ ರಸ್ತೆಗಳಲ್ಲೇ ದಂಡ ವಿಧಿಸಲು ಮುಂದಾಗಿದ್ದು, ಇದರಿಂದ ಜನರಿಗೆ ಕಿರುಕುಳ ಹೆಚ್ಚಾದಂತಾಗಿದೆ’ ಎಂದು ಉತ್ತರಿಸಿದರು.

ಪ್ರತಿಭಟನೆಗೆ ಅವಕಾಶ ನೀಡದಿದ್ದರೆ ಬೆಂಗಳೂರು ಉಸ್ತುವಾರಿ ಹೊತ್ತಿರುವ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸುತ್ತೀರಾ? ಎಂಬ ಪ್ರಶ್ನೆಗೆ, ‘ಈಗ ಪ್ರತಿಭಟನೆ ಮಾಡುವುದು ನಮ್ಮ ಹಕ್ಕು, ನಾವು ಮಾಡುತ್ತೇವೆ. ಆಗಲೂ ಡಿಲಿಮಿಟೇಶನ್ ಸರಿಯಾಗಿ ಮಾಡದಿದ್ದರೆ, ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ. ಇದರ ನಂತರ ಕೋರ್ಟ್ ಮೆಟ್ಟಿಲೇರುವ ಅವಕಾಶ ಇರುತ್ತದೆ. ಕೋರ್ಟ್ ಮೆಟ್ಟಿಲೇರಿದಾಗ ಈ ಹಿಂದೆ ಅನೇಕ ತೀರ್ಪುಗಳು ನೀಡಿ ನ್ಯಾಯ ದೊರಕಿಸಲಾಗಿದೆ’ ಎಂದರು.

ತಮ್ಮ ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ, ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅನುದಾನ ನೀಡಿಲ್ಲ, ಹೀಗಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ ನಂತರ, ಮುಖ್ಯಮಂತ್ರಿಗಳು ನಮ್ಮ ಕ್ಷೇತ್ರ ಹಾಗೂ ಸೌಮ್ಯ ರೆಡ್ಡಿ ಅವರ ಕ್ಷೇತ್ರಕ್ಕೆ ಅವಶ್ಯಕತೆ ಇರುವ ಅನುದಾನ ನೀಡುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿರುವುದಾಗಿ ಅವರ ಕಾರ್ಯದರ್ಶಿ ಮಂಜುನಾಥ್ ಅವರು ಮಾಹಿತಿ ಕೊಟ್ಟರು. ನಮಗೆ ಅವರು ಸ್ಪಂದಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡಲಿಲ್ಲ. ಈಗಲೂ ಸರ್ಕಾರ ರಸ್ತೆಗುಂಡಿ ಮುಚ್ಚಿ, ಟೋಯಿಂಗ್ ಕಿರಿಕಿರಿ ಇಲ್ಲದಂತೆ ಮಾಡಿದರೆ, ಸರಿಯಾದ ರೀತಿಯಲ್ಲಿ ಡಿಲಿಮಿಟೇಶನ್ ಮಾಡಿದರೆ ನಾವು ಪ್ರತಿಭಟನೆ ಮಾಡುವ ಅಗತ್ಯವೇ ಇರುವುದಿಲ್ಲ’ ಎಂದರು.

ಡಿಲಿಮಿಟೇಶನ್ ನಲ್ಲಿ ಹೊಸ ಹಳ್ಳಿಗಳ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಹಿಂದೆ ಆಪ್ರಸ್ತಾಪವಿತ್ತು, ಆ ಪ್ರಸ್ತಾಪವನ್ನು ಕೈಬಿಟ್ಟಿದ್ದು, ಯಾವುದೇ ಹೊಸ ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುತ್ತಿಲ್ಲ. ಈಗ ಇರುವ 198 ವಾರ್ಡ್ ಗಳನ್ನೇ 243 ವಾರ್ಡ್ ಗಳಾಗಿ ಮಾಡುತ್ತಿದ್ದಾರೆ’ ಎಂದರು.

ಹೊಸ ಹಳ್ಳಿ ಸೇರಿಸಿದರೆ ಅದಕ್ಕೆ ಮಾನದಂಡ ಏನಾಗಿರಬೇಕು ಎಂಬ ಪ್ರಶ್ನೆಗೆ, ‘ಈ ಹಿಂದೆ 225 ಕಿ.ಮೀ ಇದ್ದದನ್ನು 800 ಚ.ಕಿ.ಮೀಗೆ ವಿಸ್ತರಿಸಿದರು. ಕೆಲವು ಪಾಲಿಕೆ ವ್ಯಾಪ್ತಿಯಿಂದ ಹೊರಗುಳಿದಿರುವ ಪ್ರದೇಶಗಳು ಸಾಕಷ್ಟು ಅಭಿವೃದ್ಧಿ ಹೊಂದಿವೆ. ಹೀಗಾಗಿ ಅವುಗಳನ್ನು ಸೇರಿಸಿದರೆ ತಪ್ಪೇನಿಲ್ಲ. ಇವರು ಮೊದಲು ಸೇರಿಸುತ್ತೇವೆ ಎಂದವರು ಬಿಟ್ಟಿದ್ದಾರೆ. ಇದಕ್ಕೆ ಆಂತರಿಕ ಭಿನ್ನಾಭಿಪ್ರಾಯ ಕಾರಣವೋ ಏನೋ ಗೊತ್ತಿಲ್ಲ’ ಎಂದರು.

ಸರ್ಕಾರ ತನ್ನಿಷ್ಟಕ್ಕೆ ಡಿಲಿಮಿಟಶನ್ ಮಾಡಿದರೆ, ಚುನಾವಣೆ ಬಹಿಷ್ಕಾರ ಮಾಡುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ, ‘ಈ ಚುನಾವಣೆಯಲ್ಲಿ ನಾವೇ ಗೆಲ್ಲುವಾಗ ನಾವ್ಯಾಕೆ ಚುನಾವಣೆ ಬಹಿಷ್ಕರಿಸೋಣ? ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ನಾವೇ ಗೆದ್ದಿದ್ದೇವೆ. ಬಿಜೆಪಿಯವರು ಪಕ್ಷ ಚಿಹ್ನೆ ಹೊರತಾಗಿ ನಡೆಯುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಕಾರ್ಯಕರ್ತರೇ ಗೆದ್ದಿದ್ದಾರೆ ಎಂದು ಬೀಗಿದ್ದರು. ಆದರೆ ಚುನಾಯಿತ ಪ್ರತಿನಿಧಿಗಳು ಮತದಾನ ಮಾಡುವ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಶೇ.48ರಷ್ಟು ಮತ ಬಂದಿವೆ. ಈಗಲೂ ಚುನಾವಣೆ ಆದರೆ ಕಾಂಗ್ರೆಸ್ ಪಕ್ಷವೇ ಗೆಲ್ಲಲಿದೆ. ರಾಜ್ಯದ ಹಿತಕ್ಕಾಗಿ ಕೆಲಸ ಮಾಡುವುದು ಕಾಂಗ್ರೆಸ್ ಮಾತ್ರ ಎಂಬುದು ಜನರಿಗೆ ಅರಿವಾಗಿದೆ. ಡಿಲಿಮಿಟೇಶನ್ ಅನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಬೇಕು ಎಂಬ ಕಾರಣಕ್ಕೆ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದರು.

ವಿದ್ಯುತ್ ಬಿಲ್ ಜತೆಗೆ ಕಸದ ಸೆಸ್ ವಿಧಿಸುವ ಪಾಲಿಕೆ ನಿರ್ಧಾರದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಜನರ ಮೇಲೆ ಹೊರೆ ಹಾಕಲು. ಇವರು ಅಧಿಕಾರಿಕ್ಕೆ ಬಂದ ನಂತರ ಕಟ್ಟಡ ನಿರ್ಮಾಣ ಯೋಜನೆ ಶುಲ್ಕವನ್ನು ನಾಲ್ಕುಪಟ್ಟು ಹೆಚ್ಚಿಸಿದರು. ನೀರಿನ ದರ ಹೆಚ್ಚಿಸಿದರು, ವಸತಿ ತೆರಿಗೆ ಹೆಚ್ಚಿಸಿದರು. ಇತ್ತೀಚೆಗೆ ವಿದ್ಯುತ್ ಬಿಲ್ ದರ ಏರಿಸುವ ಪ್ರಸ್ತಾವನೆ ಬಂತು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ತಕ್ಷಣ ಅದನ್ನು ಜಾರಿ ಮಾಡುವುದು ಬೇಡ ಎಂದು ತಡೆ ಹಿಡಿದಿದ್ದಾರೆ. ಚುನಾವಣೆ ನಂತರ ಖಂಡಿತವಾಗಿ ದರ ಹೆಚ್ಚಿಸುತ್ತಾರೆ. ಕೇವಲ ಇವತ್ತಲ್ಲ, 2010ರಿಂದ 15ರವರೆಗೂ ಇದ್ದಾಗ ತೆರಿಗೆ ಹೆಚ್ಚಿಸಿದ್ದು, ಸಾಲದ ಹೊರೆ ಹೆಚ್ಚಿಸಿದ್ದು ಬಿಟ್ಟರೆ ಇನ್ಯಾವುದೇ ಸಾಧನೆ ಮಾಡಲಿಲ್ಲ. ಅವರು 2015ರಲ್ಲಿ ನಮ್ಮ ಮೇಲೆ 8 ಸಾವಿರ ಕೋಟಿ ಸಾಲ ಬಿಟ್ಟು ಹೋದರು. 14 ಕಟ್ಟಡ ಅಡವಿಟ್ಟಿದ್ದರು. ಹೀಗಾಗಿ ಬಿಜೆಪಿಯವರು ಅಧಿಕಾರಕ್ಕೆ ಬಂದಾಗೆಲ್ಲ ಜನರ ಮೇಲೆ ಸಾಲದ ಹೊರೆ ಹೊರಿಸಿ ಹೋಗುತ್ತಾರೆ, ನಾವು ಬಂದ ನಂತರ ಅದನ್ನು ಸರಿಪಡಿಸುತ್ತೇವೆ’ ಎಂದರು.

ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಕೋವಿಡ್ ಕಡಿಮೆಯಾದ ನಂತರ ಪೊಲೀಸರು ಅನುಮತಿ ನೀಡುತ್ತಾರೆ. ಆನಂತರ ಪಾದಯಾತ್ರೆಯನ್ನು ಎಲ್ಲಿಗೆ ನಿಲ್ಲಿಸಿದ್ದೆವೋ ಅಲ್ಲಿಂದಲೇ ಮುಂದುವರಿಸುತ್ತೇವೆ. ಕೋವಿಡ್ ಇರುವವರೆಗೂ ಪೊಲೀಸರ ಅನುಮತಿ ಸಿಗುವುದಿಲ್ಲ, ಅದು ಕಡಿಮೆಯಾದ ನೆತರ ಅವರು ಅನುಮತಿ ನೀಡಲೇಬೇಕಾಗುತ್ತದೆ. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್ಪಿ ನಾಯಕರ ಜತೆ ಚರ್ಚಿಸಿ ಮಾಹಿತಿ ನೀಡುತ್ತೇನೆ. ಇದು ಎರಡೂವರೆ ಕೋಟಿ ಜನರ ಕುಡಿಯುವ ನೀರಿನ ವಿಚಾರವಾಗಿದೆ. ನಮ್ಮ ಒತ್ತಡಕ್ಕಾದರೂ ಕೇಂದ್ರದಿಂದ ಅನುಮತಿ ಪಡೆದು ಸರ್ಕಾರ ಯೋಜನೆ ಆರಂಭಿಸಿದರೆ ಅನುಕೂಲವಾಗಲಿದೆ. ಬೆಂಗಳೂರು ಸುತ್ತಮುತ್ತಲ ಹೊರವಲಯದಲ್ಲಿ ಅಭಿವೃದ್ಧಿ ಹೊಂದಿರುವ ಪ್ರದೇಶದ ಜನರಿಗೂ ಕುಡಿಯುವ ನೀರು ದೊರೆಯಲಿದೆ’ ಎಂದರು.

ಎರಡನೇ ಹಂತದ ಪಾದಯಾತ್ರೆಯ ಮಾರ್ಗದಲ್ಲಿ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ, ‘ಪಾದಯಾತ್ರೆ ಮಾರ್ಗದಲ್ಲಿ ಮಲ್ಲೇಶ್ವರಂ ಸೇರಬೇಕು ಎಂದು ಅಧ್ಯಕ್ಷರು ಹೇಳಿದ್ದಾರೆ. ಈ ಹಿಂದೆ ಚಾಮರಾಜಪೇಟೆ ಮೇಲೆ ಬರಲು ಸಾಧ್ಯವಾಗುತ್ತಿರಲಿಲ್ಲ. ಮೇಕ್ರಿ ಸರ್ಕಲ್ ನಿಂದ ಮಲ್ಲೇಶ್ವರಂ ಕಡೆ ಹೋದರೆ, ಅಲ್ಲಿಂದ ಚಾಮರಾಜಪೇಟೆ ಮಾರ್ಗವಾಗಿ ಬರಬಹುದು ಎಂದು ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಪಾದಯಾತ್ರೆ ವ್ಯಕ್ತಿ ಪ್ರತಿಷ್ಠೆಗಾಗಿಯೂ ಅಲ್ಲ, ಕಾಂಗ್ರೆಸ್ ಪ್ರತಿಷ್ಠೆಗಾಗಿಯೂ ಅಲ್ಲ, ಇದು ಜನರ ಹಿತ ಕುಡಿಯುವ ನೀರಿನ ದೃಷ್ಟಿಯಿಂದ ಮಾಡುತ್ತಿದ್ದೇವೆ’ ಎಂದರು.

ಪುಲಕೇಶಿನಗರ ವಿಚಾರವಾಗಿ ಕಾಂಗ್ರೆಸ್ ನಲ್ಲಿ ಭಿನ್ನಮತವಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ‘ನಮ್ಮಲ್ಲಿ ಯಾವುದೇ ಗಲಾಟೆಗಳು ಇಲ್ಲ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಜಿಲ್ಲಾಧ್ಯಕ್ಷರುಗಳಾದ ಎಂ. ರಾಜಕುಮಾರ್, ಜಿ ಶೇಖರ್, ಜಿ ಕೃಷ್ಣಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ರಮೇಶ್, ಮಾಜಿ ಮಹಾಪೌರರಾದ ರಾಮಚಂದ್ರಪ್ಪ, ಮಂಜುನಾಥ ರೆಡ್ಡಿ, ಸಂಪತ್ ರಾಜ್, ಮಾಜಿ ಶಾಸಕ ಚಂದ್ರಶೇಖರ್, ಹಾಗೂ ಇತರೆ ನಾಯಕರು ಉಪಸ್ಶಿತರಿದ್ದರು.

LEAVE A REPLY

Please enter your comment!
Please enter your name here