ಬಿಬಿಎಂಪಿ ಪರಿಶೀಲನಾ ಸಮಿತಿ ಸಭೆಗೆ ವರದಿ ಮಂಡನೆ
ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕವನ್ನು ಪರಿಶೀಲಿಸಲು ರಚಿಸಲಾಗಿದ್ದ ಜಂಟಿ ಪರಿಶೀಲನಾ ಸಮಿತಿಯು ಇಂದು ವಿಧಾನ ಸಭೆಯಲ್ಲಿಂದು ವರದಿ ಮಂಡಿಸಲಾಯಿತು.ಸರ್ಕಾರ ತರಲು ಉದ್ದೇಶಿಸಿರುವ `ಬೃಹತ್ ಬೆಂಗ ಳೂರು ಮಹಾನಗರ ಪಾಲಿಕೆ ಕಾಯ್ದೆ’ಯಲ್ಲಿ ಯಾವ್ಯಾವ ಅಂಶಗಳು ಇರಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಲು ಸರ್ಕಾರ ಜಂಟಿ ಪರಿಶೀಲನಾ ಸಮಿತಿಯೊಂದನ್ನು ನೇಮಕ ಮಾಡಿತ್ತು.
ವರದಿಯಲ್ಲಿ ಬಿಬಿಎಂಪಿ ಮೇಯರ್ ಅವಧಿ ೩೦ ತಿಂಗಳದ್ದಾಗಿರಬೇಕು.ಹಾಲಿ ಇರುವ ವಾರ್ಡಗಳ ಸಂಖ್ಯೆ ೧೯೮ರಿಂದ ೨೪೩ಕ್ಕೆ ಹೆಚ್ಚಳ ಮಾಡಬೇಕು.ಬಿಬಿಎಂಪಿ ವ್ಯಾಪ್ತಿಯನ್ನು ಇನ್ನೂ ಒಂದು ಕಿಲೋ ಮೀಟರ್‌ನಷ್ಟು ವಿಸ್ತರಣೆ ಮಾಡಬೇಕು.ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಯ ವಾರ್ಡುಗಳನ್ನು ವ್ಯವಸ್ಥಿತವಾಗಿ ಪುನರ್ವಿಂಗಡಣೆ ಮಾಡಬೇಕು ಸೇರಿದಂತೆ ಹಲವು ಮಹತ್ವದ ಶಿಫಾರಸ್ಸುಗಳನ್ನು ಸಮಿತಿ ಸೂಚಿಸಿದೆ.
ಯಾವುದೇ ವಾರ್ಡ್ ಎರಡು ಅಥವಾ ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳಿಗೆ ಹರಿದು ಹಂಚಿ ಹೋಗಬಾರದು.ಅಂದರೆ ಒಂದೇ ವಿಧಾನ ಸಭಾ ಕ್ಷೇತ್ರದ ಆಡಳಿತಾತ್ಮಕ ವ್ಯಾಪ್ತಿಯಲ್ಲಿರಬೇಕು.ಪ್ರತಿ ವಾರ್ಡಿನಲ್ಲೂ `ಪ್ರಾಂತ ಸಭೆ’ಗಳನ್ನು(ಏರಿಯಾ ಸಭಾ) ಅಸ್ತಿತ್ವಕ್ಕೆ ತರಬೇಕು.ಈ ಸಭೆಗಳಲ್ಲಿ ವಾರ್ಡಿನ ಪ್ರತಿಯೊಬ್ಬ ಮತದಾರರೂ ಸದಸ್ಯರಾಗಿರಬೇಕು.ಇವು ಉದ್ದೇಶಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆಯಲ್ಲಿ ಅಡಕಗೊಳ್ಳಲಿರುವ ಮಹತ್ವದ ಅಂಶಗಳಾಗಿವೆ.
ವಾರ್ಡ್ ಹೆಚ್ಚಳ ಮತ್ತು ನಗರ ವ್ಯಾಪ್ತಿ ವಿಸ್ತರಣೆಯಿಂದ ಮಹದೇವಪುರ,ವೈಟ್‌ಫೀಲ್ಡ್ ಸೇರಿದಂತೆ ಕೆಲವು ದೂರದ ಸ್ಥಳಗಳಲ್ಲಿರುವ ದೊಡ್ಡ ಸಾಫ್ಟ್ವೇರ್ ಮತ್ತು ಬಯೋಟೆಕ್ನಾಲಜಿ ಕಂಪನಿಗಳು ಬಿಬಿಎಂಪಿ ಅಡಿ ಬರಲಿವೆ.ಇದು ಪಾಲಿಕೆ ಆದಾಯ ಹೆಚ್ಚಿಸಲಿದೆ ಎಂದು ಸಮಿತಿ ವರದಿಯಲ್ಲಿ ತಿಳಿಸಲಾಗಿದೆ.
ಈಗಾಗಲೇ ವರದಿಯಾಗಿರುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಬಿಬಿಎಂಪಿ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ.ಉದ್ದೇಶಿತ ಕಾಯ್ದೆ ಜಾರಿಗೆ ಬಂದ ನಂತರ ಮೇಯರ್ ಅವಧಿ ಹೆಚ್ಚಲಿದೆ.ವಾರ್ಡ್ಗಳು ಪುನರ್ವಿಂಗಡಣೆ ಗೊಂಡು ಇವುಗಳ ಸಂಖ್ಯೆಯೂ ಏರಿಕೆಯಾಗಲಿದೆ.ಬೆಂಗಳೂರು ಜನಸಂಖ್ಯೆ ಹೆಚ್ಚಿರುವುದರಿಂದ ಕಾಯ್ದೆ ಬಂದ ನಂತರವೇ ಬಿಬಿಎಂಪಿ ಚುನಾವಣೆ ಎಂದು ಸರ್ಕಾರ ಸ್ಪಷ್ಟಗೊಳಿಸಿದೆ. ಬಿಬಿಎಂಪಿ ಕಾಯ್ದೆಯಲ್ಲಿ ಏನೇನಿರಬೇಕು ಎಂಬುದರ ಬಗ್ಗೆ ರಘು ಸಮಿತಿಯ ಸಲಹಾ ವರದಿ ಸಲ್ಲಿಕೆಯಾಗಿರುವುದು ಶೀಘ್ರದಲ್ಲೇ ಕಾಯ್ದೆ ಜಾರಿಗೆ ಬರುವ ಸ್ಪಷ್ಟ ಸೂಚನೆಯನ್ನು ನೀಡಿದೆ.
ಪ್ರಮುಖ ಸಲಹೆಗಳು :
ಬಿಬಿಎಂಪಿ ಆಯುಕ್ತರ ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಬೇಕು. ಇದನ್ನು ಮುಖ್ಯ ಪ್ರಧಾನ ಆಯುಕ್ತರ ಹುದ್ದೆಯನ್ನಾಗಿಸಿ ಅವರ ಅಧೀನದಲ್ಲಿ ಇಬ್ಬರು ವಲಯ ಆಯುಕ್ತರನ್ನು ನೇಮಕ ಮಾಡಬೇಕು. ಪ್ರಧಾನ ಆಯುಕ್ತರು ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಟ್ಟದ ಅಧಿಕಾರಿಯಾಗಿ ರಬೇಕು.ವಲಯ ಆಯುಕ್ತರು ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಾಗಿರಬೇಕು. ವಲಯ ಅಧಿಕಾರಿಗಳಿಗೆ ಹೆಚ್ಚು ಅಧಿಕಾರವನ್ನು ನೀಡಬೇಕು.
ಬೆಂಗಳೂರಿನ ಬಹುದೊಡ್ಡ ತಲೆನೋವಾಗಿ ಪರಿಣಮಿಸಿರುವ ಘನತ್ಯಾಜ್ಯ ವಿಲೇವಾರಿಗೆ ಸ್ಪಷ್ಟ ನಿಯಮಾವಳಿಯನ್ನು ರೂಪಿಸಬೇಕು.ಇದ ಕ್ಕಾಗಿ ಯೋಜನೆ ತಯಾರಿಸಿ ತ್ಯಾಜ್ಯ ವಿಲೇವಾರಿ ಮಾಡಬೇಕು.ಮುಖ್ಯವಾಗಿ ತ್ಯಾಜ್ಯ ಸಂಗ್ರಹಣೆ ಮಾಡುವವರಿಗೆ ತ್ಯಾಜ್ಯ ನಿರ್ವಹಣಾ ತರಬೇತಿಯನ್ನು ನೀಡಬೇಕು.ಪ್ರತಿ ವಾರ್ಡಿನ ಜನಸಮುದಾಯವನ್ನು ಒಳಗೊಂಡು ತ್ಯಾಜ್ಯ ವಿಲೇವಾರಿ ಯೋಜನೆ ತಯಾರಿಸಬೇ ಕು.ಬೆಂಗಳೂರಿನಲ್ಲಿರುವ ಎಲ್ಲ ಪಾರಂಪರಿಕ ಕಟ್ಟಡಗಳನ್ನು ಈಗ ಅವುಗಳಿರುವ ಸ್ವರೂಪದಲ್ಲೇ ಸಂರಕ್ಷಣೆ ಮಾಡಬೇಕು.ಇದಕ್ಕಾಗಿ ರಾಜಧಾನಿಯಲ್ಲಿರುವ ಎಲ್ಲ ಪಾರಂಪರಿಕ ಕಟ್ಟಡ ಮತ್ತು ಸ್ಥಳಗಳ ಪಟ್ಟಿಯನ್ನು ಪಾಲಿಕೆ ತಯಾರಿಸಿಟ್ಟು ಕೊಳ್ಳಬೇಕು.ಸಾಧ್ಯವಾದರೆ ಇವುಗ ಳಿಗೆ ಪಾಲಿಕೆ ಗೌರವ ಧನ ನೀಡಿ ಸಂರಕ್ಷಣೆಗೆ ಪ್ರೋತ್ಸಾಹಿಸಬೇಕು. ಇಂಥ ಕಟ್ಟಡಗಳಿಗೆ ತೆರಿಗೆ ವಿನಾಯ್ತಿಯ ಬಗ್ಗೆಯೂ ಆಲೋಚಿಸ ಬಹುದು.