ಬೆಂಗಳೂರು:
ಖಾಸಗಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ಮಾರ್ವೇಶ್ (19) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಸೇರಿ 6 ಮಂದಿ ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಹೆಣ್ಣೂರಿನ ಶ್ರೀಕಾಂತ್, ಕಾರ್ತಿಕ್, ನೆಲ್ಸನ್, ಯೋಹಾನ್, ಅಭಿಷೇಕ್ ಹಾಗೂ ಡ್ಯಾನಿಯರ್ ಆ್ಯಂಟನಿ ಬಂಧಿತ ಆರೋಪಿಗಳಾಗಿದ್ದಾರೆ.
ಹೆಣ್ಣೂರಿನ ರಾಮಸ್ವಾಮಿ ಪಾಳ್ಯದ ನಿವಾಸಿ ಮಾರ್ವೇಶ್ ಎಂಬಾತನ ಮೇಲೆ ಪೈಪುಗಳಿಂದ ಮಾರಾಣಾಂತಿಕ ಹಲ್ಲೆ ನಡೆಸಿ ಕಾಲೇಜಿನ ಬಳಿ ಬಿಟ್ಟು ಪರಾರಿಯಾಗಿದ್ದರು. ಬಳಿಕ ಕುಸಿದು ಬಿದ್ದ ಮಾರ್ವೇಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಕೊಲೆಯಾದ ಮಾರ್ವೇಶ್ ಹೆಣ್ಣೂರಿನ ಖಾಗಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಾಂಗ ಮಾಡುತ್ತಿದ್ದ. ಈತನ ಸ್ನೇಹಿತ ಲೋಹಿತ್ ಎಂಬಾತ ಅರೋಪಿ ಶ್ರೀಕಾಂತ್ ಪ್ರೇಯಸಿಗೆ ಸಂದೇಶವೊಂದನ್ನು ಕಳುಹಿಸಿದ್ದ. ಈ ವಿಚಾರವನ್ನು ಯುವತಿ ಶ್ರೀಕಾಂತ್’ಗೆ ತಿಳಿಸಿದ್ದಳು. ಇದರಿಂದ ಕೆರಳಿದ ಶ್ರೀಕಾಂತ್ ವಿಚಾರವನ್ನು ಸ್ನೇಹಿತರಿಗೆ ತಿಳಿಸಿ, ಲೋಹಿತ್’ಗೆ ಪಾಠ ಕಲಿಸುವಂತೆ ಸೂಚಿಸಿದ್ದ. ಅದರಂತೆ ಆರೋಪಿಗಳು ಕಾಲೇಜಿನ ಬಳಿ ತೆರಳಿ ಲೋಹಿತ್’ಗಾಗಿ ಹುಡುಕಾಡಿದ್ದಾರೆ.
ಲೋಹಿತ್ ಸಿಗದಿದ್ದಾಗ ಮಾರ್ವೇಶ್ ನನ್ನು ಡಿಜೆಹಳ್ಳಿಯ ಕೊಠಡಿಯೊಂದರಲ್ಲಿ ಕೂಡ ಹಾಕಿದ್ದಾರೆ. ಬಳಿಕ ಮಾರ್ವೇಶ್ ನಿಂದ ಲೋಹಿತ್’ಗೆ ದೂರವಾಣಿ ಕರೆ ಮಾಡಿಸಿದ್ದಾರೆ. ಆದರೆ, ಲೋಹಿತ್ ಫೋನ್ ತೆಗೆದಿಲ್ಲ. ಬಳಿಕ ಮಾರ್ವೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ತೀವ್ರವಾಗಿ ಅಸ್ವಸ್ಥನಾಗಿದ್ದಾನೆ. ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದ.
ಆಸ್ಪತ್ರೆಗೆ ದಾಖಲಿಸುವ ವೇಳೆ ಪದೇ ಪದೇ ವಾಂತಿ ಮಾಡುತ್ತಿದ್ದರಿಂದ ಆಸ್ಪತ್ರೆಗೆ ಕರೆ ತಂದಿರುವುದಾಗಿ ಆರೋಪಿಗಳು ವೈದ್ಯರಿಗೆ ತಿಳಿಸಿದ್ದಾರೆ. ಆದರೆ, ಮಾರ್ವೇಶ್ ಸ್ಥಿತಿಯನ್ನು ನೋಡಿದ ವೈದ್ಯರು ಶಂಕೆ ವ್ಯಕ್ತಪಡಿಸಿ, ಹೆಣ್ಣೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನೆ ಸಂಬಂಧ ಇದೀಗ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.