ಬೆಂಗಳೂರು:
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸುವ ಮೂಲಕ ಮತದಾರರಿಗೆ ಆಮಿಷವೊಡ್ಡಿರುವ ಆರೋಪದಡಿ ವರುಣಾ ಕ್ಷೇತ್ರದ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದೆ. ಸೆಪ್ಟೆಂಬರ್ ಒಂದಕ್ಕೆ ಮುಂದಿನ ವಿಚಾರಣೆ ಮುಂದೂಡಿ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಆದೇಶ ನೀಡಿದರು.
ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123(2) ಪ್ರಕಾರ ಮತದಾರರಿಗೆ ಆಮಿಷ ಒಡ್ಡುವಂತಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಮತದಾರರಿಗೆ ಗ್ಯಾರಂಟಿ ಕಾರ್ಡ್ ವಿತರಿಸಿ ಆಮಿಷ ಒಡ್ಡಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಶಾಸಕ ಸ್ಥಾನದ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಕೆ.ಎಂ.ಶಂಕರ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸಿದ್ದರಾಮಯ್ಯ ಅವರು ಸಂವಿಧಾನದ ನಿಬಂಧನೆಗಳು ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಗ್ಯಾರಂಟಿಗಳು ಅಭ್ಯರ್ಥಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ನೀಡಿದ ಕೊಡುಗೆ ಮತ್ತು ಭರವಸೆಗಳ ಸ್ವರೂಪದಲ್ಲಿದೆ. ಪ್ರತಿವಾದಿ ಸಿದ್ದರಾಮಯ್ಯ ಅವರ ಒಪ್ಪಿಗೆ ಮೇರೆಗೆ ಇದನ್ನು ಮಾಡಲಾಗಿದ್ದು, ವರುಣಾ ಕ್ಷೇತ್ರದ ಮತದಾರರಿಗೆ ಆಮಿಷವೊಡ್ಡಲಾಗಿದೆ ಎಂದು ಆರೋಪಿಸಿ ಕೆಎಂ ಶಂಕರ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಯಾದವ್ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆ ನಡೆಯಿತು. ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಚುನಾವಣಾ ಸಮಯದಲ್ಲಿ ಭ್ರಷ್ಟಾಚಾರ ನಡೆಸಿದ್ದರು ಎಂದು ಅರ್ಜಿದಾರರು ಆರೋಪಿಸಿದ್ದಾರೆ.