Home ಬೆಂಗಳೂರು ನಗರ ಬಿಡಿಎ ವಾಣಿಜ್ಯ ಮಳಿಗೆಗೆ ಬಾಡಿಗೆ ಬಾಕಿ ವಸೂಲಿಗೆ ವಿಶ್ವನಾಥ್ ಆದೇಶ

ಬಿಡಿಎ ವಾಣಿಜ್ಯ ಮಳಿಗೆಗೆ ಬಾಡಿಗೆ ಬಾಕಿ ವಸೂಲಿಗೆ ವಿಶ್ವನಾಥ್ ಆದೇಶ

43
0

ಬಾಕಿ ವಸೂಲಿ ಮಾಡಲು ವೈಫಲ್ಯರಾದ ಅಧಿಕಾರಿಗಳಿಗೆ ತರಾಟೆ

15 ದಿನಗಳಲ್ಲಿ ಬಾಕಿದಾರರಿಗೆ ನೊಟೀಸ್ ನೀಡಿ ಬಾಕಿ ವಸೂಲಿಗೆ ಸೂಚನೆ

ಬೆಂಗಳೂರು:

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೆಜ್ಜೆ ಇಟ್ಟಿದ್ದಾರೆ.

ಪ್ರಾಧಿಕಾರದ ಒಡೆತನದಲ್ಲಿರುವ ವಾಣಿಜ್ಯ ಸಂಕೀರ್ಣಗಳಿಂದ ಕಳೆದ ಹಲವು ವರ್ಷಗಳಿಂದ ಬರಬೇಕಾಗಿರುವ ಸುಮಾರು 40 ಕೋಟಿ ರೂಪಾಯಿಗಳ ಬಾಕಿಯನ್ನು ವಸೂಲಿ ಮಾಡಲು ಕೂಡಲೇ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ.

ಬುಧವಾರ ವಾಣಿಜ್ಯ ಸಂಕೀರ್ಣಗಳ ಸ್ಥಿತಿಗತಿ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಇಂದಿರಾನಗರದಲ್ಲಿರುವ ಎರಡು ವಾಣಿಜ್ಯ ಸಂಕೀರ್ಣವೊಂದರಲ್ಲೇ ಸುಮಾರು 14.40 ಕೋಟಿ ರೂಪಾಯಿಗಳ ಬಾಡಿಗೆಯನ್ನು ಹಲವು ವರ್ಷಗಳಿಂದ ಸಂಗ್ರಹ ಮಾಡಿಲ್ಲ. ಇಷ್ಟು ದಿನ ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಈಗ ಕೆಲವು ಅಂಗಡಿ ಮಾಲೀಕರು ಖಾಲಿ ಮಾಡಿ ಹೋಗಿದ್ದಾರೆ. ಅವರ ವಿಳಾಸ ಪತ್ತೆ ಇಲ್ಲ ಎಂದು ಕಾರಣ ನೀಡುತ್ತಿದ್ದೀರಿ. ಅವರಿಂದ ಬಾಕಿ ಬಾಡಿಗೆಯನ್ನು ವಸೂಲಿ ಮಾಡದೇ ಕರ್ತವ್ಯಲೋಪ ಎಸಗಿದ್ದೀರಿ? ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿರುವಾಗ ಬರುವ ಆದಾಯವನ್ನು ಸಂಗ್ರಹ ಮಾಡಲು ನಿಮಗೆ ಸಾಧ್ಯವಾಗಿಲ್ಲ ಎಂದರೆ ಏನು ಅರ್ಥ? ಎಂದು ತರಾಟೆಗೆ ತೆಗೆದುಕೊಂಡರು.

ಅದೇ ರೀತಿ, ಎಚ್ಎಸ್ಆರ್ ಲೇಔಟ್ ನ ವಾಣಿಜ್ಯ ಸಂಕೀರ್ಣದಲ್ಲಿನ ಮಳಿಗೆಗಳ ಮಾಲೀಕರಿಂದಲೂ 10 ಕೋಟಿ ರೂಪಾಯಿಗೂ ಅಧಿಕ ಬಾಕಿ ಬರಬೇಕಿದೆ. ನೀವೆಲ್ಲಾ ಹೀಗೆ ಕೆಲಸ ಮಾಡಿದರೆ ಸಂಸ್ಥೆ ಉದ್ಧಾರವಾಗುವುದಾದರೂ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬಾಡಿಗೆ ನೀಡದೇ ಖಾಲಿ ಮಾಡಿಕೊಂಡು ಹೋಗಿರುವ ಮಾಲೀಕರನ್ನು ಪತ್ತೆ ಮಾಡಲು ನಿಮ್ಮಿಂದ ಸಾಧ್ಯವಾಗದಿದ್ದರೆ ನಾನೇ ಖುದ್ದಾಗಿ ಸಾಧ್ಯವಾದಷ್ಟು ಮಾಲೀಕರನ್ನು ಪತ್ತೆ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

15 ದಿನಗಳಲ್ಲಿ ನೊಟೀಸ್ ಜಾರಿಗೆ ಸೂಚನೆ

ನಾಗರಭಾವಿ, ಬಿಎಸ್ ಕೆ 2 ನೇ ಹಂತ, ವಳಗೇರಹಳ್ಳಿ, ಆರ್ ಟಿ ನಗರ, ಆರ್ ಎಂ ವಿ, ಆಸ್ಟಿನ್ ಟೌನ್, ದೊಮ್ಮಲೂರು, ಎಚ್ಎಸ್ಆರ್ ಲೇಔಟ್, ಎಚ್ ಬಿಆರ್ ಲೇಔಟ್, ಕೋರಮಂಗಲ ಸೇರಿದಂತೆ 15 ವಾಣಿಜ್ಯ ಸಂಕೀರ್ಣಗಳಿಂದ ಒಟ್ಟು 40 ಕೋಟಿ ರೂಪಾಯಿಗೂ ಅಧಿಕ ಬಾಡಿಗೆಯನ್ನು ವಸೂಲಿ ಮಾಡಬೇಕಿದೆ. ಇಷ್ಟು ದಿನಗಳ ಕಾಲ ಬಾಡಿಗೆ ವಸೂಲಿ ಮಾಡದೇ ಬಿಟ್ಟಿರುವುದು ತಪ್ಪು. ಈ ಕೂಡಲೇ ಬಾಡಿಗೆ ನೀಡದ ಮಳಿಗೆಗಳ ಮಾಲೀಕರಿಗೆ ನೊಟೀಸ್ ಜಾರಿ ಮಾಡಬೇಕು. 1`5 ದಿನಗಳೊಳಗೆ ಬಾಡಿಗೆ ವಸೂಲಿ ಪ್ರಕ್ರಿಯೆಯನ್ನು ನಡೆಸಬೇಕೆಂದು ಸೂಚನೆ ನೀಡಿದರು.

ಸರ್ಕಾರಿ ಕಚೇರಿಗಳ ಮುಖ್ಯಸ್ಥರಿಗೆ ಪತ್ರ

ಈ ಮಧ್ಯೆ, ಸರ್ಕಾರಿ ಕಚೇರಿಗಳು ಬಿಡಿಎ ಕಾಂಪ್ಲೆಕ್ಸ್ ಗಳಲ್ಲಿ ಮಳಿಗೆಗಳನ್ನು ಬಾಡಿಗೆ ಪಡೆದು ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿವೆ. ಇಂತಹ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ವ್ಯವಹಾರವನ್ನು ನಡೆಸಿ ಬಾಡಿಗೆ ಸಂದಾಯ ಮಾಡುವಂತೆ ತಿಳಿಸಬೇಕೆಂದು ಬಿಡಿಎ ಆಯುಕ್ತರಿಗೆ ಸೂಚನೆ ನೀಡಿದರು.

ಇದಲ್ಲದೇ, ಸದ್ಯದಲ್ಲಿಯೇ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಬಾಡಿಗೆ ಸಂದಾಯ ಮಾಡುವ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಿಶ್ವನಾಥ್ ತಿಳಿಸಿದರು.

ಪಿಪಿಪಿ ಮಾದರಿಯ ಮಾಹಿತಿ

ಇದೇ ವೇಳೆ, ಇಂದಿರಾನಗರ, ಎಚ್ಎಸ್ಆರ್ ಲೇಔಟ್, ಆರ್.ಟಿ.ನಗರ, ಆಸ್ಟಿನ್ ಟೌನ್, ವಿಜಯನಗರ ಸೇರಿದಂತೆ ಹಲವು ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ನೀಡಿರುವ ಯೋಜನೆಗಳ ಬಗ್ಗೆ ಅಧ್ಯಕ್ಷರು ಮಾಹಿತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here