ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ನಳಿನ್‍ಕುಮಾರ್ ಕಟೀಲ್
ಚಿತ್ರದುರ್ಗದಲ್ಲಿ ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ
ಚಿತ್ರದುರ್ಗ/ಬೆಂಗಳೂರು:
ಕಾಂಗ್ರೆಸ್ ಪಕ್ಷ ತನ್ನದೇ ಆದ ತಪ್ಪುಗಳ ಮೂಲಕ ರಾಷ್ಟ್ರದಲ್ಲಿ ನಿರ್ಮೂಲನೆಯ ಹಾದಿಯಲ್ಲಿದೆ. ಬಿಜೆಪಿಯು ಅತ್ಯುತ್ತಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ಪರ ಆಡಳಿತ ನೀಡುವ ಮೂಲಕ ಭಾರತವನ್ನು ವಿಶ್ವವಂದ್ಯ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದುರ್ಗದಲ್ಲಿ ಬುಧವಾರ ಬಿಜೆಪಿ ಯುವ ಮೋರ್ಚಾದ ರಾಜ್ಯಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರ, ತುಷ್ಟೀಕರಣ, ಹಗರಣಗಳ ಕಾರಣಕ್ಕಾಗಿ ನಿರಂತರವಾಗಿ ಅವನತಿಯತ್ತ ಸಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಪುಣ್ಯ ಮತ್ತು “ಗಾಂಧಿ” ಹೆಸರಿನ ಪುಣ್ಯದಿಂದಾಗಿ ಸುಮಾರು 7 ದಶಕಗಳ ಕಾಲ ಆಳ್ವಿಕೆ ನಡೆಸಿತು. ಆದರೆ, ಕಾಂಗ್ರೆಸಿನ ನಾಯಕರು, ಪ್ರಧಾನಿಗಳಾದ ಜವಾಹಲ್‍ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನ್‍ಮೋಹನ್ ಸಿಂಗ್ ಸೇರಿದಂತೆ ಎಲ್ಲರೂ ಭ್ರಷ್ಟಾಚಾರದಿಂದಲೇ ತಮ್ಮ ಆಡಳಿತ ನಡೆಸಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರೊಬ್ಬರೇ ಇದಕ್ಕೆ ಅಪವಾದ ಎಂದು ನುಡಿದರು.
ಕೇವಲ ಅಧಿಕಾರದ ಲಾಲಸೆಗಾಗಿ ಬಿಜೆಪಿಯನ್ನು ನೆಚ್ಚಿಕೊಳ್ಳದಿರಿ. ಶ್ರೀ ಶ್ಯಾಮಪ್ರಸಾದ್ ಮುಖರ್ಜಿ, ಶ್ರೀ ದಿನಾದಯಾಳ್ ಉಪಾಧ್ಯಾಯರಂತಹ ತ್ಯಾಗ, ಬಲಿದಾನವನ್ನೇ ಜೀವನಾದರ್ಶವನ್ನಾಗಿ ಮಾಡಿಕೊಂಡಂತ ನಾಯಕರು ನಮ್ಮ ನೆನಪಿನಲ್ಲಿರಬೇಕು. ಬಿಜೆಪಿ ದೇಶವನ್ನು ಪರಮ ವೈಭವದ ರಾಷ್ಟ್ರವನ್ನಾಗಿ ನಿರ್ಮಿಸುವ ಚಿಂತನೆಯನ್ನು ಈಗ ಸಾಕಾರಗೊಳಿಸಲು ಮುಂದಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಮತ್ತು ಅವರ ಸಂಪುಟವು ನೀಡುತ್ತಿದೆ. ಭಾರತವು ಶೇಕಡಾ 60 ರಷ್ಟು ಯುವಕರಿರುವ ದೇಶವಾಗಿದ್ದು, ಯುವಕರ ನಿರುದ್ಯೋಗ ಸಮಸ್ಯೆ ನಿವಾರಣೆ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಒಯ್ಯಲು ಬಿಜೆಪಿ ಬದ್ಧವಾಗಿದೆ. ಆದರೆ, ಯುವಜನತೆ ಕೇವಲ ಅಧಿಕಾರಕ್ಕಾಗಿ ಬಿಜೆಪಿಯನ್ನು ಬಳಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಬಿಜೆಪಿಗೆ ಬಂದ ತಕ್ಷಣ ಶಾಸಕನಾಗಬೇಕು, ಸಂಸದನಾಗಬೇಕು, ಮರುದಿನವೇ ಸಚಿವನಾಗಬೇಕು, ಭವಿಷ್ಯದಲ್ಲಿ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಬೇಕೆಂಬ ಕನಸುಗಳನ್ನೇ ಇಂದಿನ ಯುವಜನತೆ ಕಂಡರೆ ಸಾಲದು, ಸೇವೆಯ ಮೂಲಕ ದೇಶವನ್ನು ವಿಶ್ವವಂದ್ಯ ರಾಷ್ಟ್ರವನ್ನಾಗಿ ಮಾಡುವ ಅಂದಿನ ಪ್ರಧಾನಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಹಿರಿಯ ಮುಖಂಡರಾದ ಶ್ರೀ ಲಾಲ್ ಕೃಷ್ಣ ಅಡ್ವಾಣಿ, ಈಗಿನ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರೆಲ್ಲರ ಚಿಂತನೆಗಳು ನಮ್ಮ ಯುವಜನತೆಗೆ ಮಾರ್ಗದರ್ಶನ ನೀಡುವಂತಾಗಬೇಕು ಎಂದು ನೆನಪಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ @MTenginkai, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಶ್ರೀ @DrSandeepBJYM, ಶಾಸಕರು, ಸಂಸದರು ಮತ್ತು ಯುವ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. (2/2)
— BJP Karnataka (@BJP4Karnataka) January 27, 2021
ಬಿಜೆಪಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅಧಿಕಾರದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಕರ್ನಾಟಕದಲ್ಲಿ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಭಿವೃದ್ಧಿಪರ ಆಡಳಿತವನ್ನು ನೀಡುತ್ತಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಉಪಚುನಾವಣೆಗಳು, ವಿಧಾನ ಪರಿಷತ್ ಚುನಾವಣೆ, ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ ಎಂದು ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಮೆಚ್ಚುಗೆಯಿಂದ ನುಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದರ್ಪವನ್ನು ಮೆರೆಯುತ್ತದೆ. ಭ್ರಷ್ಟಾಚಾರವನ್ನೇ ನಿರಂತರವನ್ನಾಗಿ ಮಾಡುತ್ತ ಬರುತ್ತಿದೆ. ಅಧಿಕಾರ ಕಳೆದುಕೊಂಡ ನಂತರ ಹಿಂಸಾಚಾರವನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತದೆ. ಸಿ.ಎ.ಎ. ಜಾರಿ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಗಲಭೆಯ ಅಸ್ತ್ರವನ್ನು ಮತ್ತು ಸಮಾಜ ಒಡೆಯುವ ದುಷ್ಕಾರ್ಯವನ್ನು ತನ್ನದಾಗಿಸಿಕೊಳ್ಳಲು ಮುಂದಾಗಿತ್ತು. ದೇಶ ವಿಭಜನೆಯ ಕಾರಣಕರ್ತರಾದ ಕಾಂಗ್ರೆಸ್ ಮುಖಂಡರು ಈಗ ರೈತ ಹಿತದ ಕಾನೂನಿನ ಬಗ್ಗೆ ತಪ್ಪು ಕಲ್ಪನೆ ಮೂಡಿಸುವ ಮೂಲಕ ದೆಹಲಿ ಸೇರಿದಂತೆ ದೇಶಾದ್ಯಂತ ಗಲಭೆಯ ಕಿಚ್ಚು ಹೊತ್ತಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ದೆಹಲಿಯಲ್ಲಿ ನಿನ್ನೆ ರೈತರ ಪ್ರತಿಭಟನೆಯ ಹೆಸರಿನಲ್ಲಿ ನಡೆದ ಹಿಂಸಾಚಾರ ಮತ್ತು ಪೊಲೀಸರ ಮೇಲಿನ ಹಲ್ಲೆಗೆ ಕಾಂಗ್ರೆಸ್ ಪಕ್ಷ ಮತ್ತು ವಿರೋಧ ಪಕ್ಷಗಳೇ ಕಾರಣ ಎಂದು ಅವರು ವಿವರಿಸಿದರು. ಅಧಿಕಾರ ಪಡೆದ ಬಿಜೆಪಿಯ ಜನಪ್ರತಿನಿಧಿಗಳು ಎಂದೂ ಮೈಮರೆಯಬಾರದು ಎಂದು ತಿಳಿಸಿದರು.
ಯುವಮೋರ್ಚಾ ರಾಜ್ಯ ಅಧ್ಯಕ್ಷರಾದ ಡಾಕ್ಟರ್ ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಟೆಂಗಿನಕಾಯಿ, ರಾಜ್ಯ ಕಾರ್ಯದರ್ಶಿಯಾದ ಶ್ರೀ ನವೀನ್, ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಶ್ರೀ ಮುರಳಿ, ಸಂಸದರಾದ ಶ್ರೀ ನಾರಾಯಣಸ್ವಾಮಿ, ಶಾಸಕರಾದ ಶ್ರೀ ಜಿ.ಎಸ್.ತಿಪ್ಪಾರೆಡ್ಡಿ, ಶ್ರೀ ಎಂ.ಚಂದ್ರಪ್ಪ, ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಚಿದಾನಂದ ಗೌಡ, ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.