‘ಬೇಡ ಬ್ರೋ’ ಅಭಿಯಾನಕ್ಕೆ ಎಂ.ಜಿ. ರಸ್ತೆ–ಚರ್ಚ್ ಸ್ಟ್ರೀಟ್ ಸಾಕ್ಷಿ; ಮಾದಕ ವಸ್ತು ವಿರೋಧಿ ಜಾಗೃತಿ ಮೂಡಿಸಿದ ಬೆಂಗಳೂರು ನಗರ ಪೊಲೀಸ್
ಬೆಂಗಳೂರು, ಜುಲೈ 8: ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸ್ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ನಗರದ ಪ್ರಮುಖ ಮನರಂಜನಾ ಕೇಂದ್ರಗಳಾದ ಎಂ.ಜಿ. ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ಪ್ರದೇಶಗಳಲ್ಲಿ “ಬೇಡ ಬ್ರೋ” ಘೋಷವಾಕ್ಯದಡಿ ವಿಶೇಷ ಮಾದಕ ವಸ್ತು ವಿರೋಧಿ ಜಾಗೃತಿ ಅಭಿಯಾನ ನಡೆಸಿವೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ನಗರ ಪೊಲೀಸ್, ನಾಗರಿಕರು, ಪ್ರವಾಸಿಗರು, ಪಬ್ ಮಾಲೀಕರು ಹಾಗೂ ಪಬ್ ಸಿಬ್ಬಂದಿಯೊಂದಿಗೆ ನೇರ ಸಂವಾದ ನಡೆಸಿ, ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಗಿದೆ ಎಂದು ತಿಳಿಸಿದೆ.
ಮಾದಕ ವಸ್ತುಗಳ ವ್ಯಸನವು ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಮೇಲೆ ಬೀರುವ ಗಂಭೀರ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದ್ದು, ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಅಗತ್ಯವೆಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಪ್ರಕಟಿಸಿರುವ ಮತ್ತೊಂದು ಪೋಸ್ಟ್ನ ಪ್ರಕಾರ, ಈ ಕಾರ್ಯಕ್ರಮವು “Anti-Drug Awareness & Public Participation Campaign – 2026” ಅಭಿಯಾನದ ಭಾಗವಾಗಿ ಆಯೋಜಿಸಲಾಗಿದ್ದು, ಸಾರ್ವಜನಿಕರು, ವ್ಯಾಪಾರ ಸಂಸ್ಥೆಗಳು ಹಾಗೂ ಕಾನೂನು ಜಾರಿ ಸಂಸ್ಥೆಗಳ ಸಹಭಾಗಿತ್ವದ ಮೂಲಕ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ.
ಅಭಿಯಾನದ ವೇಳೆ ಎಂ.ಜಿ. ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ನಲ್ಲಿರುವ ವಿವಿಧ ವಾಣಿಜ್ಯ ಸಂಸ್ಥೆಗಳು, ಪಬ್ಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿದ ಪೊಲೀಸರು, ಯುವಜನತೆ ಸೇರಿದಂತೆ ಸಾರ್ವಜನಿಕರಿಗೆ “ಜೀವನ ಹಾಳಾಗುವ ಮುನ್ನವೇ ಮಾದಕ ವಸ್ತುಗಳಿಗೆ ‘ಬೇಡ’ ಎಂದು ಹೇಳಿ” ಎಂಬ ಸಂದೇಶವನ್ನು ರವಾನಿಸಿದರು.
ಪಬ್ ಮಾಲೀಕರು ಹಾಗೂ ಸಿಬ್ಬಂದಿಯೂ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಕೈಜೋಡಿಸಬೇಕು ಹಾಗೂ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ಕೂಡಲೇ ಮಾಹಿತಿ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಬೆಂಗಳೂರು ನಗರವನ್ನು ಮಾದಕ ವಸ್ತು ಮುಕ್ತ ನಗರವನ್ನಾಗಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, “ಬೇಡ ಬ್ರೋ” ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಬೆಂಗಳೂರು ನಗರ ಪೊಲೀಸರು ಕರೆ ನೀಡಿದ್ದಾರೆ.