ಭ್ರಮೆ ಹುಟ್ಟಿಸುವ ಜಾಹೀರಾತು ಮತ್ತು ಲೇಬಲಿಂಗ್ ಉಲ್ಲಂಘನೆ ಆರೋಪ: Lotte India, Ferns N Petals ಹಾಗೂ Kubera Foodsಗೆ FSSAI ನೋಟಿಸ್
ನವದೆಹಲಿ, ಜುಲೈ 8: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ವು Lotte India Corporation Private Limited, Ferns N Petals Private Limited ಹಾಗೂ Kubera Foods ಸಂಸ್ಥೆಗಳಿಗೆ ಆಹಾರ ಉತ್ಪನ್ನಗಳ ಕುರಿತು ಗ್ರಾಹಕರನ್ನು ದಾರಿತಪ್ಪಿಸುವ ರೀತಿಯ ಜಾಹೀರಾತು, ಲೇಬಲಿಂಗ್ ದೋಷಗಳು ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006 ಹಾಗೂ ಸಂಬಂಧಿತ ನಿಯಮಗಳ ಉಲ್ಲಂಘನೆ ಆರೋಪದಡಿ ನೋಟಿಸ್ ಜಾರಿಗೊಳಿಸಿದೆ. ಮೂರು ಸಂಸ್ಥೆಗಳಿಗೂ ಏಳು ದಿನಗಳೊಳಗೆ ತಮ್ಮ ಸ್ಪಷ್ಟೀಕರಣ ಸಲ್ಲಿಸುವಂತೆ ಸೂಚಿಸಲಾಗಿದ್ದು, ತೃಪ್ತಿಕರ ಉತ್ತರ ಸಿಗದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಫ್ಎಸ್ಎಸ್ಎಐ ತಿಳಿಸಿದೆ.
ಎಫ್ಎಸ್ಎಸ್ಎಐ ಪ್ರಕಾರ, Ferns N Petals Private Limited ಸಂಸ್ಥೆಯ Roasted Almond Chocolate ಉತ್ಪನ್ನದ ಕುರಿತು ನೋಟಿಸ್ ನೀಡಲಾಗಿದೆ. ಉತ್ಪನ್ನದ ಮುಂಭಾಗದಲ್ಲಿ “Premium Chocolate” ಎಂಬ ಹೇಳಿಕೆಯನ್ನು ಬಳಸಲಾಗಿದ್ದರೂ, ಅದರಲ್ಲಿ ಕೋಕೋ ಬಟರ್ ಬದಲಿಗೆ Hydrogenated Vegetable Fat ಬಳಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ. ಇಂತಹ ಉತ್ಪನ್ನಗಳಿಗೆ ಕಡ್ಡಾಯವಾಗಿರುವ ಘೋಷಣೆಯನ್ನು ಪ್ಯಾಕ್ನಲ್ಲಿ ನೀಡಲಾಗಿಲ್ಲ ಎಂದು ಎಫ್ಎಸ್ಎಸ್ಎಐ ಆರೋಪಿಸಿದೆ.
ಇದಲ್ಲದೆ, ಉತ್ಪನ್ನದ ಪೌಷ್ಟಿಕಾಂಶ ಮಾಹಿತಿಯಲ್ಲಿ Recommended Dietary Allowance (RDA) ಶೇಕಡಾವಾರು ವಿವರಗಳನ್ನು ನಿಯಮಾನುಸಾರ ಉಲ್ಲೇಖಿಸಿಲ್ಲ ಎಂದು ತಿಳಿಸಲಾಗಿದೆ. ಉತ್ಪನ್ನವನ್ನು Almond Chocolate ಎಂದು ಮಾರುಕಟ್ಟೆಗಿಳಿಸಿ, ಪ್ಯಾಕ್ನಲ್ಲಿ ಬಾದಾಮಿ ಚಿತ್ರಗಳನ್ನು ಬಳಸಿದ್ದರೂ, ಉತ್ಪನ್ನದಲ್ಲಿ ಬಾದಾಮಿ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಪದಾರ್ಥಗಳ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ ಎಂದು ಪ್ರಾಧಿಕಾರ ಹೇಳಿದೆ.

ಇನ್ನೊಂದು ಪ್ರಕರಣದಲ್ಲಿ Kubera Foods ಸಂಸ್ಥೆಯ Soft and Fresh Cream Bun Pineapple ಉತ್ಪನ್ನಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಸ್ಎಐ ನೋಟಿಸ್ ನೀಡಿದೆ. ಉತ್ಪನ್ನದ ಮೇಲೆ “100% Natural” ಹಾಗೂ “No Preservatives, Colours & Flavours” ಎಂಬ ಹೇಳಿಕೆಗಳನ್ನು ಬಳಸಲಾಗಿದ್ದರೂ, ಅದೇ ಲೇಬಲ್ನಲ್ಲಿ Preservative (INS 282), Synthetic Food Colour (INS 110) ಹಾಗೂ ಹೆಚ್ಚುವರಿ ಫ್ಲೇವರಿಂಗ್ ಪದಾರ್ಥಗಳ ಬಳಕೆಯನ್ನು ಉಲ್ಲೇಖಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಎಫ್ಎಸ್ಎಸ್ಎಐ ಪ್ರಕಾರ “Pure”, “Fresh” ಮತ್ತು “Natural” ಎಂಬ ಪದಗಳ ಬಳಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (Advertising & Claims) ನಿಯಮಗಳ Schedule Vಗೆ ಅನುಗುಣವಾಗಿಲ್ಲ. “100% Natural” ಎಂಬ ಹೇಳಿಕೆಯೂ ಎಫ್ಎಸ್ಎಸ್ಎಐ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಹೇಳಲಾಗಿದೆ. ಹಾಗೆಯೇ “No Added Preservative, Colour & Flavour” ಎಂಬ ಹೇಳಿಕೆಯೂ ಉತ್ಪನ್ನದ ಲೇಬಲ್ನಲ್ಲಿರುವ ಪದಾರ್ಥಗಳ ವಿವರಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.

Lotte India Corporation Private Limited ವಿರುದ್ಧವೂ ಎಫ್ಎಸ್ಎಸ್ಎಐ ಹಲವು ಉತ್ಪನ್ನಗಳಲ್ಲಿ ನಿಯಮಾನುಸಾರವಲ್ಲದ ಪೂರ್ವಮುದ್ರಿತ ಲೇಬಲ್ಗಳ ಬಳಕೆ ಹಾಗೂ ಗ್ರಾಹಕರನ್ನು ದಾರಿತಪ್ಪಿಸುವ ಹೇಳಿಕೆಗಳ ಕುರಿತು ನೋಟಿಸ್ ಜಾರಿಗೊಳಿಸಿದೆ.
ಪ್ರಾಧಿಕಾರದ ಪ್ರಕಾರ, ಸಂಸ್ಥೆಯು ಪೂರ್ವಾನುಮತಿ ಪಡೆಯದೆ ಹಳೆಯ ಕಂಪನಿ ಹೆಸರಿನ ಪ್ರೀ-ಪ್ರಿಂಟೆಡ್ ಲೇಬಲ್ಗಳನ್ನು ಬಳಸಿದೆ. ಜೊತೆಗೆ Lotte Choco Pie with Rich Marshmallow, Lotte Choco Pie Real Orange ಹಾಗೂ Lotte Choco Pie Choco Burst ಉತ್ಪನ್ನಗಳ ಮೇಲೆ “100% Vegetarian” ಎಂಬ ಹೇಳಿಕೆಯನ್ನು ಬಳಸಲಾಗಿದ್ದು, ಅದು ಗ್ರಾಹಕರನ್ನು ದಾರಿತಪ್ಪಿಸುವಂತಿದೆ ಎಂದು ಎಫ್ಎಸ್ಎಸ್ಎಐ ತಿಳಿಸಿದೆ.
ಇದಲ್ಲದೆ Pepero Crunchy Biscuit Sticks Carton ಮತ್ತು Pepero Original Biscuit Sticks ಉತ್ಪನ್ನಗಳಲ್ಲಿ ನಿಯಮಾನುಸಾರ ಪೌಷ್ಟಿಕಾಂಶ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಪ್ರಾಧಿಕಾರ ಹೇಳಿದೆ.
Lolly Bliss Lollipop (Orange, Strawberry ಹಾಗೂ Kaccha Mango flavours) ಉತ್ಪನ್ನಗಳಲ್ಲಿ ವಿಟಮಿನ್ ಮಟ್ಟಕ್ಕೆ ಸಂಬಂಧಿಸಿದ ಹೇಳಿಕೆಗಳು ಸಹ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (Advertising & Claims) ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಎಫ್ಎಸ್ಎಸ್ಎಐ ತಿಳಿಸಿದೆ.
ಅದೇ ರೀತಿ Fruitz Eclairs (Mango, Orange ಹಾಗೂ Strawberry flavours) ಉತ್ಪನ್ನಗಳ ಹೆಸರು ಗ್ರಾಹಕರಿಗೆ ಅವುಗಳಲ್ಲಿ ನಿಜವಾದ ಹಣ್ಣುಗಳಿವೆ ಎಂಬ ಭ್ರಮೆ ಮೂಡಿಸುವ ಸಾಧ್ಯತೆ ಇದೆ. ಆದರೆ ಉತ್ಪನ್ನಗಳಲ್ಲಿ ಹಣ್ಣುಗಳಿಲ್ಲವೆಂದು ಪ್ರಾಧಿಕಾರ ಹೇಳಿದ್ದು, ಇಂತಹ ಬ್ರ್ಯಾಂಡ್ ಹೆಸರಿಗೆ ಕಡ್ಡಾಯವಾಗಿರುವ ಡಿಸ್ಕ್ಲೈಮರ್ನ್ನು ಪ್ಯಾಕ್ನ ಮುಂಭಾಗದಲ್ಲಿ ನೀಡಲಾಗಿಲ್ಲ ಎಂದು ಆರೋಪಿಸಿದೆ.
ಈ ಮೂರು ಸಂಸ್ಥೆಗಳಿಗೂ ಏಳು ದಿನಗಳೊಳಗೆ ತಮ್ಮ ಸ್ಪಷ್ಟೀಕರಣ ಸಲ್ಲಿಸುವಂತೆ ಎಫ್ಎಸ್ಎಸ್ಎಐ ಸೂಚಿಸಿದೆ. ಸಮರ್ಪಕ ಉತ್ತರ ನೀಡದಿದ್ದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006 ಹಾಗೂ ಸಂಬಂಧಿತ ನಿಯಮಗಳಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಸುದ್ದಿ ಪ್ರಕಟಿಸುವ ವೇಳೆಗೆ Lotte India Corporation Private Limited, Ferns N Petals Private Limited ಹಾಗೂ Kubera Foods ಸಂಸ್ಥೆಗಳಿಂದ ಎಫ್ಎಸ್ಎಸ್ಎಐ ನೋಟಿಸ್ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ. ಅವರ ಪ್ರತಿಕ್ರಿಯೆ ಲಭ್ಯವಾದ ಕೂಡಲೇ ಈ ಸುದ್ದಿಯನ್ನು ನವೀಕರಿಸಲಾಗುವುದು.