ಬೆಳ್ಳಂದೂರು ವೇಸ್ಟ್ ವೀರ್–ವರ್ಜೀನಿಯಾ ಮಾಲ್ ರಾಜಕಾಲುವೆ ಯೋಜನೆ: ಭೂಸ್ವಾಧೀನ, ಗಡಿ ಗುರುತಿಸುವಿಕೆ ತ್ವರಿತಗೊಳಿಸಲು ಬೆಂಗಳೂರು ಪೂರ್ವ ನಗರ ಪಾಲಿಕೆ ಸೂಚನೆ
ಬೆಂಗಳೂರು: ಬೆಳ್ಳಂದೂರು ವೇಸ್ಟ್ ವೀರ್/ಔಟ್ಲೆಟ್ನಿಂದ ಓಲ್ಡ್ ಏರ್ಪೋರ್ಟ್ ರಸ್ತೆಯ ವರ್ಜೀನಿಯಾ ಮಾಲ್ವರೆಗೆ ರಾಜಕಾಲುವೆ ಸಂರಕ್ಷಣೆ, ಬಫರ್ ವಲಯ ಅಭಿವೃದ್ಧಿ ಹಾಗೂ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ ಮತ್ತು ರಾಜಕಾಲುವೆ ಗಡಿ ಗುರುತಿಸುವಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಭೂಸ್ವಾಧೀನಕ್ಕಾಗಿ ನಮೂನೆ-1ರ ಅಧಿಸೂಚನೆ ಹೊರಡಿಸುವ ಕುರಿತು ಆಯುಕ್ತರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಭೆ ನಡೆಯಿತು.
ಸಭೆಯಲ್ಲಿ ರಾಜಕಾಲುವೆಯ ಮೂಲ ಗಡಿ ಹಾಗೂ ಬಫರ್ ವಲಯವನ್ನು ಅಧಿಕೃತ ಭೂದಾಖಲೆಗಳು, ಸರ್ವೇ ನಕ್ಷೆಗಳು ಮತ್ತು ಸ್ಥಳ ಪರಿಶೀಲನೆಯ ಆಧಾರದ ಮೇಲೆ ನಿಖರವಾಗಿ ಗುರುತಿಸಿ, ಅದರಂತೆ ಯೋಜನೆಗಳನ್ನು ಅಂತಿಮಗೊಳಿಸುವಂತೆ ಸೂಚಿಸಲಾಯಿತು. ಗಡಿ ಗುರುತಿಸುವ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ವಿವಿಧ ಇಲಾಖೆಗಳ ದಾಖಲೆಗಳನ್ನು ಸಮನ್ವಯಗೊಳಿಸಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾಮಗಾರಿಯನ್ನು ವಿಳಂಬವಿಲ್ಲದೆ ಅನುಷ್ಠಾನಗೊಳಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ವರ್ತೂರು ಕೋಡಿಯಿಂದ ವರ್ತೂರು–ಗುಂಜೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಕೆಆರ್ಡಿಐಎಲ್ (KRIDL) ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆಯನ್ನೂ ಪರಿಶೀಲಿಸಲಾಯಿತು.
ನಕ್ಷೆ ಮಂಜೂರಾತಿ ವೇಳೆ ಭೂಮಾಲೀಕರು ಪರಿತ್ಯಜನಾ ಪತ್ರದ ಮೂಲಕ ರಸ್ತೆ ಅಭಿವೃದ್ಧಿಗೆ ಮೀಸಲಿಟ್ಟಿರುವ ಜಾಗವನ್ನು ಬಳಸಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಅಗತ್ಯವಿರುವ ಭೂಮಾಲೀಕರಿಗೆ ನೋಟಿಸ್ ಜಾರಿ ಮಾಡಿ, ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಅಪರ ಆಯುಕ್ತರು (ಕಂದಾಯ) ಡಾ. ಪ್ರಜ್ಞಾ ಅಮ್ಮೆಂಬಳ, ಜಂಟಿ ಆಯುಕ್ತರು/ಉಪ ಆಯುಕ್ತರು (ಟಿಡಿಆರ್) ಡಾ. ದಾಕ್ಷಾಯಿಣಿ ಕೆ., ತಾಂತ್ರಿಕ ನಿರ್ದೇಶಕರು, ಮುಖ್ಯ ಅಭಿಯಂತರರು (ಬಿ-ಸ್ಮೈಲ್), ಸಹಾಯಕ ಕಾರ್ಯಪಾಲಕ ಅಭಿಯಂತರರು (ಟಿಡಿಆರ್ ವಿಭಾಗ), ಕಾರ್ಯಪಾಲಕ ಅಭಿಯಂತರರು (ಬೃಹತ್ ನೀರುಗಾಲುವೆ ಮತ್ತು ಕೆರೆಗಳು), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಭೂದಾಖಲೆಗಳು), ನಗರ ಯೋಜಕರು, ಟಿಡಿಆರ್ ವಿಭಾಗದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
