‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಚಾಲನೆ; ನಿರ್ಮಾಣ ತ್ಯಾಜ್ಯ ತೆರವಿಗೆ ಜಿಬಿಎ ಮಹಾ ಕಾರ್ಯಾಚರಣೆ
ಬೆಂಗಳೂರು: ನಗರವನ್ನು ಸ್ವಚ್ಛ, ಸುಂದರ, ಆರೋಗ್ಯಕರ ಹಾಗೂ ವಾಸಯೋಗ್ಯವಾಗಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಹಾಗೂ ವಿವಿಧ ಸರ್ಕಾರಿ ಇಲಾಖೆ ಮತ್ತು ಅಂಗ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ (Freedom from Waste) ಅಭಿಯಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಹೆಬ್ಬಾಳ ಜಂಕ್ಷನ್ ಸಮೀಪದ ಎಸ್ಟೀಮ್ ಮಾಲ್ ಬಳಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಇಂಧನ ಸಚಿವ ಕೆ.ಜೆ. ಜಾರ್ಜ್, ಶಾಸಕರಾದ ಎಸ್.ಆರ್. ವಿಶ್ವನಾಥ್ ಮತ್ತು ಎ.ಸಿ. ಶ್ರೀನಿವಾಸ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್, ಬಿಎಸ್ಡಬ್ಲ್ಯುಎಂಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ, ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಆಗಸ್ಟ್ ತಿಂಗಳ ಪೂರ್ತಿ ನಡೆಯಲಿರುವ ಈ ಅಭಿಯಾನದಲ್ಲಿ ಐದು ನಗರ ಪಾಲಿಕೆಗಳು, ಬಿಎಸ್ಡಬ್ಲ್ಯುಎಂಎಲ್, ಬೆಂಗಳೂರು ಜಲಮಂಡಳಿ (BWSSB), ಬೆಸ್ಕಾಂ, ಬಿಎಂಆರ್ಸಿಎಲ್, ಭಾರತೀಯ ರೈಲ್ವೆ, ಕೆ-ರೈಡ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಕೆಐಎಡಿಬಿ ಸೇರಿದಂತೆ ವಿವಿಧ ಇಲಾಖೆಗಳು ಭಾಗವಹಿಸಲಿವೆ.
ನಗರದ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿರುವ ನಿರ್ಮಾಣ ಮತ್ತು ಧ್ವಂಸ (C&D) ತ್ಯಾಜ್ಯ, ಮರದ ಕೊಂಬೆಗಳು, ವಿದ್ಯುತ್ ಕಂಬಗಳು, ಪೈಪ್ಗಳು ಹಾಗೂ ಇತರೆ ಅವಶೇಷಗಳನ್ನು ಸಮನ್ವಯಿತ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಗುತ್ತದೆ.
ನಿರ್ಮಾಣ ಮತ್ತು ಧ್ವಂಸ ತ್ಯಾಜ್ಯದ ಸಾಗಣೆ, ಸ್ಥಳದ ಮಾಹಿತಿ, ಪ್ರಮಾಣ ಹಾಗೂ ವಿಲೇವಾರಿಯ ಮೇಲ್ವಿಚಾರಣೆಗಾಗಿ ಬಿಎಸ್ಡಬ್ಲ್ಯುಎಂಎಲ್ ಅಭಿವೃದ್ಧಿಪಡಿಸಿರುವ ‘ಕ್ಲಿಯರಿಟ್’ (Clearit) ತಂತ್ರಾಂಶವನ್ನು ಬಳಸಲಾಗುತ್ತದೆ.
ನಗರದಾದ್ಯಂತ 1,616 ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 22,730 ಮೆಟ್ರಿಕ್ ಟನ್ ನಿರ್ಮಾಣ ಮತ್ತು ಧ್ವಂಸ ತ್ಯಾಜ್ಯ ಹಾಗೂ ಜಡ ತ್ಯಾಜ್ಯ ಇರುವುದನ್ನು ಗುರುತಿಸಲಾಗಿದೆ. ಹೊಸದಾಗಿ ಪತ್ತೆಯಾಗುವ ತ್ಯಾಜ್ಯ ಸ್ಥಳಗಳ ಮಾಹಿತಿಯನ್ನು ವಾರ್ಡ್ ಮಟ್ಟದ ಸಹಾಯಕ ಎಂಜಿನಿಯರ್ಗಳು ಆ್ಯಪ್ ಮೂಲಕ ಅಪ್ಲೋಡ್ ಮಾಡಲು ವ್ಯವಸ್ಥೆ ಮಾಡಲಾಗಿದೆ.
ನಿರ್ಮಾಣ ಮತ್ತು ಧ್ವಂಸ ತ್ಯಾಜ್ಯ (ನಿರ್ವಹಣೆ) ನಿಯಮಗಳು-2025ರ ಅನ್ವಯ ಎಂ/ಎಸ್ ಚೈತ್ರಾ ಸಿವಿಲ್ ವೆಂಚರ್ಸ್ ಎಲ್ಎಲ್ಪಿ ಸಂಸ್ಥೆಯನ್ನು ತ್ಯಾಜ್ಯ ಸಂಗ್ರಹಣೆ ಹಾಗೂ ಸಂಸ್ಕರಣಾ ಘಟಕಗಳಿಗೆ ಸಾಗಿಸುವ ಕಾರ್ಯಕ್ಕೆ ನೇಮಕ ಮಾಡಲಾಗಿದೆ. ತ್ಯಾಜ್ಯ ಲೋಡಿಂಗ್ ಹಾಗೂ ಸಾಗಣೆ ದರವನ್ನು ಪ್ರತಿ ಟನ್ಗೆ ₹760.50 ನಿಗದಿಪಡಿಸಲಾಗಿದೆ.
ಬೃಹತ್ ಪ್ರಮಾಣದ ತ್ಯಾಜ್ಯ ತೆರವಿಗಾಗಿ ಐದು ನಗರ ಪಾಲಿಕೆಗಳಿಗೆ ಒಟ್ಟು 70 ಟಿಪ್ಪರ್ ವಾಹನಗಳನ್ನು ನಿಯೋಜಿಸಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ವಾಹನಗಳನ್ನೂ ನಿಯೋಜಿಸಲಾಗುವುದು.
ಜಡ ತ್ಯಾಜ್ಯ ವಿಲೇವಾರಿಗಾಗಿ ಯರಪ್ಪನಹಳ್ಳಿ, ಮಾರೇನಹಳ್ಳಿ, ವೆಂಕಟಾಪುರ, ವಿಟ್ಟಸಂದ್ರ ಹಾಗೂ ಕಲ್ಲುಬಾಳು ಸೇರಿದಂತೆ ಐದು ಸ್ಥಳಗಳನ್ನು ಗುರುತಿಸಲಾಗಿದೆ.
ಖಾಸಗಿ ಖಾಲಿ ನಿವೇಶನಗಳ ಮಾಲೀಕರು ತಮ್ಮ ಜಾಗದಲ್ಲಿರುವ ಕಸ, ಕಟ್ಟಡ ಅವಶೇಷಗಳು ಹಾಗೂ ಪೊದೆಗಳನ್ನು ಆಗಸ್ಟ್ 15, 2026ರೊಳಗೆ ತೆರವುಗೊಳಿಸುವಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.
ನಿಗದಿತ ಅವಧಿಯೊಳಗೆ ಸ್ವಚ್ಛಗೊಳಿಸದಿದ್ದರೆ ಸಂಬಂಧಿತ ನಗರ ಪಾಲಿಕೆಗಳು ತ್ಯಾಜ್ಯ ತೆರವುಗೊಳಿಸಿ ಅದರ ವೆಚ್ಚವನ್ನು ಜಾಗದ ವಿಸ್ತೀರ್ಣ ಹಾಗೂ ತ್ಯಾಜ್ಯದ ಪ್ರಮಾಣದ ಆಧಾರದ ಮೇಲೆ ಮಾಲೀಕರಿಂದ ವಸೂಲಿ ಮಾಡಲಿವೆ. ಮೊದಲ ಉಲ್ಲಂಘನೆಗೆ ₹25,000 ದಂಡ, ನಂತರದ ಉಲ್ಲಂಘನೆಗಳಿಗೆ ₹50,000 ರಿಂದ ₹1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.
ಆಗಸ್ಟ್ 15ರ ನಂತರವೂ ಸ್ವಚ್ಛಗೊಳಿಸದ ಖಾಲಿ ಜಾಗಗಳ ಕುರಿತು ಸಾರ್ವಜನಿಕರು ಛಾಯಾಚಿತ್ರ ಹಾಗೂ ಜಿಪಿಎಸ್ ಸ್ಥಳಾಂಕಗಳೊಂದಿಗೆ 94481 97197 ಸಂಖ್ಯೆಯ ವಾಟ್ಸ್ಆಪ್ ಚಾಟ್ಬಾಟ್ಗೆ ಮಾಹಿತಿ ನೀಡಬಹುದು. ದೂರುದಾರರ ಗುರುತನ್ನು ಗೌಪ್ಯವಾಗಿಡಲಾಗುತ್ತದೆ.
ಸ್ವಚ್ಛಗೊಳಿಸಿದ ಬಳಿಕ ಖಾಲಿ ಜಾಗಗಳಿಗೆ ಕಡ್ಡಾಯವಾಗಿ ಬೇಲಿ ಅಥವಾ ಕಾಂಪೌಂಡ್ ನಿರ್ಮಿಸಿ ಮತ್ತೆ ಕಸ ಸಂಗ್ರಹವಾಗದಂತೆ ಕ್ರಮ ಕೈಗೊಳ್ಳುವಂತೆ ಜಾಗದ ಮಾಲೀಕರಿಗೆ ಸೂಚಿಸಲಾಗಿದೆ.
ನಗರವನ್ನು ಸ್ವಚ್ಛ ಮತ್ತು ಹಸಿರು ಬೆಂಗಳೂರಾಗಿಸಲು ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಹಾಗೂ ಯುವಜನರು ಸಕ್ರಿಯವಾಗಿ ಭಾಗವಹಿಸಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನವನ್ನು ಜನಾಂದೋಲನವಾಗಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ.
