Bengaluru| Allegation of sexual harassment of young woman: FIR filed: ಯುವತಿಗೆ ಲೈಂಗಿಕ ಕಿರುಕುಳ ಆರೋಪ: ಎಫ್ಐಆರ್ ದಾಖಲು
ಬೆಂಗಳೂರು:
ಹೊಟೇಲ್ವೊಂದಕ್ಕೆ ಬಂದಿದ್ದ ಯುವತಿಯನನ್ನು ಸ್ಪರ್ಶಿಸಿ, ಅಸಭ್ಯವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಯುವಕನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ (Vijayanagara Police Station) ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ಡಿಸೆಂಬರ್ 30ರ ಸಂಜೆ ವಿಜಯನಗರದ ಆರ್ ಪಿಸಿ ಲೇಔಟ್ನಲ್ಲಿರುವ ಹೊಟೇಲ್ನಲ್ಲಿ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೊಟೇಲ್ ಕ್ಯಾಶಿಯರ್ ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಹೋಟೆಲ್ಗೆ ಬಂದಿದ್ದ ಮೂವರು ಯುವಕರು ದೋಸೆ ತಿನ್ನುತ್ತಾ ಕೆಲಕಾಲ ಅಲ್ಲಿಯೇ ನಿಂತು ಹರಟೆ ಹೊಡೆಯುತ್ತಿದ್ದರು. ಇದೇ ವೇಳೆ ಹೊಟೇಲ್ಗೆ ಬಂದಿದ್ದ ಯುವತಿ ಕ್ಯಾಶ್ ಕೌಂಟರ್ ಸಮೀಪ ನಿಂತಿದ್ದಾಗ ಆರೋಪಿಗಳ ಪೈಕಿ ಒಬ್ಬ ಉದ್ದೇಶಪೂರ್ವಕವಾಗಿ ಆಕೆಯನ್ನು ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದಾನೆ. ಆತನ ದುಷ್ಕೃತ್ಯವನ್ನು ಉಳಿದಿಬ್ಬರು ಆರೋಪಿಗಳು ನೋಡಿ ನಗುತ್ತಾ ನಿಂತಿರುವುದು ಹೊಟೇಲ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆರೋಪಿಯ ಕೃತ್ಯವನ್ನು ಪ್ರತಿರೋಧಿಸಿದ್ದ ಯುವತಿ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಜನರು ಜಮಾಯಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ದೂರು ಸ್ವೀಕರಿಸಿರುವ ವಿಜಯನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.