ಬೆಂಗಳೂರು ಪೂರ್ವದ ಇ-ಖಾತಾ ಸಹಾಯ ಕೇಂದ್ರದಲ್ಲಿ ನಾಗರಿಕರು ಮತ್ತು ಸಿಬ್ಬಂದಿ. ಚಿತ್ರ: ಜಿಬಿಎ.
ಬೆಂಗಳೂರು: ಇ-ಖಾತಾ ಅರ್ಜಿಗಳನ್ನು ವಿಳಂಬವಿಲ್ಲದೆ ವಿಲೇವಾರಿ ಮಾಡಬೇಕು. ದಾಖಲೆಗಳ ಕೊರತೆ ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅರ್ಜಿದಾರರಿಗೆ ಸ್ಪಷ್ಟ ಮಾರ್ಗದರ್ಶನ ನೀಡಿ, ಅವರು ಪದೇಪದೇ ಕಚೇರಿಗಳಿಗೆ ಭೇಟಿ ನೀಡುವಂತಾಗದಂತೆ ನೋಡಿಕೊಳ್ಳಬೇಕು ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹದೇವಪುರ ವಲಯದ ವೈಟ್ಫೀಲ್ಡ್ ಮತ್ತು ಮಾರತ್ತಹಳ್ಳಿ ಹಾಗೂ ಕೆ.ಆರ್.ಪುರಂ ವಲಯದ ಎಚ್ಎಎಲ್ ಉಪವಿಭಾಗಗಳ ಇ-ಖಾತಾ ಮೇಳಗಳಿಗೆ ಭೇಟಿ ನೀಡಿದ ಅವರು ಈ ನಿರ್ದೇಶನ ನೀಡಿದರು. ಅರ್ಜಿಗಳ ಸ್ವೀಕಾರ, ಆಸ್ತಿ ದಾಖಲೆಗಳ ಪರಿಶೀಲನೆ ಮತ್ತು ಸೇವೆ ಒದಗಿಸುವ ಪ್ರಕ್ರಿಯೆಯನ್ನು ಪರಿಶೀಲಿಸಿ, ನಾಗರಿಕರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿದರು. ‘ನನ್ನ ಇ-ಖಾತಾ, ನನ್ನ ಹಕ್ಕು’ ಅಭಿಯಾನದಡಿ ಹಲವು ಬಿ-ಖಾತಾ ಆಸ್ತಿ ಮಾಲೀಕರು ಮೇಳಗಳಲ್ಲಿ ಇ-ಖಾತಾ ಸೇವೆಗಳನ್ನು ಪಡೆದರು ಎಂದು ಪಾಲಿಕೆ ತಿಳಿಸಿದೆ.
ದಾಖಲೆ, ಮಾಲೀಕತ್ವದ ವಿಚಾರದಲ್ಲಿ ಸ್ಪಷ್ಟ ಮಾರ್ಗದರ್ಶನ
ಅರ್ಜಿಗಳು ಮತ್ತು ಲಗತ್ತಿಸಿರುವ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸಬೇಕು. ಅಗತ್ಯ ದಾಖಲೆಗಳ ಕೊರತೆ ಅಥವಾ ಮಾಲೀಕತ್ವಕ್ಕೆ ಸಂಬಂಧಿಸಿದ ವಿಚಾರಗಳಿದ್ದರೆ, ಅವುಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಅರ್ಜಿದಾರರಿಗೆ ಸ್ಪಷ್ಟ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕು ಎಂದು ಆಯುಕ್ತರು ಹೇಳಿದರು. ಪ್ರಕ್ರಿಯೆಯ ಬಗ್ಗೆ ಪಾರದರ್ಶಕ ಮಾಹಿತಿ ನೀಡಿ ಗೊಂದಲ ಉಂಟಾಗದಂತೆ ನೋಡಿಕೊಳ್ಳುವಂತೆಯೂ ಸೂಚಿಸಿದರು.
ಅರ್ಜಿ ಸಲ್ಲಿಕೆ, ಆಸ್ತಿ ದಾಖಲೆಗಳ ವ್ಯತ್ಯಾಸ ಮತ್ತು ಅರ್ಜಿಗಳ ವಿಲೇವಾರಿ ಕುರಿತು ನಾಗರಿಕರು ವ್ಯಕ್ತಪಡಿಸುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ನಿಯಮಾನುಸಾರ ಪರಿಹರಿಸಬೇಕು. ಅರ್ಜಿದಾರರಿಗೆ ಅನಗತ್ಯ ತೊಂದರೆ ಅಥವಾ ಕಿರುಕುಳವಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶಿಸಿದರು.
ಮೇಳದ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯ ಮತ್ತು ನೆರವು ಒದಗಿಸಬೇಕು. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇ-ಖಾತಾ ಪಡೆಯುವುದರ ಪ್ರಯೋಜನಗಳ ಬಗ್ಗೆ ತಿಳಿಸಬೇಕು. ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಆಯುಕ್ತರು ಹೇಳಿದರು. ಆಸ್ತಿ ಮಾಲೀಕರು ಸೇವೆಗಳನ್ನು ಬಳಸಿಕೊಳ್ಳಲು ಅಭಿಯಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವಂತೆಯೂ ಸೂಚಿಸಿದರು.
ಆರು ಉಪವಿಭಾಗಗಳಲ್ಲಿ ಮೇಳ
ಮಹದೇವಪುರ ವಲಯದ ಹೂಡಿ, ಮಾರತ್ತಹಳ್ಳಿ ಮತ್ತು ವೈಟ್ಫೀಲ್ಡ್ ಹಾಗೂ ಕೆ.ಆರ್.ಪುರಂ ವಲಯದ ಎಚ್ಎಎಲ್ ವಿಮಾನ ನಿಲ್ದಾಣ, ಕೆ.ಆರ್.ಪುರಂ ಮತ್ತು ಹೊರಮಾವು ಉಪವಿಭಾಗಗಳ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ ಮೇಳಗಳನ್ನು ಆಯೋಜಿಸಲಾಗಿತ್ತು. ಈ ಕೇಂದ್ರಗಳಲ್ಲಿ ನಾಗರಿಕರಿಗೆ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ಇ-ಖಾತಾ ಸೇವೆಗಳನ್ನು ಒದಗಿಸಲಾಯಿತು.
