ಪಣತ್ತೂರು ಅಂಡರ್ಪಾಸ್, ಮುನ್ನೆಕೊಳಾಲ ರಾಜಕಾಲುವೆ ಸ್ವಚ್ಛತೆಗೆ ಬೆಂಗಳೂರು ಪೂರ್ವ ಪಾಲಿಕೆ ಸೂಚನೆ
ಬೆಂಗಳೂರು: ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ, ಪಣತ್ತೂರು ಎಸ್-ಕ್ರಾಸ್ ರೈಲ್ವೆ ಅಂಡರ್ಪಾಸ್ನ ಹೂಳು ತೆರವು, ನೀರು ಹೊರಹಾಕುವ ಪಂಪ್ಗಳ ಪರಿಶೀಲನೆ ಹಾಗೂ ಮುನ್ನೆಕೊಳಾಲ ರಾಜಕಾಲುವೆ ಸ್ವಚ್ಛತೆಗೆ ಬೆಂಗಳೂರು ಪೂರ್ವ ನಗರ ಪಾಲಿಕೆ ಸೂಚಿಸಿದೆ.
ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಅಪರ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಅಧಿಕಾರಿಗಳಿಗೆ ಈ ನಿರ್ದೇಶನಗಳನ್ನು ನೀಡಿದರು ಎಂದು ಪಾಲಿಕೆ ತಿಳಿಸಿದೆ.
ಅಂಡರ್ಪಾಸ್ ಪಂಪ್ಗಳು ಸದಾ ಕಾರ್ಯನಿರ್ವಹಿಸಲಿ
ಪಣತ್ತೂರು ಅಂಡರ್ಪಾಸ್ನಲ್ಲಿ ಸಂಗ್ರಹವಾಗಿರುವ ಹೂಳು ಮತ್ತು ಮಣ್ಣನ್ನು ತಕ್ಷಣ ತೆರವುಗೊಳಿಸುವಂತೆ ವಾರ್ಡ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲಿ ಅಳವಡಿಸಿರುವ ನೀರು ಹೊರಹಾಕುವ ಪಂಪ್ಗಳು ಸದಾ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಬೇಕು. ತಾಂತ್ರಿಕ ದೋಷ ಕಂಡುಬಂದರೆ ಕೂಡಲೇ ದುರಸ್ತಿ ಮಾಡಿ, ಮಳೆನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.
ಕೆ-ರೈಡ್ ಅಳವಡಿಸಿರುವ ನೀರು ಹೊರಹಾಕುವ ವ್ಯವಸ್ಥೆಗೆ ಸಂಪರ್ಕ ಹೊಂದಿರುವ ಮ್ಯಾನ್ಹೋಲ್ಗಳನ್ನೂ ಸ್ವಚ್ಛಗೊಳಿಸಿ, ಒಳಗೆ ಸಂಗ್ರಹವಾಗಿರುವ ಹೂಳು ಮತ್ತು ಮಣ್ಣು ತೆರವುಗೊಳಿಸಲು ಸೂಚಿಸಲಾಗಿದೆ.
ರಾಜಕಾಲುವೆ ಸ್ವಚ್ಛತೆ, ರಸ್ತೆ ಸಂಪರ್ಕಕ್ಕೆ ಆದ್ಯತೆ
ಬಿ-ಸ್ಮೈಲ್ ಬಫರ್ ರಸ್ತೆ ಪ್ರದೇಶದಲ್ಲಿ ಮಳೆನೀರು ಹರಿವಿಗೆ ಅಡ್ಡಿಯಾಗುತ್ತಿರುವ ಸ್ಥಳಗಳನ್ನು ಗುರುತಿಸಿ, ಅಗತ್ಯವಿರುವ ಕಡೆ ಸೂಕ್ತ ಕಾಲುವೆ ನಿರ್ಮಿಸುವಂತೆ ಅಪರ ಆಯುಕ್ತರು ಸೂಚಿಸಿದರು.
ಮುನ್ನೆಕೊಳಾಲ ರಾಜಕಾಲುವೆಯಲ್ಲಿರುವ ಮಣ್ಣು, ಹೂಳು ಮತ್ತು ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸಬೇಕು. ಮತ್ತೆ ತ್ಯಾಜ್ಯ ಸಂಗ್ರಹವಾಗದಂತೆ ನಿಯಮಿತ ಮೇಲ್ವಿಚಾರಣೆ ನಡೆಸಬೇಕು ಎಂದು ನಿರ್ದೇಶಿಸಿದರು. ರಸ್ತೆ ಸಂಪರ್ಕದ ಕೊರತೆ ಇರುವ ಸ್ಥಳಗಳನ್ನು ಗುರುತಿಸಿ, ಅಗತ್ಯ ಸಂಪರ್ಕ ರಸ್ತೆ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆಯೂ ತಿಳಿಸಿದರು.
ಕ್ರೋಮ ರಸ್ತೆ ಕಾಮಗಾರಿ ವೇಳೆ ಬದಲಿ ಮಾರ್ಗ ಪರಿಶೀಲಿಸಿ
ಕ್ರೋಮ ರಸ್ತೆ ಪ್ರದೇಶದಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿಯಿಂದ ರಸ್ತೆ ಸಂಪರ್ಕಕ್ಕೆ ತೊಂದರೆಯಾಗುತ್ತಿದೆ ಎಂಬ ಸಾರ್ವಜನಿಕರ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಅಪರ ಆಯುಕ್ತರು ಸ್ಥಳ ಪರಿಶೀಲಿಸಿದರು. ಮಳೆನೀರು ಹರಿವಿಗೆ ಅಗತ್ಯವಾಗಿರುವ ಕಾಮಗಾರಿಯನ್ನು ಸ್ಥಗಿತಗೊಳಿಸದೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಕಾಮಗಾರಿ ನಡೆಯುವ ಅವಧಿಯಲ್ಲಿ ಪರ್ಯಾಯ ರಸ್ತೆ ಅಥವಾ ಬದಲಿ ಸಂಚಾರ ಮಾರ್ಗದ ಸಾಧ್ಯತೆಗಳನ್ನು ಪರಿಶೀಲಿಸಿ, ಅಗತ್ಯವಿರುವ ಕಡೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರ ಸುರಕ್ಷತೆಗೂ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ರಾಜಕಾಲುವೆ ಮತ್ತು ಅಂಡರ್ಪಾಸ್ಗಳ ಸ್ವಚ್ಛತೆ ಹಾಗೂ ನಿರ್ವಹಣೆಯನ್ನು ನಿರಂತರವಾಗಿ ಕೈಗೊಳ್ಳಬೇಕು. ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ಸ್ಥಳೀಯ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಅಪರ ಆಯುಕ್ತರು ತಿಳಿಸಿದರು. ರೈಲ್ವೆ ಇಲಾಖೆ, ರಾಜಕಾಲುವೆ ವಿಭಾಗ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆಯಲ್ಲಿ ಭಾಗವಹಿಸಿದ್ದರು.
ಚಿತ್ರ: ಬೆಂಗಳೂರು ಪೂರ್ವ ನಗರ ಪಾಲಿಕೆ.
