ಬೆಂಗಳೂರಿನಲ್ಲಿ ನಡೆದ ಜಿಎಸ್ಟಿ ಸಂವಾದ. ಚಿತ್ರ: ಸಿಬಿಐಸಿ/ಎಕ್ಸ್.
ಬೆಂಗಳೂರು: ಜಿಎಸ್ಟಿ ಮಂಡಳಿಯ 57ನೇ ಸಭೆಯ ಸುಧಾರಣೆಗಳ ಕುರಿತು ಅಕ್ಟೋಬರ್ 13ರಂದು ಬೆಂಗಳೂರಿನಲ್ಲಿ ನಡೆದ ಸಂವಾದದಲ್ಲಿ ವ್ಯಾಪಾರ ಸಂಘಗಳು ಮತ್ತು ತೆರಿಗೆದಾರರ ಸುಮಾರು 250 ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸುಂಕ ಮಂಡಳಿ (ಸಿಬಿಐಸಿ) ತಿಳಿಸಿದೆ.
ಸಿಬಿಐಸಿ ಅಧ್ಯಕ್ಷ ವಿವೇಕ್ ಚತುರ್ವೇದಿ ಮತ್ತು ಸದಸ್ಯ (ಜಿಎಸ್ಟಿ) ಸಂಜಯ್ ಮಂಗಲ್ ಅವರು ಪ್ರತಿನಿಧಿಗಳೊಂದಿಗೆ ಚರ್ಚಿಸಿದರು. ಭಾಗವಹಿಸಿದವರು ಮಂಡಳಿಯ ಶಿಫಾರಸುಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ವ್ಯಾಪಾರ ನಡೆಸುವುದನ್ನು ಸುಲಭಗೊಳಿಸುವ ಉದ್ದೇಶದ ಶಿಫಾರಸುಗಳನ್ನು ಪ್ರತಿನಿಧಿಗಳು ಸ್ವಾಗತಿಸಿದರು ಎಂದು ಸಿಬಿಐಸಿ ಹೇಳಿದೆ.
ಬೆಂಗಳೂರು ವಲಯದ ಕೇಂದ್ರ ತೆರಿಗೆ ಮುಖ್ಯ ಆಯುಕ್ತೆ ಕಾಜಲ್ ಸಿಂಗ್, ಕರ್ನಾಟಕದ ವಾಣಿಜ್ಯ ತೆರಿಗೆ ಆಯುಕ್ತ ವಿಪುಲ್ ಬನ್ಸಲ್ ಮತ್ತು ಕೇಂದ್ರ ಹಾಗೂ ರಾಜ್ಯ ಜಿಎಸ್ಟಿ ಆಡಳಿತದ ಹಿರಿಯ ಅಧಿಕಾರಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.
ವ್ಯಾಪಾರ ಪ್ರತಿನಿಧಿಗಳೊಂದಿಗಿನ ಸಭೆಯ ಬಳಿಕ ಸಿಬಿಐಸಿ ಅಧ್ಯಕ್ಷರು ಮತ್ತು ಸದಸ್ಯರು ಬೆಂಗಳೂರು ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬಿಐಸಿ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಂವಾದ ನಡೆಸಿದರು.
