ಬೆಂಗಳೂರು:
ಭಾರತ-ಜಿ20 ಅಧ್ಯಕ್ಷತೆ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಇಂಡಿಯನ್ ಎನರ್ಜಿ ವೀಕ್ -2023 ಉದ್ಘಾಟಿಸಲಿದ್ದಾರೆ. ಜೊತೆಗೆ ಇನ್ನೂ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ದಿನ ತುಮಕೂರು ಬಳಿ ಹೆಚ್ ಎಎಲ್ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಫೆಬ್ರವರಿ 6 ರಿಂದ 8ರವರೆಗೆ ನಡೆಯಲಿರುವ ಇಂಡಿಯನ್ ಎನರ್ಜಿ ವೀಕ್, ಇಂಧನ ಶಕ್ತಿ ಪರಿವರ್ತನೆ ಕೇಂದ್ರವಾಗಿ ದೇಶ ಸಾಧಿಸಿರುವ ಪರಾಕ್ರಮವನ್ನು ಜಗತ್ತಿಗೆ ತೋರಿಸಲಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.
ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಇಂಧನ ಉದ್ಯಮದ ದಿಗ್ಗಜರು, ಸರ್ಕಾರ ಮತ್ತು ಶೈಕ್ಷಣಿಕ ಕ್ಷೇತ್ರದ ತಜ್ಞರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಪ್ರಸ್ತುತ ಇಂಧನ ಶಕ್ತಿ ಪರಿವರ್ತನೆಯಲ್ಲಿನ ಸವಾಲುಗಳು ಮತ್ತುಅವಕಾಶಗಳ ಕುರಿತಂತೆ ಸಂವಾದ ನಡೆಯಲಿದೆ.
ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ 3, 0000 ಕ್ಕೂ ಹೆಚ್ಚು ಪ್ರತಿನಿಧಿಗಳು, 1, 000 ಪ್ರದರ್ಶಕರು ಮತ್ತು 500 ಭಾಷಣಕರು ಸೇರಿದಂತೆ ವಿಶ್ವಾದ್ಯಂತ 30 ಕ್ಕೂ ಹೆಚ್ಚು ಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ತೈಲ ಮತ್ತು ಅನಿಲ ಕ್ಷೇತ್ರದ ಸಿಇಒಗಳೊಂದಿಗೆ ದುಂಡು ಮೇಜಿನ ಸಂವಾದಲ್ಲಿ ಪಾಲ್ಗೊಳ್ಳಲಿದ್ದು, ಹಸಿರು ಶಕ್ತಿ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಸರ್ಕಾರದ ನಿರಂತರ ಪ್ರಯತ್ನಗಳಿಂದಾಗಿ ದೇಶದಲ್ಲಿ ಎಥೆನಾಲ್ ಉತ್ಪಾದನೆಯು 2013-14 ರಿಂದ ಆರು ಪಟ್ಟು ಹೆಚ್ಚಾಗಿದೆ. ಇದು 318 ಲಕ್ಷ ಮೆಟ್ರಿಕ್ ಟನ್ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಸುಮಾರು 54000 ಕೋಟಿ ರೂಪಾಯಿಗಳ ವಿದೇಶಿ ವಿನಿಮಯ ಉಳಿತಾಯಕ್ಕೆ ನೆರವಾಗಲಿದೆ ಎಂದು ತಿಳಿಸಲಾಗಿದೆ.
2014 ರಿಂದ 2022 ರವರೆಗೆ ಎಥೆನಾಲ್ ಪೂರೈಕೆಗಾಗಿ ಸುಮಾರು 81,800 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ ಮತ್ತು ರೈತರಿಗೆ 49,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ವರ್ಗಾವಣೆಯಾಗಿದೆ ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ.
ಇದೆಲ್ಲದರ ಜೊತೆಗೆ, ಪ್ರಧಾನಿ ಮೋದಿ, ಇಂಡಿಯನ್ ಆಯಿಲ್‌ನ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ಟ್ವಿನ್-ಕುಕ್ ಟಾಪ್ ಮಾಡೆಲ್ ಅನ್ನು ಲೋಕಾರ್ಪಣೆ ಮಾಡಲು ನಿರ್ಧರಿಸಿದ್ದಾರೆ. ತುಮಕೂರಿನ ಹೆಚ್ ಎಎಲ್ ಹೆಲಿಕಾಪ್ಟರ್ ಫ್ಯಾಕ್ಟರಿ ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಸೌಲಭ್ಯ ಹೊಂದಿದ್ದು, ಪ್ರಾರಂಭದಲ್ಲಿ ಹೆಚ್ಚಿನ ಕುಶಲತೆಯ ಏಕ-ಎಂಜಿನ್ ನ ಹಗುರ ಹೆಲಿಕಾಪ್ಟರ್ ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಭವಿಷ್ಯದಲ್ಲಿ ಲಘು ಯುದ್ಧ ಹೆಲಿಕಾಪ್ಟರ್ ತಯಾರಿಸಲು ಕಾರ್ಖಾನೆಯನ್ನು ವಿಸ್ತರಿಸಲಾಗುತ್ತದೆ.
ಇವೆಲ್ಲವುಗಳ ಹೊರತಾಗಿ 430 ಕೋಟಿ ವೆಚ್ಚದ ತಿಪಟೂರು ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.