ಪ್ರತಿಭಟನಾಕಾರರನ್ನು ಬೆಂಗಳೂರು ಪೊಲೀಸರು ನಿಭಾಯಿಸಿದ ರೀತಿಯ ಪರಿಶೀಲನೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಅಕ್ಟೋಬರ್ 12ರಂದು ಪ್ರತಿಭಟನಾಕಾರರನ್ನು ಬೆಂಗಳೂರು ಪೊಲೀಸರು ನಿಭಾಯಿಸಿದ ರೀತಿಯನ್ನು ಪರಿಶೀಲಿಸಲಾಗುವುದು ಎಂದು ಗೃಹ, ಇ-ಆಡಳಿತ, ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಶಾಂತಿಯುತ ಪ್ರತಿಭಟನೆಗಳಿಗೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿಯೂ ಅವರು ಹೇಳಿದ್ದಾರೆ.
ಅಕ್ಟೋಬರ್ 13ರ ಹೇಳಿಕೆಯಲ್ಲಿ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಗೌರವಿಸಿ, ರಕ್ಷಿಸಬೇಕು ಎಂದು ಖರ್ಗೆ ಪ್ರತಿಪಾದಿಸಿದ್ದಾರೆ. ಪ್ರತಿಭಟನಾಕಾರರು ಪೊಲೀಸರೊಂದಿಗೆ ಸಹಕರಿಸಿ, ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದರಿಂದ ಅವರ ಸುರಕ್ಷತೆ ಹಾಗೂ ಇತರರ ಹಕ್ಕುಗಳನ್ನೂ ಕಾಪಾಡಲು ಸಾಧ್ಯವಾಗಲಿದೆ ಎಂದು ಮನವಿ ಮಾಡಿದ್ದಾರೆ.
“ನಿಮ್ಮ ಹಕ್ಕುಗಳನ್ನು ರಕ್ಷಿಸಲು ಪೊಲೀಸರು ಇದ್ದಾರೆ, ನಿಮ್ಮ ಧ್ವನಿಗೆ ಅಡ್ಡಿಯಾಗಲು ಅಲ್ಲ” ಎಂದು ಅವರು ಹೇಳಿದ್ದಾರೆ.
ಸರ್ಕಾರದ ಹೊಣೆಗಾರಿಕೆ ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಪ್ರತಿಯೊಬ್ಬ ನಾಗರಿಕರೂ ಮುಕ್ತವಾಗಿ, ಶಾಂತಿಯುತವಾಗಿ ಹಾಗೂ ಭಯವಿಲ್ಲದೆ ಭಿನ್ನಮತ ವ್ಯಕ್ತಪಡಿಸಬಹುದಾದ ವಾತಾವರಣ ಸೃಷ್ಟಿಸುವುದೂ ಅದರ ಜವಾಬ್ದಾರಿ ಎಂದು ಖರ್ಗೆ ತಿಳಿಸಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಭಿನ್ನಮತ ಕಾನೂನು ಸುವ್ಯವಸ್ಥೆಗೆ ಬೆದರಿಕೆಯಲ್ಲ. ಅದು ಕಾನೂನು ಸುವ್ಯವಸ್ಥೆ ರಕ್ಷಿಸಬೇಕಾದ ಹಕ್ಕು” ಎಂದು ಅವರು ಪ್ರತಿಪಾದಿಸಿದ್ದಾರೆ.
