ಬೆಂಗಳೂರು, ಜೂನ್ 4: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮಹತ್ವದ ಹೆಜ್ಜೆಯಿಡಲು ಮುಂದಾಗಿದೆ. ಬೆಂಗಳೂರನ್ನು ಜಾಗತಿಕ ಮಟ್ಟದ ಜಲ-ನಾವೀನ್ಯತಾ ಹಾಗೂ ಜಲ-ಭದ್ರತಾ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ‘ಬೆಂಗಳೂರು ಗ್ಲೋಬಲ್ ವಾಟರ್ ಇನ್ನೋವೇಷನ್ ನೆಟ್ವರ್ಕ್’ (BGWIN – ಬಿ-ಗ್ವಿನ್) ಸ್ಥಾಪನೆಗೆ ಜಲಮಂಡಳಿ ಚಿಂತನೆ ನಡೆಸಿದೆ.
ಜಲ ಮತ್ತು ಒಳಚರಂಡಿ ವಲಯದ ಸವಾಲುಗಳಿಗೆ ಜಾಗತಿಕ ಮಟ್ಟದ ಪರಿಹಾರಗಳನ್ನು ಕಂಡುಹಿಡಿಯುವ ಉದ್ದೇಶದಿಂದ ರೂಪಿಸಲಾಗುತ್ತಿರುವ ಬಿ-ಗ್ವಿನ್ ವೇದಿಕೆ, ವಿಶ್ವದ ಜಲ ನಿರ್ವಹಣಾ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು, ಕೈಗಾರಿಕಾ ನಾಯಕರು, ಸ್ಟಾರ್ಟ್ಅಪ್ಗಳು, ಇನ್ಕ್ಯುಬೇಟರ್ಗಳು ಹಾಗೂ ನಾಗರಿಕ ಸಮಾಜದ ಸಂಘಟನೆಗಳನ್ನು ಒಂದೇ ವೇದಿಕೆಗೆ ತರಲಿದೆ.
ಈ ಉಪಕ್ರಮದ ದೀರ್ಘಕಾಲದ ಗುರಿ ಬೆಂಗಳೂರನ್ನು ಜಾಗತಿಕವಾಗಿ ಗುರುತಿಸಲ್ಪಟ್ಟ ಜಲ-ನಾವೀನ್ಯತಾ ಕೇಂದ್ರವನ್ನಾಗಿ ಹಾಗೂ ಜಲ ಭದ್ರತೆಯ ಮಾದರಿ ನಗರವನ್ನಾಗಿ ರೂಪಿಸುವುದಾಗಿದೆ. ಹೊಸ ತಂತ್ರಜ್ಞಾನಗಳ ಅಳವಡಿಕೆ, ಅಂತರರಾಷ್ಟ್ರೀಯ ಮಟ್ಟದ ಉತ್ತಮ ಪದ್ಧತಿಗಳ ಅನುಸರಣೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯ ಮೂಲಕ ಬೆಂಗಳೂರನ್ನು ಜಲ ಸಂಶೋಧನೆ ಮತ್ತು ನೀತಿ ರೂಪಿಸುವ ಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿ ಬೆಳೆಸುವುದು ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯ ಪ್ರಮುಖ ಭಾಗವಾಗಿ ಅತ್ಯಾಧುನಿಕ ‘ಉತ್ಕೃಷ್ಟತಾ ಕೇಂದ್ರ’ (Centre of Excellence) ಸ್ಥಾಪಿಸಲಾಗುತ್ತಿದ್ದು, ಇಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಮುನ್ಸೂಚನಾ ವಿಶ್ಲೇಷಣೆ, ಸ್ಮಾರ್ಟ್ ಮೀಟರಿಂಗ್, ವಿಕೇಂದ್ರೀಕೃತ ನೀರು ಸಂಸ್ಕರಣಾ ವ್ಯವಸ್ಥೆಗಳು, ನೀರಿನ ಮರುಬಳಕೆ ಹಾಗೂ ಸುಸ್ಥಿರ ಜಲ ನಿರ್ವಹಣೆಗೆ ಸಂಬಂಧಿಸಿದ ಸಂಶೋಧನೆಗಳಿಗೆ ಉತ್ತೇಜನ ನೀಡಲಾಗುತ್ತದೆ.
ಶೈಕ್ಷಣಿಕ ಸಂಸ್ಥೆಗಳು, ಜಾಗತಿಕ ಜಲ ಸಂಸ್ಥೆಗಳು, ಸರ್ಕಾರ ಹಾಗೂ ಕೈಗಾರಿಕಾ ವಲಯದ ತಜ್ಞರು ಒಟ್ಟಾಗಿ ಕುಡಿಯುವ ನೀರಿನ ಶುದ್ಧೀಕರಣ, ತ್ಯಾಜ್ಯ ನೀರಿನ ಸಂಸ್ಕರಣೆ ಹಾಗೂ ಮರುಬಳಕೆಯ ತಂತ್ರಜ್ಞಾನಗಳ ಅಭಿವೃದ್ಧಿಗೆ ಕೈಜೋಡಿಸಲಿದ್ದಾರೆ.
ಹೊಸ ತಂತ್ರಜ್ಞಾನಗಳನ್ನು ನಗರಾದ್ಯಂತ ಜಾರಿಗೆ ತರುವ ಮುನ್ನ ಸಣ್ಣ ಪ್ರಮಾಣದ ಪೈಲಟ್ ಯೋಜನೆಗಳ ಮೂಲಕ ಪರೀಕ್ಷಿಸಿ ಅವುಗಳ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವ ಕಾರ್ಯತಂತ್ರವನ್ನು ಜಲಮಂಡಳಿ ಅನುಸರಿಸಲಿದೆ. ಇದರಿಂದ ಹೂಡಿಕೆ ಅಪಾಯ ಕಡಿಮೆಯಾಗುವುದರ ಜೊತೆಗೆ ಸಂಶೋಧನೆಯಿಂದ ಸೃಷ್ಟಿಯಾಗುವ ಬೌದ್ಧಿಕ ಆಸ್ತಿ ಹಕ್ಕುಗಳ ಮೂಲಕ ಹೊಸ ಆದಾಯದ ಅವಕಾಶಗಳೂ ಸೃಷ್ಟಿಯಾಗಲಿವೆ.
ಬಿ-ಗ್ವಿನ್ ಮೂಲಕ ಜಾಗತಿಕ ತಂತ್ರಜ್ಞಾನ ಪೂರೈಕೆದಾರರಿಗೆ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಬೆಂಗಳೂರು ಅತ್ಯುತ್ತಮ ಪ್ರಾಯೋಗಿಕ ತಾಣವಾಗಲಿದೆ. ಇದರಿಂದ ಅಂತರರಾಷ್ಟ್ರೀಯ ಸಹಭಾಗಿತ್ವ ಹೆಚ್ಚುವ ನಿರೀಕ್ಷೆಯಿದ್ದು, ಜಲಮಂಡಳಿಯ ಆಧುನೀಕರಣ ಹಾಗೂ ವೆಚ್ಚ ಕಡಿತಕ್ಕೂ ನೆರವಾಗಲಿದೆ.
ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ಸಹಯೋಗದ ಮೂಲಕ ಹೊಸ ನೀತಿಗಳು ಹಾಗೂ ನಿಯಂತ್ರಣ ಚೌಕಟ್ಟುಗಳ ರೂಪುಗೊಳಿಸುವಿಕೆಯೂ ಯೋಜನೆಯ ಭಾಗವಾಗಿರಲಿದೆ.
ಜಲ ವಲಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಕೌಶಲ್ಯ ವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ವಿಶೇಷ ತರಬೇತಿ ಕಾರ್ಯಕ್ರಮಗಳು, ತಾಂತ್ರಿಕ ಕಾರ್ಯಾಗಾರಗಳು, ಸಮ್ಮೇಳನಗಳು ಹಾಗೂ ವೃತ್ತಿಪರ ಕೋರ್ಸ್ಗಳನ್ನು ಆಯೋಜಿಸಲಾಗುತ್ತದೆ. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವಿಕೆ, ಸರ್ಕ್ಯುಲರ್ ಎಕಾನಮಿ ಮತ್ತು ಡಿಜಿಟಲ್ ಟ್ರಾನ್ಸ್ಫಾರ್ಮೇಷನ್ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ತರಬೇತಿ ನೀಡಲಾಗುತ್ತದೆ.
ಇದರ ಜೊತೆಗೆ ತಂತ್ರಜ್ಞಾನ ಪೂರೈಕೆದಾರರು ಹಾಗೂ ಬಳಕೆದಾರರನ್ನು ಸಂಪರ್ಕಿಸುವ ಡಿಜಿಟಲ್ ವೇದಿಕೆಯನ್ನೂ ಅಭಿವೃದ್ಧಿಪಡಿಸಲಾಗುತ್ತಿದ್ದು, ಪೈಲಟ್ ಯೋಜನೆಗಳ ನೈಜ-ಸಮಯದ ಮೇಲ್ವಿಚಾರಣೆ ಮತ್ತು ಜ್ಞಾನ ಹಂಚಿಕೆಗೆ ಇದು ನೆರವಾಗಲಿದೆ.
ಯೋಜನೆಯ ದೀರ್ಘಕಾಲೀನ ಯಶಸ್ಸಿಗಾಗಿ ಅಂತರರಾಷ್ಟ್ರೀಯ ಧನಸಹಾಯ ಸಂಸ್ಥೆಗಳು, ದಾನಿ ಸಂಘಟನೆಗಳು, ಸರ್ಕಾರಿ ಅನುದಾನಗಳು ಹಾಗೂ ಖಾಸಗಿ ವಲಯದ ಸಹಭಾಗಿತ್ವದೊಂದಿಗೆ ವೈವಿಧ್ಯಮಯ ಆರ್ಥಿಕ ಮಾದರಿಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ವಾರ್ಷಿಕ ಚಂದಾದಾರಿಕೆ, ಪಾವತಿ ಆಧಾರಿತ ತರಬೇತಿ ಕಾರ್ಯಕ್ರಮಗಳು ಮತ್ತು ಜಾಗತಿಕ ಕಾರ್ಯಾಗಾರಗಳ ಮೂಲಕವೂ ಆದಾಯ ಗಳಿಸುವ ವ್ಯವಸ್ಥೆ ಇರಲಿದೆ.
ಒಟ್ಟಾರೆಯಾಗಿ, ಈ ಮಹತ್ವಾಕಾಂಕ್ಷೆಯ ಯೋಜನೆಯು ಬೆಂಗಳೂರು ಜಲಮಂಡಳಿಯನ್ನು ದತ್ತಾಂಶ ಆಧಾರಿತ, ತಂತ್ರಜ್ಞಾನ ಚಾಲಿತ ಹಾಗೂ ಸಂಪೂರ್ಣ ಸುಸ್ಥಿರ ‘ಭವಿಷ್ಯದ ಜಲ ಸಂಸ್ಥೆ’ಯಾಗಿ ರೂಪಿಸುವ ಗುರಿ ಹೊಂದಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳುವಂತೆ, “ಸುರಕ್ಷಿತ ಜಲ ಭವಿಷ್ಯವೇ ಬೆಂಗಳೂರಿನಂತಹ ಬಲಿಷ್ಠ ಮಹಾನಗರದ ತಳಪಾಯವಾಗಿದೆ. ಬಿ-ಗ್ವಿನ್ ಜಾಲದ ಮೂಲಕ ಬೆಂಗಳೂರನ್ನು ಜಾಗತಿಕ ಜಲ-ನಾವೀನ್ಯತಾ ಕೇಂದ್ರವನ್ನಾಗಿ ರೂಪಿಸುತ್ತಿದ್ದು, ಇದು ಬ್ರ್ಯಾಂಡ್ ಬೆಂಗಳೂರು ಕನಸನ್ನು ಸಾಕಾರಗೊಳಿಸುವ ಐತಿಹಾಸಿಕ ಹೆಜ್ಜೆಯಾಗಿದೆ.”
ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು, “ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಬೆಂಗಳೂರನ್ನು ಜಾಗತಿಕ ಜಲ-ಭದ್ರತೆಯ ಮಾದರಿ ನಗರವನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ. ಬಿ-ಗ್ವಿನ್ ಮೂಲಕ ಯುವ ಸ್ಟಾರ್ಟ್ಅಪ್ಗಳು ಮತ್ತು ಜಾಗತಿಕ ತಂತ್ರಜ್ಞಾನಗಳ ಪ್ರಾಯೋಗಿಕ ಅಳವಡಿಕೆಗೆ ಬೆಂಗಳೂರು ಪ್ರಮುಖ ಕೇಂದ್ರವಾಗಲಿದೆ,” ಎಂದು ತಿಳಿಸಿದ್ದಾರೆ.
