ಬೆಂಗಳೂರು, ಜೂನ್ 4: ಜನಪರ ಆಡಳಿತ, ಗ್ರಾಮೀಣ ಆರ್ಥಿಕತೆ ಬಲವರ್ಧನೆ, ಶಿಕ್ಷಣ ಕ್ಷೇತ್ರದ ಸುಧಾರಣೆ, ಯುವಕರಿಗೆ ಉದ್ಯೋಗಾವಕಾಶ, ಕಾನೂನು ಸುವ್ಯವಸ್ಥೆ ಬಲಪಡಿಸುವುದು ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ಆದ್ಯತೆ ನೀಡುವ ಮಹತ್ವದ ನಿರ್ಧಾರಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ವಿಧಾನಸೌಧದಲ್ಲಿ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ತಳಮಟ್ಟದ ಅಧಿಕಾರಿಗಳೇ ಸರ್ಕಾರದ ಮುಖವಾಗಿದ್ದು, ಜನರಲ್ಲಿ ವಿಶ್ವಾಸ ಮೂಡಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ಹೇಳಿದರು.
“ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯ,” ಎಂದು ಮುಖ್ಯಮಂತ್ರಿ ಹೇಳಿದರು.
ಕೇಂದ್ರ ಸ್ಥಾನದಲ್ಲೇ ಅಧಿಕಾರಿಗಳ ವಾಸ್ತವ್ಯ ಕಡ್ಡಾಯ
ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲೇ ವಾಸ್ತವ್ಯ ಮಾಡಬೇಕು ಎಂದು ಸೂಚಿಸಿದ ಮುಖ್ಯಮಂತ್ರಿ, ಈ ನಿಯಮದ ಕಟ್ಟುನಿಟ್ಟಿನ ಅನುಷ್ಠಾನ ಕುರಿತು ಮುಖ್ಯ ಕಾರ್ಯದರ್ಶಿಯಿಂದ ವರದಿ ಕೇಳಿದರು.
ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿದ್ದು ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂದು ಸೂಚಿಸಿದರು.
ಒತ್ತಡಗಳಿಗೆ ಮಣಿಯದೆ ಕಾನೂನು ಪ್ರಕಾರ ಕೆಲಸ ಮಾಡಿ
ರಾಜ್ಯದ ಅಧಿಕಾರಿಗಳು ದೇಶದಲ್ಲೇ ಅತ್ಯುತ್ತಮರೆಂಬ ಹೆಗ್ಗಳಿಕೆ ಹೊಂದಿದ್ದಾರೆ ಎಂದು ಹೇಳಿದ ಸಿಎಂ, ಪ್ರಾಮಾಣಿಕತೆ ಹಾಗೂ ಕಾನೂನುಬದ್ಧ ಕಾರ್ಯನಿರ್ವಹಣೆಗೆ ಆದ್ಯತೆ ನೀಡುವಂತೆ ಸೂಚಿಸಿದರು.
“ಯಾವುದೇ ಒತ್ತಡಕ್ಕೆ ಮಣಿದು ಕಾನೂನುಬಾಹಿರ ಕೆಲಸಗಳಿಗೆ ಬೆಂಬಲ ನೀಡಬೇಡಿ. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೆ ನೇರವಾಗಿ ನನಗೆ ಅಥವಾ ಸಂಬಂಧಿಸಿದ ಸಚಿವರಿಗೆ ತಿಳಿಸಿ,” ಎಂದು ಹೇಳಿದರು.
ತಾಲೂಕು ಮಟ್ಟಕ್ಕೆ ಆಡಳಿತ ಕೊಂಡೊಯ್ಯಲು ಸೂಚನೆ
ಎಲ್ಲಾ ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ತಾಲೂಕು ಮಟ್ಟಕ್ಕೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಿ ಪರಿಹರಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ಈ ಕುರಿತು ವರದಿಗಳನ್ನು ನೇರವಾಗಿ ತಮ್ಮ ಕಚೇರಿಗೆ ಸಲ್ಲಿಸುವಂತೆ ತಿಳಿಸಿದರು. ಜೊತೆಗೆ ಸಚಿವರೂ ತಾಲೂಕು ಮಟ್ಟದ ಪ್ರವಾಸಗಳನ್ನು ನಡೆಸಿ ಜನರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದರು.
ಗ್ರಾಮೀಣ ಆರ್ಥಿಕತೆಗೆ ವಿಶೇಷ ಒತ್ತು
ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಲಿದೆ ಎಂದು ಸಿಎಂ ಹೇಳಿದರು.
ಬಜೆಟ್ನಲ್ಲಿ ಘೋಷಿಸಲಾದ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಇಲಾಖೆಗಳಿಗೆ ಸೂಚನೆ ನೀಡಿದರು.
50 ಸಾವಿರ ಶಿಕ್ಷಕರ ಕೊರತೆ ಭರ್ತಿ
ರಾಜ್ಯದಲ್ಲಿ ಸುಮಾರು 50 ಸಾವಿರ ಶಿಕ್ಷಕರ ಕೊರತೆಯಿದ್ದು, ಹಂತ ಹಂತವಾಗಿ ಶಿಕ್ಷಕರ ನೇಮಕಾತಿ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಸುಧಾರಣೆ ತರಲು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಸಮರ್ಪಕವಾಗಿ ಬಳಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು
ಬೆಂಗಳೂರು ನಗರದಲ್ಲಿ 26 ಲಕ್ಷಕ್ಕೂ ಹೆಚ್ಚು ಐಟಿ ವೃತ್ತಿಪರರು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿ 70 ವೈದ್ಯಕೀಯ ಕಾಲೇಜುಗಳಿವೆ ಎಂದು ಸ್ಮರಿಸಿದ ಮುಖ್ಯಮಂತ್ರಿ, ವಿಶ್ವವೇ ಬೆಂಗಳೂರಿನತ್ತ ಗಮನ ಹರಿಸುತ್ತಿದೆ ಎಂದರು.
“ಇಂತಹ ಬೆಂಗಳೂರಿನ ಅಭಿವೃದ್ಧಿಗೆ ನಮ್ಮ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬ ಅಧಿಕಾರಿ ಆತ್ಮಾವಲೋಕನ ಮಾಡಿಕೊಳ್ಳಬೇಕು,” ಎಂದು ಹೇಳಿದರು.
ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
ಇದುವರೆಗೆ ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತವಾಗಿದ್ದ ಉಚಿತ ಬಸ್ ಪಾಸ್ ಸೌಲಭ್ಯವನ್ನು ಈಗ ಎಲ್ಲಾ ವಿದ್ಯಾರ್ಥಿಗಳಿಗೆ ವಿಸ್ತರಿಸುವ ನಿರ್ಧಾರವನ್ನು ಸರ್ಕಾರ ಈಗಾಗಲೇ ಕೈಗೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಯೋಜನೆಯನ್ನು ಶೀಘ್ರ ಜಾರಿಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಖಾಸಗಿ ಉದ್ಯೋಗಗಳಿಗೆ ಉದ್ಯೋಗ ವಿನಿಮಯ ಕೇಂದ್ರ
ಖಾಸಗಿ ವಲಯದಲ್ಲಿನ ಉದ್ಯೋಗಾವಕಾಶಗಳನ್ನು ರಾಜ್ಯದ ಯುವಜನತೆಗೆ ತಲುಪಿಸಲು ವಿಶೇಷ ಉದ್ಯೋಗ ವಿನಿಮಯ ಕೇಂದ್ರವನ್ನು ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಖಾಸಗಿ ಕಂಪನಿಗಳ ಉದ್ಯೋಗಾವಕಾಶಗಳನ್ನು ಯುವಕ-ಯುವತಿಯರಿಗೆ ವ್ಯವಸ್ಥಿತವಾಗಿ ಒದಗಿಸುವ ವ್ಯವಸ್ಥೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
₹1,000 ಕೋಟಿ ವೆಚ್ಚದಲ್ಲಿ 10 ಸಾವಿರ ಭಾರತ್ ಜೋಡೋ ಯುವ ಸಂಘ ಕ್ಲಬ್ಗಳು
ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೋ ಯುವ ಸಂಘ ಕ್ಲಬ್ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು.
