ಬೆಂಗಳೂರು ಶಾಕ್: ವೈಟ್ಫೀಲ್ಡ್ನಲ್ಲಿ 14 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ
ಬೆಂಗಳೂರು: ನಗರದ ವೈಟ್ಫೀಲ್ಡ್ ಸಮೀಪದ ಇಮ್ಮಡಿಹಳ್ಳಿಯಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, 40 ವರ್ಷದ ತಾಯಿ ತನ್ನ 14 ವರ್ಷದ ಮಗಳನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ ತಾಯಿ ಸುರ್ಣಾ ಹಾಗೂ ಮಗಳು ಕಾರುಣ್ಯ ಎಂದು ಗುರುತಿಸಲಾಗಿದೆ. ತಾಯಿ ಮೊದಲು ಮಗಳನ್ನು ಉಸಿರುಗಟ್ಟಿಸಿ ಕೊಂದು, ನಂತರ ಮನೆಯೊಳಗಿನ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ.
ಈ ಘಟನೆ ಇಂದು ಬೆಳಗ್ಗೆ ಸುಮಾರು 11:30ರ ವೇಳೆಗೆ ಬೆಳಕಿಗೆ ಬಂದಿದ್ದು, ಮನೆಯಲ್ಲಿದ್ದ ಅತ್ತೆ-ಮಾವರು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸಂಭವಿಸಿದ ವೇಳೆ ಪತಿ ಚಂದ್ರಶೇಖರ್ ಕೆಲಸಕ್ಕೆ ಹೋಗಿದ್ದರೆಂದು ತಿಳಿದುಬಂದಿದೆ.
ವೈಟ್ಫೀಲ್ಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಫರೆನ್ಸಿಕ್ ತಂಡವೂ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯ ಸಂಗ್ರಹ ಕಾರ್ಯ ಕೈಗೊಂಡಿದೆ. ಸುವರ್ಣ ಅವರು ಯಾವುದೇ ಡೆತ್ ನೋಟ್ ಬರೆದಿದ್ದಾರೆಯೇ ಎಂಬುದರ ಕುರಿತಾಗಿ ಕೂಡ ತನಿಖೆ ನಡೆಯುತ್ತಿದೆ.
ಪ್ರಾಥಮಿಕವಾಗಿ ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗುತ್ತಿದೆ. ಆದರೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ನಗರದಲ್ಲಿ ಸಂಚಲನ ಮೂಡಿಸಿದ್ದು, ತಾಯಿ ತನ್ನದೇ ಮಗಳ ಮೇಲೆ ಇಂತಹ ಕೃತ್ಯಕ್ಕೆ ಏಕೆ ಮುಂದಾದರು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
