ಪರಪ್ಪನ ಅಗ್ರಹಾರ ಜೈಲಿನಲ್ಲಿ ಉದ್ವಿಗ್ನತೆ: ಮೊಬೈಲ್ ಪತ್ತೆ ಬಳಿಕ ಕೈದಿಗಳ ಮೇಲೆ ಲಘು ಲಾಠಿ ಚಾರ್ಜ್, ಎಫ್ಐಆರ್ ದಾಖಲು
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮತ್ತು ಜೈಲು ಸಿಬ್ಬಂದಿ ನಡುವೆ ಉದ್ವಿಗ್ನತೆ ಉಂಟಾಗಿ, ಪರಿಸ್ಥಿತಿ ನಿಯಂತ್ರಣಕ್ಕೆ ಜೈಲು ಸಿಬ್ಬಂದಿ ಲಘು ಲಾಠಿ ಚಾರ್ಜ್ ನಡೆಸಿದ ಘಟನೆ ನಡೆದಿದೆ.
ಟವರ್-1ರ ವಿಚಾರಣಾ ಬಂಧಿಗಳ ವಿಭಾಗದ ಕೊಠಡಿ ಸಂಖ್ಯೆ 5ರಲ್ಲಿ ಈ ಘಟನೆ ನಡೆದಿದ್ದು, ಅಚ್ಚರಿ ತಪಾಸಣೆ ವೇಳೆ ಕೈದಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉದ್ವಿಗ್ನತೆ ಉಂಟಾಯಿತು ಎಂದು ಮೂಲಗಳು ತಿಳಿಸಿವೆ.
ಜೈಲಿನೊಳಗೆ ಮೊಬೈಲ್ ಫೋನ್ ಬಳಸಿ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು ಎನ್ನಲಾಗಿದ್ದು, ಈ ಹಿನ್ನೆಲೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಜೈಲು ಅಧೀಕ್ಷಕ ಕರ್ಣ ಕ್ಷತ್ರಿ ನೇತೃತ್ವದಲ್ಲಿ ಸುಮಾರು 10 ಮೊಬೈಲ್ ಫೋನ್ಗಳು ಪತ್ತೆಯಾಗಿವೆ.
ತಪಾಸಣೆ ವೇಳೆ ಕೆಲ ಕೈದಿಗಳು ಜೈಲು ಅಧಿಕಾರಿಗಳ ಮೇಲೆ ದಾಳಿ ಮಾಡಲು ಯತ್ನಿಸಿದ ಕಾರಣ, ಪರಿಸ್ಥಿತಿಯನ್ನು ನಿಯಂತ್ರಿಸಲು ಜೈಲು ಸಿಬ್ಬಂದಿ ಲಘು ಲಾಠಿ ಪ್ರಹಾರ ನಡೆಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಇನಾಕ್ ಜಾಯ್, ಓಕೋ ಆರೇಂಜ್ ಪ್ಯಾಟ್ರಿಕ್, ಕೊರಿಲ್ ಡೇನಿಯಲ್ ಮತ್ತು ಥಾಮಸ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಜೈಲಿನೊಳಗೆ ಮೊಬೈಲ್ಗಳು ಹೇಗೆ ತಲುಪಿದವು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಭದ್ರತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸಲಾಗಿದೆ.
